ಶ್ರೀನಗರ(ಜಮ್ಮು ಮತ್ತು ಕಾಶ್ಮೀರ):ಶಂಕಿತ ಉಗ್ರರ ಜೊತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಇಬ್ಬರು ಸರ್ಕಾರಿ ನೌಕರರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಗುರುವಾರ ವಜಾ ಆದೇಶವನ್ನು ಹೊರಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಗುಲಾಮ್ ಹುಸೇನ್ ಮತ್ತು ಮಜೀದ್ ಇಕ್ಬಾಲ್ ದಾರ್ ವಜಾಗೊಂಡ ನೌಕರರು. ಹುಸೇನ್ ರಿಯಾಸಿ ಜಿಲ್ಲೆಯ ಮಹೋರ್ ತಹಸಿಲ್‌ನಲ್ಲಿರುವ ಕಲ್ವಾ ಮುಲಾಸ್ ನಿವಾಸಿಯಾದರೆ, ಇಕ್ಬಾಲ್ ದಾರ್ ರಾಜೌರಿ ಜಿಲ್ಲೆಯ ಖಿಯೋರಾ ಪ್ರದೇಶದ ನಿವಾಸಿಯಾಗಿದ್ದಾರೆ. ಇಬ್ಬರು ಶಿಕ್ಷಕರು ಶಂಕಿತ ಉಗ್ರರ ಜೊತೆಗೆ ನೇರ ಸಂಪರ್ಕ ಹೊಂದಿದ ಅನುಮಾನದ ಮೇರೆಗೆ ತನಿಖೆ ನಡೆಸಲಾಗಿದ್ದು, ಇದಕ್ಕೆ ಪೂರಕವಾಗಿ ಹಲವು ಸಾಕ್ಷ್ಯ ಲಭ್ಯವಾಗಿವೆ.
ಇದರ ಆಧಾರದ ಮೇಲೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಇಬ್ಬರು ಉದ್ಯೋಗಿಗಳನ್ನು ಕೆಲಸದಿಂದ ಗೇಟ್ ಪಾಸ್ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿಕ್ಷಕರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ ಬಗ್ಗೆ ತಿಳಿದುಬಂದಿದ್ದು, ಅವರನ್ನು ಸೇವೆಯಿಂದ ವಜಾಗೊಳಿಸಲು ಎಂದು ಇರುವ ದಾಖಲೆಗಳು ತೃಪ್ತವಾಗಿವೆ ಎಂದು ವಜಾ ಆದೇಶದಲ್ಲಿ ಲೆಫ್ಟಿನೆಂಟ್ ಗವರ್ನರ್ ತಿಳಿಸಿದ್ದಾರೆ. ಇದಕ್ಕೂ ಮೊದಲು ಇಂಥದ್ದೇ ಆರೋಪದ ಮೇಲೆ ಹಲವು ಸರ್ಕಾರಿ ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಜಮ್ಮು- ಕಾಶ್ಮೀರದ ಪ್ರಮುಖ ಸುದ್ದಿ:ಕಾರಿನಲ್ಲಿ ಮಾದಕ ದ್ರವ್ಯ ಸಾಗಿಸಿದ್ದ ಆರೋಪದ ಮೇಲೆ ಪೊಲೀಸ್ ಕಾನ್ಸ್ಟೇಬಲ್ಗೆ ಕುಪ್ವಾರ ಜಿಲ್ಲೆಯ ಸ್ಥಳೀಯ ನ್ಯಾಯಾಲಯವು 11 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ಇತ್ತೀಚೆಗೆ ವಿಧಿಸಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮನ್ಸೂರ್ ಅಹ್ಮದ್ ಲೋನ್ ಅವರು ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ತಾರತ್‌ಪೋರಾ ಪ್ರದೇಶದ ನಿವಾಸಿ ಮುಷ್ತಾಕ್ ಅಹ್ಮದ್ ಪಿರ್ ಎಂಬಾತನಿಗೆ ಎನ್‌ಡಿಪಿಎಸ್ ಕಾಯ್ದೆಯಡಿ ಶಿಕ್ಷೆ ವಿಧಿಸಿದ್ದಾರೆ.
ಜೊತೆಗೆ ಒಂದು ಲಕ್ಷ ರೂಪಾಯಿ ದಂಡವನ್ನೂ ಹಾಕಿದ್ದಾರೆ. 2019ರ ಜುಲೈ 12ರಂದು ಇಲ್ಲಿನ ವಟಾಯೆನ್ ಜನರಲ್ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುವ ವೇಳೆ ಆರೋಪಿಯ ಕಾರಿನಲ್ಲಿ ಮಾದಕ ವಸ್ತು ಪತ್ತೆಯಾಗಿತ್ತು. ಪೊಲೀಸರು ವಾಹನದ ಬಾನೆಟ್ ಅಡಿ (ಎಂಜಿನ್ ಏರ್ ಫಿಲ್ಟರ್) ಕೆಲವು ನಿಷಿದ್ಧ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಕಳ್ಳಸಾಗಣೆ ಮಾಡಿದ ಡ್ರಗ್ಸ್ ಅನ್ನು ಬಟ್ಟೆ ಮತ್ತು ಪಾಲಿಥಿನ್ ಕವರ್‌ನಿಂದ ಮುಚ್ಚಲಾಗಿತ್ತು. ನ್ಯಾಯಾಲಯದ ದಾಖಲೆಯ ಪ್ರಕಾರ, ಆರೋಪಿಯು ಅಪರಾಧದ ಸಮಯದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದ.
ಹಂದ್ವಾರದ ಉಪ-ವಿಭಾಗೀಯ ಪೊಲೀಸ್ ಅಧಿಕಾರಿಯ ವೈಯಕ್ತಿಕ ಭದ್ರತಾ ಅಧಿಕಾರಿ (PSO) ಆಗಿ ಸೇವೆ ಸಲ್ಲಿಸುತ್ತಿದ್ದ ಎಂದು ತಿಳಿದು ಬಂದಿದೆ. ಇವುಗಳನ್ನೂ ಓದಿ:.








