ಪಾಳು ಬಿದ್ದ ಕೊಠಡಿಯಲ್ಲಿ ಕಡತಗಳನ್ನು ಎಸೆದ ಆರೋಪ; ಹನುಮಂತಾಪುರ ಗ್ರಾ.ಪಂ ವಿರುದ್ಧ ಗ್ರಾಮಸ್ಥರು ಗರಂ; ಸ್ಥಳಕ್ಕೆ ಇಒ ಭೇಟಿ

ಪಾಳು ಬಿದ್ದ ಕೊಠಡಿಯಲ್ಲಿ ಕಡತಗಳನ್ನು ಎಸೆದ ಆರೋಪ; ಹನುಮಂತಾಪುರ ಗ್ರಾ.ಪಂ ವಿರುದ್ಧ ಗ್ರಾಮಸ್ಥರು ಗರಂ; ಸ್ಥಳಕ್ಕೆ ಇಒ ಭೇಟಿ
By Published : October 30, 2025 at 1:50 PM IST | Updated : October 30, 2025 at 2:13 PM IST

ದಾವಣಗೆರೆ :ಸರ್ಕಾರಿ ಕೆಲಸ ದೇವರು ಕೆಲಸ ಅಂತಾರೆ, ಆದರೆ ಹನುಮಂತಾಪುರ ಗ್ರಾಮ ಪಂಚಾಯಿತಿಯ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಸಾವಿರಾರು ಸರ್ಕಾರಿ ದಾಖಲೆಗಳು ಹಾಳಾಗಿ ಹೋಗ್ತಿವೆ ಎಂದು ಅಲ್ಲಿನ ಗ್ರಾಮಸ್ಥರು ಆರೋಪಿಸಿದ್ದಾರೆ. ಜಾಬ್ ಕಾರ್ಡ್, ಉದ್ಯೋಗ ಖಾತ್ರಿ ಪುಸ್ತಕಗಳು, ಇ - ಸ್ವತ್ತಿನ ದಾಖಲೆಗಳು, ಖಾತೆಗೆ ಸಂಬಂಧಿಸಿದ ದಾಖಲೆಗಳನ್ನು ಜೋಪಾನ ಮಾಡುವುದನ್ನೇ ಇಲ್ಲಿನ ಸಿಬ್ಬಂದಿ ಮರೆತಂತಿದೆ. ಗ್ರಾಮ ಪಂಚಾಯತ್​ ಸಿಬ್ಬಂದಿ ದಾಖಲೆಗಳನ್ನು ಉಳಿಸುವ ಪ್ರಯತ್ನವನ್ನು ಕಿಂಚಿತ್ತೂ ಮಾಡಿಲ್ಲ. ಇಡೀ ಪಂಚಾಯತ್​ಗೆ ಸಂಬಂಧಿಸಿದ ದಾಖಲೆಗಳ ಶೇಖರಣೆಯ ಕೋಣೆ ಅವ್ಯವಸ್ಥೆಯಿಂದ ಕೂಡಿದೆ ಎಂದು ಇಲ್ಲಿನ ಸ್ಥಳೀಯರು ಗರಂ ಆಗಿದ್ದಾರೆ. ಪಾಳು ಬಿದ್ದ ಕಟ್ಟಡದಲ್ಲಿ ಕಸದಂತೆ ರಾಶಿ ರಾಶಿಯಾಗಿ ಬಿದ್ದ ದಾಖಲೆಗಳು:ಹನುಮಂತಾಪುರ ಗ್ರಾಮ ಪಂಚಾಯಿತಿಯು ಒಟ್ಟು ಎಂಟು ಗ್ರಾಮಗಳನ್ನು ಒಳಗೊಂಡಿದ್ದು, ಎಂಟು ಗ್ರಾಮಗಳ ಮನೆ ಕಂದಾಯ ದಾಖಲೆಗಳು, ಇ ಸ್ವತ್ತು, ಮನರೇಗಾ ದಾಖಲೆಗಳು, ಜಾಬ್ ಕಾರ್ಡ್​ಗಳು, ಶಾಲೆ ಹಾಗೂ ಗ್ರಂಥಾಲಯ ಸೇರಿದಂತೆ ಇತರ ದಾಖಲೆಗಳನ್ನು ಪಾಳು ಬಿದ್ದ ಕೊಠಡಿಯಲ್ಲಿ ಕಸದ ರಾಶಿಯಂತೆ ಬಿಸಾಕಲಾಗಿದೆ.

ಇವುಗಳು ಸರಿಯಾಗಿ ನಿರ್ವಹಣೆ ಇಲ್ಲದೇ ಮಳೆಯಲ್ಲಿ ನೆನೆದು ಕೊಳೆತ ಸ್ಥಿತಿಯಲ್ಲಿವೆ. ಇದನ್ನು ಕಂಡ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದು, ಕೂಡಲೇ ಗ್ರಾಮ ಪಂಚಾಯಿತಿ ಪಿಡಿಒ ಸೇರಿದಂತೆ ಎಲ್ಲ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಪಂಚಾಯಿತಿ ವ್ಯಾಪ್ತಿಯ ಜನರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಇಒ ದಿಢೀರ್​ ಹಾಜರ್:ಐದಾರು ದಶಕಗಳ ದಾಖಲೆ ಬೇಕು ಎಂದರೆ ಜನರು ಮೊದಲು ಭೇಟಿ ನೀಡುವುದು ಗ್ರಾಮ ಪಂಚಾಯತ್​ಗೆ. ಹೀಗೆ ಇರುವಾಗ ಹನುಮಂತಾಪುರ ಗ್ರಾಮ ಪಂಚಾಯತ್​ನಲ್ಲಿ ಎಷ್ಟು ಅವ್ಯವಸ್ಥೆ ಎಂದರೆ ದಾಖಲೆಗಳು ಕೂಡ ಸಿಗದೇ, ನೀರಿನಲ್ಲಿ ನೆನೆದು ಹಾಳಾಗಿವೆ. ಇನ್ನೂ ಕೆಲವೊಂದು ದಾಖಲೆಗಳು ಗೊಬ್ಬರದಂತಾಗಿವೆ.

