Quick Summary
This article highlights: ಸಿಜೆಐ ಕುರಿತು ಅವಹೇಳನಕಾರಿ, ಬೆದರಿಕೆ ಕಾಮೆಂಟ್: ಬೆಂಗಳೂರಿನ ಸೈಬರ್ ಕ್ರೈಮ್ ಠಾಣೆಯಲ್ಲಿ ಎಫ್ಐಆರ್. In context: ಬೆಂಗಳೂರು: ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ ಆರ್. Stay tuned with The Headline World for more insights and details.
ಬೆಂಗಳೂರು: ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ್ದ ಐದು ಖಾತೆಗಳ ವಿರುದ್ಧ ಬೆಂಗಳೂರಿನ ಸೈಬರ್ ಕ್ರೈಮ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕೇಸರಿ ನಂದನ್, ಶ್ರೀಧರ್ ಕುಮಾರ್, ನಾಗೇಂದ್ರ ಪ್ರಸಾದ್, ರಮೇಶ್ ನಾಯ್ಕ್ ಹಾಗೂ ಮಂಜುನಾಥ್ ಎಂ.ಸಿ ಮಂಜು ಹೆಸರಿನ ಖಾತೆಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ 67, 66 ಹಾಗೂ 66(C), ಭಾರತೀಯ ನ್ಯಾಯ ಸಂಹಿತೆ 352ರಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇತ್ತೀಚಿನ ಪ್ರಕರಣವೊಂದರ ಕುರಿತು ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದ ಆರೋಪಿಗಳು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಕುರಿತು ಕೆಟ್ಟದಾಗಿ ಹಾಗೂ ಬೆದರಿಕೆಯೊಡ್ಡುವಂಥಹ ಕಾಮೆಂಟ್ ಪ್ರಕಟಿಸಿದ್ದರು. ಇದನ್ನು ಗಮನಿಸಿದ್ದ ಸೈಬರ್ ಕ್ರೈಮ್‌ನ ಸಾಮಾಜಿಕ ಜಾಲತಾಣ ವಿಭಾಗದ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆ ವಕೀಲರೊಬ್ಬರು ವಸ್ತುವೊಂದನ್ನು ಎಸೆಯಲು ಯತ್ನಿಸಿದ ಘಟನೆಯನ್ನು ಖಂಡಿಸಿ ದೇಶದ ವಿವಿಧೆಡೆ ಖಂಡನೆ ವ್ಯಕ್ತವಾಗಿತ್ತು. ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಜ್ಞಾನಭಾರತಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿತ್ತು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಭೂಷಣ್ ಆರ್ ಗವಾಯಿ ಅವರತ್ತ ವಕೀಲರೊಬ್ಬರು ವಸ್ತುವೊಂದನ್ನು ಎಸೆದ ಘಟನೆ ಅ. 6ರಂದು ನಡೆದಿತ್ತು. ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣಗಳ ಪ್ರಸ್ತಾಪದ ಸಮಯದಲ್ಲಿ ಈ ಘಟನೆ ನಡೆದಿತ್ತು. ತಕ್ಷಣವೇ ಮಧ್ಯಪ್ರವೇಶಿಸಿದ್ದ ಭದ್ರತಾ ಸಿಬ್ಬಂದಿ ವಕೀಲರನ್ನು ನ್ಯಾಯಾಲಯದ ಕೊಠಡಿಯಿಂದ ಹೊರಗೆ ಕರೆದೊಯ್ದಿದ್ದರು. ಸಿಜೆಐ ಅವರತ್ತ ವಸ್ತುವೊಂದನ್ನು ಎಸೆದ ವಕೀಲ ರಾಕೇಶ್ ಕಿಶೋರ್, ನ್ಯಾಯಾಲಯದಿಂದ ಹೊರಹೋಗುವ ಸಂದರ್ಭದಲ್ಲಿ "ಸನಾತನ ಸಂಸ್ಥೆಗೆ ಯಾವುದೇ ಅವಮಾನವನ್ನು ನಾವು ಸಹಿಸುವುದಿಲ್ಲ" ಎಂದು ಕೂಗಿದ್ದರು.
ಘಟನೆಯಿಂದಾಗಿ ಕೆಲಕಾಲ ಕೋರ್ಟ್ನಲ್ಲಿ ಗದ್ದಲ ಉಂಟಾಗಿತ್ತು. ಆದರೆ ಸಿಜೆಐ ಅವರು ಮಾತ್ರ ವಿಚಲಿತರಾಗದೆ ಶಾಂತ ರೀತಿಯಿಂದ ವರ್ತಿಸಿ, ಕಲಾಪ ಮುಂದುವರಿಸುವಂತೆ ಸೂಚಿಸಿದ್ದರು. 'ಇದರಿಂದ ವಿಚಲಿತರಾಗಬೇಡಿ. ನಾವು ವಿಚಲಿತರಾಗುವುದಿಲ್ಲ. ಈ ರೀತಿಯ ಘಟನೆಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ' ಎನ್ನುವ ಮಾತನ್ನು ಕೂಡ ಸಿಜೆಐ ಹೇಳಿದ್ದರು. ಆ ನಂತರದಲ್ಲಿ ಘಟನೆಯ ಬಗ್ಗೆ ಮಾತನಾಡಿದ್ದ ಸಿಜೆಐ ಗವಾಯಿ ಅವರು, ವಕೀಲರೊಬ್ಬರು ನನ್ನ ಮೇಲೆ ವಸ್ತುವೊಂದನ್ನು ಎಸೆಯಲು ಯತ್ನಿಸಿದಾ ನಾನು ಹಾಗೂ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅಘಾತಕ್ಕೊಳಗಾದೆವು. ಆದರೆ ಅದು ಈಗ ಮರೆತು ಹೋದ ಅಧ್ಯಾಯ ಎನ್ನುವ ಹೇಳಿಕೆಯನ್ನೂ ನೀಡಿದ್ದರು.
Content compiled and formatted by TheHeadlineWorld editorial team.







