ಅಂಬಾಲ(ಹರಿಯಾಣ):ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದು ಅಂಬಾಲಾ ವಾಯುಸೇನಾ ನೆಲೆಯಿಂದ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು. ಈ ವೇಳೆ ಪಾಕಿಸ್ತಾನವು ಸೆರೆಹಿಡಿದಿರುವುದಾಗಿ ಹೇಳಿಕೊಂಡಿದ್ದ ಸ್ಕ್ವಾಡ್ರನ್ ಲೀಡರ್ ಶಿವಾಂಗಿ ಸಿಂಗ್ ಅವರನ್ನು ದ್ರೌಪದಿ ಮುರ್ಮು ಭೇಟಿಯಾಗಿದ್ದು, ಫೋಟೋ ಬಿಡುಗಡೆಯಾಗಿದೆ. ಆಪರೇಷನ್ ಸಿಂಧೂರ್ ವೇಳೆ ಭಾರತದ ಫೈಟರ್ ಜೆಟ್ ಅನ್ನು ಹೊಡೆದುರುಳಿಸಿ ಶಿವಾಂಗಿ ಸಿಂಗ್ ಅವರನ್ನು ಸೆರೆ ಹಿಡಿದಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿತ್ತು. ಪಾಕಿಸ್ತಾನಿ ಮಾಧ್ಯಮಗಳು ಶಿವಾಂಗಿ ಸಿಂಗ್ ಅವರನ್ನು ಯುದ್ಧ ಕೈದಿ ಎಂದು ಬಣ್ಣಿಸಿದ್ದವು. ಆದರೆ ಇದೀಗ ರಾಷ್ಟ್ರಪತಿಯೊಂದಿಗೆ ಶಿವಾಂಗಿ ಸಿಂಗ್ ಇರುವ ಫೋಟೋ ಬಿಡುಗಡೆ ಮೂಲಕ ಪಾಕಿಸ್ತಾನದ ಎಲ್ಲಾ ಸುಳ್ಳುಗಳನ್ನು ಭಾರತ ಬಹಿರಂಗಪಡಿಸಿದೆ.
ಶಿವಾಂಗಿ ಸಿಂಗ್ ಯಾರು? ಸ್ಕ್ವಾಡ್ರನ್ ಲೀಡರ್ ಶಿವಾಂಗಿ ಸಿಂಗ್ ಉತ್ತರ ಪ್ರದೇಶದ ವಾರಣಾಸಿಯವರು. ಶಿವಾಂಗಿ ಸಿಂಗ್ ಅವರು MiG-21 ಹಾರಿಸುವ ಮೂಲಕ ತಮ್ಮ ಫೈಟರ್ ಪೈಲಟ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ರಫೇಲ್ ನಂತಹ ಅತ್ಯಾಧುನಿಕ ಯುದ್ಧ ವಿಮಾನ ಹಾರಿಸಿದ ಭಾರತೀಯ ವಾಯುಪಡೆಯ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಶಿವಾಂಗಿ ಸಿಂಗ್ ಪಾತ್ರರಾಗಿದ್ದಾರೆ. ಶಿವಾಂಗಿ ಸಿಂಗ್ ಅವರು ಅಂಬಾಲಾದಲ್ಲಿ "ಗೋಲ್ಡನ್ ಆರೋಸ್" ಸ್ಕ್ವಾಡ್ರನ್‌ನ ಭಾಗವಾಗಿದ್ದರು. ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನ ನಡೆಸಿದ್ದ ದಾಳಿಗೆ ಭಾರತ ನಡೆಸಿದ ಪ್ರತಿದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಶಿವಾಂಗಿ ಸಿಂಗ್ ಅವರು "ಕ್ವಾಲಿಫೈಡ್ ಫ್ಲೈಯಿಂಗ್ ಇನ್ಸ್ಟ್ರಕ್ಟರ್" (Qualified Flying Instructor) ಎಂಬ ಗೌರವಕ್ಕೂ ಭಾಜನರಾಗಿದ್ದಾರೆ. 40 ನಿಮಿಷ ರಫೇಲ್ನಲ್ಲಿ ಹಾರಾಟ ನಡೆಸಿದ ರಾಷ್ಟ್ರಪತಿ:ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು (ಅ. 29) ಬೆಳಗ್ಗೆ ಅಂಬಾಲಾ ವಾಯುನೆಲೆಯಿಂದ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿ ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದರು. ರಾಷ್ಟ್ರಪತಿ ಮುರ್ಮು ಅವರು ಬೆಳಗ್ಗೆ 11:10ರಿಂದ 11:50ರವರೆಗೆ ಸುಮಾರು 40 ನಿಮಿಷಗಳ ಕಾಲ ರಫೇಲ್ನಲ್ಲಿ ಹಾರಾಟ ನಡೆಸಿದರು. ರಫೇಲ್ ವಿಮಾನವನ್ನು ಗ್ರೂಪ್ ಕ್ಯಾಪ್ಟನ್ ಅಮಿತ್ ಗಹಿನಿ ಹಾರಿಸಿದರು.
ಎರಡು ಯುದ್ಧ ವಿಮಾನಗಳಲ್ಲಿ ಹಾರಾಟ ನಡೆಸಿದ ಮೊದಲ ರಾಷ್ಟ್ರಪತಿ:ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತೀಯ ವಾಯುಪಡೆಯ ಎರಡು ಯುದ್ಧ ವಿಮಾನಗಳಲ್ಲಿ ಹಾರಾಟ ನಡೆಸಿದ ಭಾರತದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು ಅವರು, 2023 ಏಪ್ರಿಲ್ 7 ರಂದು ಅಸ್ಸೋಂನ ತೇಜ್‌ಪುರ ವಾಯುನೆಲೆಯಿಂದ ಸುಖೋಯ್ 30 ಎಂಕೆಐ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದರು. ಇದೀಗ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು. ಇದಕ್ಕೂ ಮೊದಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಇಂದು ಬೆಳಗ್ಗೆ 9:15ಕ್ಕೆ ವಿಶೇಷ ವಿಮಾನದಲ್ಲಿ ಅಂಬಾಲಕ್ಕೆ ಬಂದಿಳಿದರು. ವಾಯುಪಡೆ ಮುಖ್ಯಸ್ಥ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸ್ವಾಗತಿಸಿದರು.
ಬಳಿಕ ರಾಷ್ಟ್ರಪತಿ ಮುರ್ಮು ಅವರು ಸೈನಿಕರನ್ನು ಭೇಟಿಯಾಗಿ, ವಾಯುನೆಲೆಯ ಘಟಕಗಳನ್ನು ಪರಿಶೀಲಿಸಿದರು. ರಾಷ್ಟ್ರಪತಿ ಭೇಟಿ ಹಿನ್ನೆಲೆ ವಾಯುನೆಲೆಯ ಸುತ್ತಲೂ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಡ್ರೋನ್ ಹಾರಾಟವನ್ನು ನಿಷೇಧಿಸಲಾಗಿತ್ತು.








