ಒಂದೇ ದಿನ ಒಟಿಟಿಗೆ ಎಂಟ್ರಿ ಕೊಡಲಿದೆ ಅಪ್ಪು ಕನಸಿನ ಕೂಸು 'ಮಾರಿಗಲ್ಲು'; ಶೆಟ್ರ ಬ್ಲಾಕ್​ಬಸ್ಟರ್ 'ಕಾಂತಾರ'

ಒಂದೇ ದಿನ ಒಟಿಟಿಗೆ ಎಂಟ್ರಿ ಕೊಡಲಿದೆ ಅಪ್ಪು ಕನಸಿನ ಕೂಸು 'ಮಾರಿಗಲ್ಲು'; ಶೆಟ್ರ ಬ್ಲಾಕ್​ಬಸ್ಟರ್ 'ಕಾಂತಾರ'
By Published : October 30, 2025 at 12:41 PM IST

ಪುನೀತ್​ ರಾಜ್​​ಕುಮಾರ್​ ಕನಸಿನ ಯೋಜನೆ 'ಮಾರಿಗಲ್ಲು' ವೆಬ್​ ಸರಣಿ ಮತ್ತು ರಿಷಬ್​ ಶೆಟ್ಟಿ ಸಾರಥ್ಯದ ಬ್ಲಾಕ್​​​ಬಸ್ಟರ್ 'ಕಾಂತಾರ ಚಾಪ್ಟರ್​ 1' ಅಕ್ಟೋಬರ್​​ 31, ಅಂದರೆ ನಾಳೆ ​ಪ್ರತ್ಯೇಕ ಒಟಿಟಿ ಪ್ಲ್ಯಾಟ್​​ಫಾರ್ಮ್​​​ಗಳಲ್ಲಿ ಬಿಡುಗಡೆ ಆಗಲಿದೆ. ಬ್ಲಾಕ್​ಬಸ್ಟರ್​ ಚಿತ್ರ ಕಾಂತಾರ ಪ್ರೀಕ್ವೆಲ್​ ಅನ್ನು ನೀವಿನ್ನೂ ನೋಡಿಲ್ಲ ಎಂದಾದರೆ ನಾಳೆಯಿಂದ ನೀವಿದ್ದ ಸ್ಥಳದಲ್ಲೇ ಕುಟುಂಬ ಸಮೇತ ವೀಕ್ಷಿಸಬಹುದಾಗಿದೆ. ಇದರ ಜೊತೆಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹುಟ್ಟಿಸಿರುವ 'ಮಾರಿಗಲ್ಲು' ವೆಬ್​ ಸರಣಿಯೂ ಪ್ರಾರಂಭವಾಗಲಿದೆ. ಝೀ5 ಹಾಗೂ ದಿ. ಪುನೀತ್​ ರಾಜ್​​​ಕುಮಾರ್​​ ಅವರ 'ಪಿಆರ್‌ಕೆ ಪ್ರೊಡಕ್ಷನ್ಸ್‌' ಜಂಟಿಯಾಗಿ ನಿರ್ಮಾಣ ಮಾಡಿರುವ​​ ಮಾರಿಗಲ್ಲು 1990ರ ದಶಕದ ಕಥಾಹಂದರವನ್ನೊಳಗೊಂಡಿದೆ.

ಕದಂಬರ ಕಾಲಘಟ್ಟದ ಹಿನ್ನೆಲೆಯೂ ಈ ವೆಬ್​ ಸರಣಿಯಲ್ಲಿದೆ. ಪಿಆರ್‌ಕೆ ವತಿಯಿಂದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಂಡವಾಳ ಹೂಡಿದ್ದು, ದೇವರಾಜ್ ಪೂಜಾರಿ ಕಥೆ ಬರೆದು ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಸ್ಥಳೀಯ ಪ್ರದೇಶಗಳಲ್ಲಿ ಬೇರೂರಿರುವ ಕಥೆಗಳನ್ನು ದೊಡ್ಡ ಸಂಖ್ಯೆಯ ಪ್ರೇಕ್ಷಕರಿಗೆ ತಲುಪಿಸುವುದು ಪುನೀತ್​​ ಅವರ ಕನಸು. ಪಿಆರ್‌ಕೆ ಪ್ರೊಡಕ್ಷನ್‌ ಮೂಲಕ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಇಂತಹ ಸಿನಿಮಾ ಮತ್ತು ಸರಣಿಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಅದರಂತೆ, ಅಪ್ಪು ಕನಸಿನ ಕೂಸಾಗಿರುವ ಮಾರಿಗಲ್ಲು ನಾಳೆ ಝೀ5 ಒಟಿಟಿ ಪ್ಲ್ಯಾಟ್​ಫಾರ್ಮ್​​ನಲ್ಲಿ ಪ್ರಸಾರ ಕಾಣಲಿದೆ.

