ಯಾದಗಿರಿ:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕರ್ಮಭೂಮಿ ಗುರುಮಠಕಲ್ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ದ ಪಥಸಂಚಲನಕ್ಕೆ ಯಾದಗಿರಿ ಜಿಲ್ಲಾಡಳಿತ ಅನುಮತಿ ನೀಡಿದೆ. ಅಕ್ಟೋಬರ್ 31ರಂದು ಗುರುಮಠಕಲ್ ಪಟ್ಟಣದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ನಡೆಸಲು ಜಿಲ್ಲಾಡಳಿತದಿಂದ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಇದೀಗ ಖರ್ಗೆ ಕೋಟೆಯಲ್ಲಿ ಆರ್‌ಎಸ್‌ಎಸ್ ಗಣವೇಷಧಾರಿಗಳು ಪಥಸಂಚಲನ ಮಾಡಲು ಕಾತುರರಾಗಿದ್ದಾರೆ. ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರಿಂದ ಗುರುಮಠಕಲ್ ಪಟ್ಟಣದ ನರೇಂದ್ರ ರಾಠೋಡ್ ಲೇಔಟ್ನಿಂದ ಪಥಸಂಚಲನ ಕೈಗೊಳ್ಳಲು ಅನುಮತಿ ನೀಡಲಾಗಿದೆ. ಸಾಮ್ರಾಟ್ ವೃತ್ತ, ಬಸವೇಶ್ವರ ವೃತ್ತ, ಹನುಮಾನ್ ದೇವಸ್ಥಾನ ಹಾಗೂ ಕುಂಬಾರವಾಡಿ ಸೇರಿ ಹಲವೆಡೆ ಪಥಸಂಚಲನ ಸಂಚರಿಸಲಿದೆ.
10 ಷರತ್ತು:ಜಿಲ್ಲಾಡಳಿತವು ಅನುಮತಿ ಕೊಟ್ಟಿರುವ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಹತ್ತು ಷರತ್ತುಗಳನ್ನು ವಿಧಿಸಲಾಗಿದೆ. ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗೆ ಹಾನಿಯಾಗದಂತೆ ನೋಡಿಕೊಳ್ಳುವುದು, ನಿಗದಿತ ಮಾರ್ಗವಷ್ಟೇ ಪಥಸಂಚಲನಕ್ಕೆ ಬಳಸುವುದು, ಜಾತಿ, ಧಾರ್ಮಿಕ ಭಾವನೆಗೆ ಧಕ್ಕೆ ತರುವ ಘೋಷಣೆ ಕೂಗದಿರುವುದು ಹಾಗೂ ಮಾರಕಾಸ್ತ್ರ ಹಿಡಿದುಕೊಂಡು ಹೋಗುವುದನ್ನು ನಿಷೇಧಿಸಿ ಅನುಮತಿ ನೀಡಲಾಗಿದೆ. ಪ್ರತ್ಯೇಕ ಸುದ್ದಿ:ಇನ್ನೊಂದೆಡೆ, ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ಪಥಸಂಚಲನ ಕುರಿತಂತೆ ನವೆಂಬರ್ 5ರಂದು ಮತ್ತೊಮ್ಮೆ ಶಾಂತಿ ಸಭೆ ನಡೆಸಲು ಹೈಕೋರ್ಟ್ ಗುರುವಾರ(ಇಂದು) ನಿರ್ದೇಶನ ನೀಡಿದೆ. ಈ ಹಿಂದೆ ಅಕ್ಟೋಬರ್ 24ರಂದು ನಡೆದಿದ್ದ ಶಾಂತಿ ಸಭೆಯಲ್ಲಿ ಅರ್ಜಿದಾರರು ಭಾಗಿಯಾಗಿಲ್ಲ ಎಂದು ತಿಳಿಸಿದ್ದಾರೆ. ಅರ್ಜಿದಾರರು ಬರಲು ಸಾಧ್ಯವಾಗಿಲ್ಲದಿದ್ದರೆ, ಅವರ ಪ್ರತಿನಿಧಿಗಳನ್ನು ಕಳುಹಿಸಬೇಕಾಗಿತ್ತು.
ಆ ಕಾರ್ಯಕ್ಕೆ ಮುಂದಾಗಿಲ್ಲ ಎಂದು ಪೀಠ ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿತು. ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ್ದ ಜಿಲ್ಲಾಡಳಿತದ ಕ್ರಮ ಪ್ರಶ್ನಿಸಿ, ಪಥಸಂಚಲನದ ಸಂಚಾಲಕ ಕಲಬುರಗಿಯ ಅಶೋಕ್ ಪಾಟೀಲ್ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ಜೆ. ಎಸ್. ಕಮಲ್ ಅವರಿದ್ದ ನ್ಯಾಯಪೀಠ ಸೂಚನೆ ನೀಡಿದೆ.
ಅಲ್ಲದೆ, ನವೆಂಬರ್ 5ರ ಸಂಜೆ 5 ಗಂಟೆಗೆ ಹೈಕೋರ್ಟ್ನ ಬೆಂಗಳೂರು ಪೀಠದಲ್ಲಿನ ಅಡ್ವೋಕೇಟ್ ಜನರಲ್ ಕಚೇರಿಯಲ್ಲಿ ಸಭೆ ನಡೆಸಬೇಕು. ಸಭೆಗೆ ಸಂಬಂಧಿಸಿದಂತೆ ಅರ್ಜಿದಾರರು ಮತ್ತವರ ವಕೀಲರು ಭಾಗವಹಿಸಬೇಕು ಎಂದು ಸೂಚನೆ ನೀಡಿ, ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿದೆ. ಇನ್ನೂ, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ ಆಚರಿಸಲು ದೇಶಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಹಿಂದೂ ಸಮ್ಮೇಳನಗಳು ಅಥವಾ ಸಭೆಗಳನ್ನು ಆಯೋಜಿಸಲಾಗುವುದು ಎಂದು ಸಂಘಟನೆ ಮಂಗಳವಾರ ತಿಳಿಸಿದೆ. ಇವುಗಳನ್ನೂ ಓದಿ:.








