ಸಾರ್ವಜನಿಕ ಸ್ಥಳದಲ್ಲಿ ಖಾಸಗಿ ಸಂಸ್ಥೆಗಳ ಚಟುವಟಿಕೆಗೆ ಅನುಮತಿ ಕಡ್ಡಾಯ ಆದೇಶಕ್ಕೆ ಹೈಕೋರ್ಟ್ ತಡೆ

ಸಾರ್ವಜನಿಕ ಸ್ಥಳದಲ್ಲಿ ಖಾಸಗಿ ಸಂಸ್ಥೆಗಳ ಚಟುವಟಿಕೆಗೆ ಅನುಮತಿ ಕಡ್ಡಾಯ ಆದೇಶಕ್ಕೆ ಹೈಕೋರ್ಟ್ ತಡೆ
By Published : October 28, 2025 at 4:20 PM IST

ಬೆಂಗಳೂರು:ರಸ್ತೆ, ಉದ್ಯಾನ, ಆಟದ ಮೈದಾನ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ 10ಕ್ಕೂ ಅಧಿಕ ಮಂದಿ ಗುಂಪು ಸೇರಿದರೆ ಅದನ್ನು 'ಅಕ್ರಮ ಕೂಟ'ವೆಂದು ಪರಿಗಣಿಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಹೈಕೋರ್ಟ್ ಇಂದು ಮಧ್ಯಂತರ ತಡೆಯಾಜ್ಞೆ ನೀಡಿದೆ. ರಾಜ್ಯ ಸರ್ಕಾರ 2025ರ ಅಕ್ಟೋಬರ್ 18ರಂದು ಹೊರಡಿಸಿದ್ದ ಆದೇಶ ರದ್ದು ಕೋರಿ ಹುಬ್ಬಳ್ಳಿಯ ಪುನಶ್ಚೇತನ ಸೇವಾ ಟ್ರಸ್ಟ್, ವಿ-ಕೇರ್ ಫೌಂಡೇಷನ್ ಸೇರಿ ನಾಲ್ವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಧಾರವಾಡ ಪೀಠ ಈ ಆದೇಶ ನೀಡಿದೆ. ಅಲ್ಲದೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಧಾರವಾಡ ನಗರ ಪೊಲೀಸ್ ಆಯುಕ್ತರು, ಧಾರವಾಡ ಉಪ ಆಯುಕ್ತರು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಹಾಗೂ ಹುಬ್ಬಳ್ಳಿ-ಧಾರವಾಡ ಪಾಲಿಕೆ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿದ ಪೀಠ, ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ನವೆಂಬರ್ 17ಕ್ಕೆ ಮುಂದೂಡಿತು. ಸಾರ್ವಜನಿಕ ಸ್ಥಳಗಳಲ್ಲಿ ಹತ್ತಕ್ಕೂ ಅಧಿಕ ಮಂದಿ ಗುಂಪು ಸೇರುವುದನ್ನು ನಿರ್ಬಂಧಿಸಿ ಸರ್ಕಾರ ಹೊರಡಿಸಿರುವ ಆದೇಶವು ಮೇಲ್ನೋಟಕ್ಕೆ ಸಂವಿಧಾನದ ಪರಿಚ್ಛೇದ 19(1)(a) (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ) ಹಾಗೂ 19(1)(b) (ಶಸ್ತ್ರಾಸ್ತ್ರರಹಿತವಾಗಿ, ಶಾಂತಿಯುತವಾಗಿ ಒಟ್ಟುಗೂಡುವ) ಅಡಿಯಲ್ಲಿ ಸಾರ್ವಜನಿಕರಿಗೆ ದೊರೆತಿರುವ ಹಕ್ಕುಗಳನ್ನು ಕಸಿದುಕೊಳ್ಳುವಂತಿದೆ ಎಂದು ಪೀಠ ಹೇಳಿದೆ.

ಒಂದು ವೇಳೆ ಸರ್ಕಾರದ ಆದೇಶವನ್ನು ಹೀಗೇ ಬಿಟ್ಟರೆ, ಸಾರ್ವಜನಿಕರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಂತಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ಜಾರಿ ಮಾಡುವುದಕ್ಕೆ ಅವಕಾಶವಿರುವುದಿಲ್ಲ. ಅಲ್ಲದೆ, ಸರ್ಕಾರದ ಆದೇಶವು ಸಂವಿಧಾನದ ಪರಿಚ್ಛೇದ 13(2) (ಸಂವಿಧಾನದಲ್ಲಿ ಖಾತ್ರಿಪಡಿಸಿದ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಅಥವಾ ಸಂಕ್ಷೇಪಿಸುವ ಯಾವುದೇ ಕಾನೂನನ್ನು ರಾಜ್ಯ ರಚಿಸಬಾರದು) ಅನ್ನು ಉಲ್ಲಂಘಿಸುವ ಹಿನ್ನೆಲೆಯಲ್ಲಿ, ಅಕ್ಟೋಬರ್ 18ರ ಸರ್ಕಾರದ ಆದೇಶ ಹಾಗೂ ಆ ನಂತರದ ಎಲ್ಲ ಆದೇಶಗಳಿಗೆ ಮುಂದಿನ ವಿಚಾರಣೆಯವರೆಗೆ ತಡೆಯಾಜ್ಞೆ ನೀಡಲಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಪೀಠ ವಿವರಿಸಿದೆ. ಕಾಂಗ್ರೆಸ್​​​ಗೆ ಎಚ್ಚರಿಕೆಯ ಪಾಠ-ಬಿಜೆಪಿ:ಸಾರ್ವಜನಿಕ ಸ್ಥಳಗಳಲ್ಲಿ ಸಂಘ ಸಂಸ್ಥೆಗಳ ಚಟುವಟಿಕೆಗಳನ್ನು ನಿರ್ಬಂಧಿಸುವ ಆದೇಶವನ್ನು ರದ್ದು ಮಾಡಿದ ಹೈಕೋರ್ಟ್​ ತೀರ್ಪನ್ನು ಬಿಜೆಪಿ ಸ್ವಾಗತಿಸಿದ್ದು, ಇದು ಕಾಂಗ್ರೆಸ್​ ನೇತೃತ್ವದ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ಎಂದು ಹೇಳಿದೆ. ಈ ಬಗ್ಗೆ 'ಎಕ್ಸ್'​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಬಿಜೆಪಿ ನಾಯಕ, ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ಕಾಂಗ್ರೆಸ್ ಸರ್ಕಾರಕ್ಕೆ ಇದು ಎಚ್ಚರಿಕೆಯ ಪಾಠ.

ಸಂವಿಧಾನದ ಮೂಲ ಆಶಯಗಳನ್ನು ಗೌರವಿಸುವುದನ್ನು ಸರ್ಕಾರ ಪಾಲಿಸಲಿ. ಸರ್ಕಾರಿ ಆವರಣದಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಖಾಸಗಿ ಸಂಸ್ಥೆಗಳು ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ನ ಧಾರವಾಡ ಪೀಠವು ತಡೆ ನೀಡಿದೆ ಎಂದು ಬರೆದುಕೊಂಡಿದ್ದಾರೆ. ಇವುಗಳನ್ನೂ ಓದಿ:.

📚 Related News