ಇತ್ತೀಚೆಗೆ ಟ್ರೇಲರ್​ ಅನಾವರಣಗೊಳಿಸಿದ್ದ ಝೀ5 ಮತ್ತು ಅಶ್ವಿನಿ ಪುನೀತ್​ ರಾಜ್​ಕುಮಾರ್​, ''ಅಪ್ಪು ಕನಸು, ಪಿಆರ್​​ಕೆ ಸಂಸ್ಥೆಯ ಮೊಟ್ಟ ಮೊದಲ ವೆಬ್ ಸೀರಿಸ್ "ಮಾರಿಗಲ್ಲು" ಟ್ರೈಲರ್ ರಿಲೀಸ್​. ನಮ್ಮ ಭಾಷೆ, ನಮ್ಮ ಕಥೆಗಳು. ಟ್ರೇಲರ್​ ನೋಡಿ ಆನಂದಿಸಿ. ಶೇರ್ ಮಾಡಿ. ಇದೇ ಅಕ್ಟೋಬರ್ 31ಕ್ಕೆ, ನಿಮ್ಮ ಝೀ5 ಕನ್ನಡದಲ್ಲಿ, ಈಗಲೇ ಸಬ್​​ಸ್ಕ್ರೈಬ್​ ಮಾಡಿ'' ಎಂಬ ಕ್ಯಾಪ್ಷನ್​​ ಕೊಟ್ಟಿದ್ದರು.

ಮಾರಿಗಲ್ಲು ಮುಖೇನ ಅನುಭವಿ ಕಲಾವಿದರಾದ ರಂಗಾಯಣ ರಘು, ಗೋಪಾಲ್​​ ಕೃಷ್ಣ ದೇಶಪಾಂಡೆ ವೆಬ್ ಸೀರಿಸ್‌‌ ಜಗತ್ತನ್ನು ಪ್ರವೇಶಿಸಿದ್ದಾರೆ. ಪ್ರವೀಣ್ ತೇಜ್, ಡ್ರಾಮಾ ಜೂನಿಯರ್ಸ್ ಖ್ಯಾತಿಯ ಎಎಸ್ ಸೂರಜ್, ನಟ ಪ್ರಶಾಂತ್ ಸಿದ್ದಿ, ನಿನಾದ್ ಹೃತ್ಸಾ ಸೇರಿದಂತೆ ಸ್ಥಳೀಯ ರಂಗಭೂಮಿ ಕಲಾವಿದರು ತಾರಾಬಳಗದಲ್ಲಿದ್ದಾರೆ. ಎಸ್. ಕೆ. ರಾವ್ ಕ್ಯಾಮರಾ ಕೈಚಳಕ, ಎಲ್.

ವಿ. ಮುತ್ತು ಹಾಗೂ ಎಲ್. ವಿ. ಗಣೇಶ್ ಅವರ ಸಂಗೀತ ನಿರ್ದೇಶನವಿದೆ. ಇನ್ನೂ, ಡಿವೈನ್​ ಸ್ಟಾರ್​ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ ಚಾಪ್ಟರ್ 1' ಸಿನಿಮಾ ಚಿತ್ರಮಂದಿಗಳಲ್ಲಿ ಧೂಳೆಬ್ಬಿಸಿದ್ದು, ಬಿಡುಗಡೆಯಾದ ಒಂದೇ ತಿಂಗಳೊಳಗೆ ಒಟಿಟಿ ಪ್ರವೇಶಿಸಲು ಸಜ್ಜಾಗಿದೆ.

ಹೌದು, ಈ ಬ್ಲಾಕ್​​ಬಸ್ಟರ್ ಸಿನಿಮಾ ಇದೇ ಅಕ್ಟೋಬರ್ 31ರಂದು ಅಂದರೆ ನಾಳೆ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ರುಕ್ಮಿಣಿ ವಸಂತ್, ಜಯರಾಮ್ ಮತ್ತು ಗುಲ್ಶನ್ ದೇವಯ್ಯ ಪ್ರಮುಖ ಪಾತ್ರಗಳಲ್ಲಿರುವ ಈ ಯಶಸ್ವಿ ಸಿನಿಮಾ ಈಗಾಗಲೇ ಭಾರತವೊಂದರಲ್ಲೇ ಸರಿ-ಸುಮಾರು 600 ಕೋಟಿ ರೂಪಾಯಿ ವಿಶ್ವಾದ್ಯಂತ ಸರಿ-ಸುಮಾರು 850 ಕೋಟಿ ರೂಪಾಯಿ ಗಳಿಸಿದೆ.

📚 Related News