ಈ ವಿಚಾರ ತಿಳಿದು ಜಗಳೂರು ತಾಲೂಕು ಪಂಚಾಯತ್​ ಇಒ ಕೆಂಚಪ್ಪ ಅವರು ಹನುಮಂತಾಪುರ ಗ್ರಾಮ ಪಂಚಾಯತ್​ ದಾಖಲೆ ಕೊಠಡಿಗೆ ಭೇಟಿ ನೀಡಿದರು. ‌ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದರು. ಪಂಚಾಯತ್​ ಅವ್ಯವಸ್ಥೆ ಬಗ್ಗೆ ಇಒ ಪ್ರತಿಕ್ರಿಯೆ:ಈ ಕುರಿತು ಇಒ ಕೆಂಚಪ್ಪ‌ ಈಟಿವಿ ಭಾರತ್​ನೊಂದಿಗೆ ಮಾತನಾಡಿದ್ದು, "ಇದು ನನ್ನ ಗಮನಕ್ಕೆ ಬಂದಿದೆ, ಸ್ಥಳ ಪರಿಶೀಲನೆ ನಡೆಸಿದ್ದೇನೆ, ಹಳೆ ದಾಖಲೆಗಳು ಏನಿರುತ್ತವೆ ಅವುಗಳನ್ನು ಜನರಿಗೆ ಕೊಡುತ್ತೇವೆ. ಸ್ಕ್ಯಾನ್ ಮಾಡುವ ಉಪಕರಣಗಳು ಇಲ್ಲದ ಕಾರಣ ದಾಖಲೆಗಳನ್ನು ಇರಿಸಲಾಗಿದೆ. ಪರಿಶೀಲನೆ ನಡೆಸುತ್ತೇನೆ, ಸ್ಥಳಕ್ಕೆ ಬಂದಿದ್ದು, ನೋಡುತ್ತೇನೆ'' ಎಂದು ಪ್ರತಿಕ್ರಿಯಿಸಿದ್ದಾರೆ.

ಪಾಳು ಬಿದ್ದ ಕೊಠಡಿಯಲ್ಲಿ ದಾಖಲೆಗಳು: ಸಾರ್ವಜನಿಕರು ಯಾವುದೇ ಮಾಹಿತಿ ಕೇಳಿದ್ರು ಸಹ ಕೊಡಲು ಅಧಿಕಾರಿಗಳ ಬಳಿ ದಾಖಲೆಗಳೇ ಇಲ್ಲ. ಕಾರಣ ಎಲ್ಲ ದಾಖಲಾತಿ ಸರ್ವನಾಶವಾಗಿವೆ. ಸಾರ್ವಜನಿಕರ ದಾಖಲೆಗಳು ಎಂದರೆ ಅಧಿಕಾರಿಗಳಿಗೆ ನಿರ್ಲಕ್ಷ್ಯ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ. ಗ್ರಾಮದ ಮುಖಂಡರಾದ ಅಣ್ಣಯ್ಯ ಎಂಬುವವರು ಈಟಿವಿ ಭಾರತ್​​ನೊಂದಿಗೆ ಮಾತನಾಡಿದ್ದು,"ನಮ್ಮೂರ ಪಂಚಾಯಿತಿ ಒಳಗೆ ವ್ಯವಸ್ಥೆ ಹದೆಗೆಟ್ಟಿದೆ, ದಾಖಲೆಗಳು ಕೊಳೆತು ಹೋಗಿವೆ.

ಇ -ಸ್ವತ್ತು ಕೇಳಿದ್ರೆ ಹಣ ಇಲ್ಲದೇ ಕೆಲಸ ನಡೆಯಲ್ಲ, ದಾಖಲೆಗಳು ಪಾಳುಬಿದ್ದಿರುವ ಸ್ಥಳದಲ್ಲಿ ಎಸೆಯಲಾಗಿದೆ. ಎಲ್ಲವೂ ಹಾಳಾಗಿವೆ ಎಂದು ದೂರಿದ್ದಾರೆ. ನಮ್ಮ ದಾಖಲೆಗಳು ನೆನೆದು ಗಬ್ಬೆದ್ದು ಹೋಗಿವೆ. ಶಾಲೆಯ ಕೊಠಡಿಯಲ್ಲಿ ಇರಿಸಿದ್ದ ದಾಖಲೆಗಳು ನೆನೆದು ಹೋಗಿವೆ. ನಮಗೆ ಸೇರಿದ ದಾಖಲೆಗಳನ್ನು ಕೇಳಿದ್ರೆ ಇಲ್ಲವೆಂದು ಸಿಬ್ಬಂದಿ ಸಬೂಬು ಹೇಳ್ತಾರೆ ಎಂದು ಗ್ರಾಮದ ಮುಖಂಡ ಪರಮೇಶ್ ಆರೋಪಿಸಿದ್ದಾರೆ.

📚 Related News