ಮುಜಾಫರ್ಪುರ್ (ಬಿಹಾರ): ಮತಕ್ಕಾಗಿ ಆರ್‌ಜೆಡಿ, ಕಾಂಗ್ರೆಸ್ ಛತ್ಮಯ್ಯನನ್ನು ಅವಮಾನಿಸುತ್ತಿದ್ದಾರೆ. ಇಂತಹ ಅಗೌರವವನ್ನು ಬಿಹಾರದ ಜನರು ಕ್ಷಮಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಛತ್ ಪೂಜೆ ಬಳಿಕ ಮೊದಲ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಮತ್ತೊಮ್ಮೆ ಎನ್ಡಿಎ ಸರ್ಕಾರ ಎಂಬ ಘೋಷಣೆ ಮೊಳಗಿಸಿದರು. ಛತ್ ಹಬ್ಬಕ್ಕೆ ಯುನೆಸ್ಕೋ ಮಾನ್ಯತೆ ಕೊಡಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಬಿಹಾರದ ಜನರಿಗೆ ಅಭಯ ನೀಡಿದರು. ಕಾಂಗ್ರೆಸ್ ಮತ್ತು ಆರ್‌ಜೆಡಿಗೆ ಛತ್ ಮಯ್ಯ ಪೂಜೆ ಒಂದು ನಾಟಕವಾಗಿದೆ.
ಛತ್ ಪೂಜೆ ಸಮಯದಲ್ಲಿ ತಾಯಂದಿರು ಮತ್ತು ಸಹೋದರಿಯರು ಮಾಡುವ ಉಪವಾಸ ಅವರಿಗೆ ನಾಟಕ ಎಂಬಂತೆ ಕಾಣಿಸುತ್ತಿದೆ. ನೀವು ಅವರ ಮಾತನ್ನು ಒಪ್ಪುತ್ತೀರಾ ಅಥವಾ ಶಿಕ್ಷಿಸುತ್ತೀರಾ ಎಂದು ಪ್ರಶ್ನಿಸಿದ ಪ್ರಧಾನಿ, ಯಾರಾದರೂ ಮತಗಳಿಗಾಗಿ ಛತ್ ಮಯ್ಯನನ್ನು ಅವಮಾನಿಸಬಹುದೇ? ಈ ಅಗೌರವವನ್ನು ಬಿಹಾರದ ಜನರು ಮರೆಯುವುದಿಲ್ಲ ಎಂದು ತಿರುಗೇಟು ನೀಡಿದರು. ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಹಲವು ವರ್ಷಗಳ ಕಾಲ ಬಿಹಾರ್ ಕಾಡಿನ ರಾಜ್ಯವಾಗಿತ್ತು. ಆರ್‌ಜೆಡಿ ಗೂಂಡಾಗಳು ಶೋರೂಂನಿಂದ ವಾಹನಗಳನ್ನು ಕದಿಯುತ್ತಿದ್ದರು ಎಂದು ಆರೋಪಿಸಿದರು. ಮಹಾಘಟಬಂಧನ್ ಬಡ ಜನರ ಹಕ್ಕನ್ನು ಕದಿಯುತ್ತಿದೆ.
ಬಿಹಾರದ ಜನರಿಗೆ ಇವರು ಯಾವ ಒಳ್ಳೆ ಕಾರ್ಯ ಮಾಡಿದ್ದಾರೆ. ಇಲ್ಲಿನ ಭೂಮಿಯನ್ನು ಕದ್ದವರು, ಭೂಮಿಯನ್ನು ಕದ್ದವರಿಂದ ಬಿಹಾರದ ಸಂಪರ್ಕ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಟೀಕಾ ಪ್ರಹಾರ ನಡೆಸಿದರು. ಹೆಸರು ಹೇಳದೇ ತಮ್ಮ ವಾಗ್ದಾಳಿ ಮುಂದುವರಿಸಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಎರಡು ಭ್ರಷ್ಟ ಕುಟುಂಬಗಳ ಇಬ್ಬರು ಯುವರಾಜರು, ಇದೀಗ ಸುಳ್ಳಿನ ಭರವಸೆಯ ಅಂಗಡಿಯನ್ನು ತರೆದಿದ್ದಾರೆ. ಈ ಇಬ್ಬರು ಯುವರಾಜರು ಸಾವಿರಾರು ಕೋಟಿ ರೂಪಾಯಿ ಹಗರಣಗಳಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ. ಮೋದಿ ವಿರುದ್ಧ ನಿರಂತವಾಗಿ ದಾಳಿ ಮಾಡುವುದು ಬಿಟ್ಟು ಇವರಿಂದ ಏನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಕುಟುಕಿದರು.
ಈ ರಾಜ್ಯದ ಅಭಿವೃದ್ಧಿಯು ತಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಬಿಹಾರದ ಅಭಿವೃದ್ಧಿಯು ವಿಕಸಿತ ಭಾರತಕ್ಕೆ ಪ್ರಮುಖವಾಗಿ ಆಗಬೇಕಾದ ಕೆಲಸವಾಗಿದೆ. ಆದರೆ ಆರ್‌ಜೆಡಿ, ಕಾಂಗ್ರೆಸ್ ಎಂದಿಗೂ ರಾಜ್ಯದ ಅಭಿವೃದ್ಧಿಯನ್ನು ಮಾಡುವುದಿಲ್ಲ ಮತ್ತು ಹಾಗೆ ಆಗಲು ಬಿಡುವುದಿಲ್ಲ ಎಂದರು. ಬಿಹಾರದ ಜನರು ಪ್ರತಿ ಚುನಾವಣೆಯಲ್ಲೂ ಎನ್ಡಿಎಗೆ ತಮ್ಮ ಸಂಪೂರ್ಣ ಆಶೀರ್ವಾದ ನೀಡಿದ್ದಾರೆ. ಈ ಬಾರಿಯೂ ಸಹ, ಮುಜಾಫರ್‌ಪುರ ಸೇರಿದಂತೆ ರಾಜ್ಯಾದ್ಯಂತ ಬಿಜೆಪಿ-ಎನ್ಡಿಎ ಪರವಾಗಿದ್ದಾರೆ ಎಂದು ಪ್ರಧಾನಿಗಳು ವಿಶ್ವಾಸ ವ್ಯಕ್ತಪಡಿಸಿದರು.








