ರೈತರ ಬದುಕಿಗೆ ಕಣ್ಣೀರಾದ ಈರುಳ್ಳಿ; ಮೊಂಥಾ ಮಳೆಯಿಂದ ಹೊಲದಲ್ಲೇ ಕೊಳೆಯುತ್ತಿದೆ ರಾಶಿ ರಾಶಿ ಬೆಳೆ

ರೈತರ ಬದುಕಿಗೆ ಕಣ್ಣೀರಾದ ಈರುಳ್ಳಿ; ಮೊಂಥಾ ಮಳೆಯಿಂದ ಹೊಲದಲ್ಲೇ ಕೊಳೆಯುತ್ತಿದೆ ರಾಶಿ ರಾಶಿ ಬೆಳೆ
By Published : October 29, 2025 at 2:12 PM IST

ಹಾವೇರಿ:ಸದ್ಯ ಈರುಳ್ಳಿ ಬೆಲೆಯು ಗಣನೀಯವಾಗಿ ಇಳಿಕೆಯಲ್ಲಿದೆ. ಮುಂದಿನ ದಿನಗಳಲ್ಲಿ ಉತ್ತಮ ದರ ಬಂದರೆ ಮಾರಾಟ ಮಾಡುವ ಉದ್ದೇಶದಿಂದ ಹೊಲಗದ್ದೆಗಳಲ್ಲಿ ಗುಡ್ಡೆ ಹಾಕಿ ಕಾಪಿಟ್ಟುಕೊಂಡು ಬರಲಾಗುತ್ತಿದೆ. ಆದರೆ, ಹಿಂಗಾರು ಮಳೆಯಿಂದ ಗುಡ್ಡೆ ಹಾಕಿದ್ದ ಈರುಳ್ಳಿ ಇಟ್ಟಲ್ಲೇ ಕೊಳೆಯಲಾರಂಭಿಸಿದೆ ಎಂದು ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ವಿವಿಧ ಗ್ರಾಮಗಳ ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಮೊಂಥಾ ಏಟು:ಲಾಭದ ನಿರೀಕ್ಷೆಯಲ್ಲಿ ರಾಣೆಬೆನ್ನೂರು ತಾಲೂಕಿನ ಭಾಗಶಃ ರೈತರು ಭಾರಿ ಪ್ರಮಾಣದಲ್ಲಿ ಈರುಳ್ಳಿ ಬೆಳೆದಿದ್ದು, ಬೆಳೆದ ಬೆಳೆಗೆ ಉತ್ತಮ ಬೆಲೆ ಬರಬಹುದು ಎಂಬ ಉದ್ದೇಶದಿಂದ ಜಮೀನಿನಲ್ಲಿಯೇ ಗುಡ್ಡೆ ಹಾಕಿ ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಹೀಗೆ ಗುಡ್ಡೆ ಹಾಕುವುದು ನಮ್ಮಲ್ಲಿ ಸಾಮಾನ್ಯ.

ಮಾರುಕಟ್ಟೆಯಲ್ಲಿ ಉತ್ತಮ ದರ ಸಿಕ್ಕರೆ ಈರುಳ್ಳಿಯನ್ನು ಮಾರಾಟ ಮಾಡಲಾಗುತ್ತದೆ. ಇಲ್ಲದಿದ್ದರೆ ಜಮೀನಿನಲ್ಲಿ ಇಟ್ಟುಕೊಳ್ಳಲಾಗುತ್ತದೆ. ಅಲ್ಪ-ಸ್ವಲ್ಪ ಮಳೆಯಾದರೂ ತೊಂದರೆಯಾಗದಂತೆ ಈರುಳ್ಳಿ ಗುಡ್ಡೆಯ ಮೇಲೆ ಪ್ಲಾಸ್ಟಿಕ್ ಹಾಕಿ ಮುಚ್ಚಿಟ್ಟಿರುತ್ತಾರೆ. ಅದರಂತೆಯೇ ಈ ವರ್ಷ ಆರಂಭದಲ್ಲಿ ದರ ಕುಸಿದಿದ್ದರಿಂದ ಇಲ್ಲಿಯ ಸಾಕಷ್ಟು ರೈತರು ಈರುಳ್ಳಿಯನ್ನು ತಮ್ಮ ತಮ್ಮ ಜಮೀನಿಲ್ಲಿ ಗುಡ್ಡೆ ಹಾಕಿದ್ದಾರೆ. ಆದರೆ, ಮುಂಗಾರು - ಹಿಂಗಾರು ಹಂಗಾಮು ಮುಗಿದರೂ ಈರುಳ್ಳಿ ದರ ಏರಿಕೆಯಾಗಿಲ್ಲ.

ಇತ್ತ ಹಿಂಗಾರು ಮಳೆಯಿಂದ ಈರುಳ್ಳಿ ಗುಡ್ಡೆಗಳು ಕೂಡ ಕೊಳೆಯಲಾರಂಭಿಸಿವೆ. ಒಂದೆಡೆ ದರ ಇಲ್ಲ, ಮತ್ತೊಂದೆಡೆ ಸಂರಕ್ಷಣಿಗೆ ಇಟ್ಟ ಗುಡ್ಡೆಗಳು ಮಳೆಗೆ ಹಾಳಾಗಲಾರಂಭಿಸಿವೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಮಾಡಿದ ಖರ್ಚು ಸಹ ಸಿಗುತ್ತಿಲ್ಲ:ರಾಣೆಬೆನ್ನೂರು ತಾಲೂಕಿನ ವಿವಿಧ ಗ್ರಾಮಗಳ ರೈತರು ಎಕರೆಗೆ 20 ರಿಂದ 30 ಸಾವಿರ ರೂಪಾಯಿ ವೆಚ್ಚ ಮಾಡಿ ಈ ಬಾರಿ ಈರುಳ್ಳಿ ಬೆಳೆದಿದ್ದಾರೆ. ಕ್ವಿಂಟಲ್‌ಗೆ ಕನಿಷ್ಠ ಎರಡು ಸಾವಿರ ರೂಪಾಯಿ ದರ ಇದ್ದರೆ ರೈತರಿಗೆ ಸ್ವಲ್ಪಮಟ್ಟಿನ ಲಾಭ ಸಿಗುತ್ತಿತ್ತು. ಆದರೆ, ಪ್ರಸ್ತುತ ಕ್ವಿಂಟಲ್‌ಗೆ 300 ರೂ.

ಯಿಂದ 500 ರೂ. ದರ ಇದೆ. ಈ ದರ ನಾವು ಮಾಡಿದ ಖರ್ಚಿಗೂ ಸಮನಲ್ಲ. ಜಮೀನಿನಲ್ಲಿ ಗುಡ್ಡೆ ಹಾಕಿ, ಅದನ್ನು ಹೆಚ್ಚಿ ಮಾರಾಟ ಮಾಡಲು ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಸಹ ಸಾಲುವುದಿಲ್ಲ. ಇನ್ನು ಈರುಳ್ಳಿ ಬೆಳೆಯಲು ಮಾಡಿದ್ದ ಖರ್ಚು ಸಿಗುವುದು ದೂರದ ಮಾತು.

ಹಾಗಾಗಿ ನಮ್ಮ ಸಹಾಯಕ್ಕೆ ಸರ್ಕಾರ ಬರಬೇಕು. ಕನಿಷ್ಠ ಒಂದು ಎಕರೆಗೆ 25 ಸಾವಿರ ರೂಪಾಯಿಯಾದರೂ ಪರಿಹಾರ ನೀಡಬೇಕು ಎನ್ನುತ್ತಾರೆ ಹಾವೇರಿಯ ಈರುಳ್ಳಿ ಬೆಳೆಗಾರರು. 600 ಹೆಕ್ಟೇರ್‌ನಲ್ಲಿ ಈರುಳ್ಳಿ: ಹಾವೇರಿ ಜಿಲ್ಲೆಯಲ್ಲಿ ಈ ವರ್ಷ 600 ಹೆಕ್ಟೇರ್‌ನಲ್ಲಿ ಈರುಳ್ಳಿ ಬೆಳೆಯಲಾಗಿದೆ. ಅದರಲ್ಲೂ ರಾಣೆಬೆನ್ನೂರು ತಾಲೂಕಿನಲ್ಲಿ ಅತಿಹೆಚ್ಚು ಈರುಳ್ಳಿ ಬೆಳೆ ಬೆಳೆಯಲಾಗುತ್ತಿದೆ. ಅಧಿಕ ಮಳೆಯಲ್ಲಿ ಕೂಲಿಕಾರ್ಮಿಕರ ಸಮಸ್ಯೆಗಳ ನಡುವೆ ರೈತರು ಈರುಳ್ಳಿ ಬೆಳೆದಿದ್ದಾರೆ.

ಕಳೆದ ವರ್ಷ ಕ್ವಿಂಟಲ್‌ಗೆ ಎರಡು ಸಾವಿರ ರೂಪಾಯಿ ಬೆಲೆ ಸಿಕ್ಕಿತ್ತು. ಈ ಹಿನ್ನೆಲೆ ಈ ವರ್ಷ ಈರುಳ್ಳಿ ಬೆಳೆಲಾಗಿದೆ. ಅಧಿಕ ಮಳೆಯ ನಡುವೆ ಸಾಕಷ್ಟು ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದೇವೆ. ಆದರೆ, ಈರುಳ್ಳಿಗೆ ದರ ಇಲ್ಲದಿರುವುದು ನಮಗೆ ಬೇಸರ ತಂದಿದೆ. ಮತ್ತೊಂದು ಕಡೆ ಈರುಳ್ಳಿ ಬೆಲೆ ಬಂದಾಗ ಮಾರಾಟ ಮಾಡಿದರಾಯಿತು ಎಂದು ಜಮೀನಿಲ್ಲಿ ಗುಡ್ಡೆ ಹಾಕಿದ್ದೇವೆ.

ಇತ್ತ ಬೆಲೆ ಏರಿಕೆಯಾಗುತ್ತಿಲ್ಲ. ಮತ್ತೊಂದೆಡೆ ಹಿಂಗಾರು ಮಳೆ ಸಹ ಕಾಡಲಾರಂಭಿಸಿದೆ. ಮೊಂಥಾ ಚಂಡಮಾರುತದಿಂದ ಮೋಡ ಮುಸುಕಿದ ವಾತಾವರಣವಿದ್ದು, ಆಗಾಗ ತುಂತುರ ಮಳೆಯಾಗುತ್ತಿದೆ. ಈ ವಾತಾವರಣದಿಂದ ಈರುಳ್ಳಿ ಬೆಳೆ ಗುಡ್ಡೆಯಲ್ಲಿ ಕೊಳೆಯಲಾರಂಭಿಸಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

📚 Related News