65ರ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿದ ಅಪರಿಚಿತ ದುಷ್ಕರ್ಮಿಗಳು; ಓರ್ವ ಶಂಕಿತ ಪೊಲೀಸ್ ವಶಕ್ಕೆ

65ರ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿದ ಅಪರಿಚಿತ ದುಷ್ಕರ್ಮಿಗಳು; ಓರ್ವ ಶಂಕಿತ ಪೊಲೀಸ್ ವಶಕ್ಕೆ
By Published : October 29, 2025 at 12:47 PM IST

ಥಾಣೆ (ಮಹಾರಾಷ್ಟ್ರ):ಅಪರಿಚಿತರ ಗುಂಪೊಂದು 65ರ ವೃದ್ಧೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಆತಂಕಕಾರಿ ಘಟನೆ ಮಹಾರಾಷ್ಟ್ರದ ಥಾಣೆಯ ಭಿವಂಡಿ ತಾಲೂಕಿನ ಗ್ರಾಮವೊಂದರಿಂದ ವರದಿಯಾಗಿದೆ. ಘಟನೆ ಕುರಿತು ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ಶಂಕಿತನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಕಮಲೇಶ್ ಬಚ್ಚವ್ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಎಸ್​​​ಪಿ ಮತ್ತು ಎಸಿ:ಸಂತ್ರಸ್ತ ಮಹಿಳೆ ಮಂಗಳವಾರ ಹೊಲದ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಮಹಿಳೆಯ ಕುಟುಂಬಸ್ಥರು ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದರು. ತಕ್ಷಣಕ್ಕೆ ಕುಟುಂಬಸ್ಥರು ಗಣೇಶಪುರಿ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಆಗಮಿಸುವ ಹೊತ್ತಿಗೆ ಮಹಿಳೆ ಮೃತಪಟ್ಟಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಇಂದಿರಾ ಗಾಂಧಿ ಮೆಮೋರಿಯಲ್​ ಆಸ್ಪತ್ರೆಗೆ ಸಾಗಿಸಲಾಯಿತು. ಘಟನೆಯ ಮಾಹಿತಿ ತಿಳಿದು ಥಾಣೆ ಗ್ರಾಮೀಣ ಹೆಚ್ಚುವರಿ ಎಸ್ಪಿ ಅಭಿನವ್​ ಮಿತ್ತಲ್​ ಮತ್ತು ಉಪವಿಭಾಗೀಯ ಅಧಿಕಾರಿ ರಾಹುಲ್​ ಝಲ್ಟೆಕೂಡ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲು - ತನಿಖೆ ಚುರುಕು: ಅಪರಿಚಿತ ವ್ಯಕ್ತಿಗಳಿಂದ ಈ ಕೃತ್ಯ ನಡೆದಿದೆ ಎಂಬ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಘಟನೆ ಮಾಹಿತಿ ನೀಡಿದ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಕಮಲೇಶ್ ಬಚ್ಚವ್, ಈ ಘಟನೆ ಕುರಿತು ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಪ್ರಕರಣದ ಶಂಕಿತರಲ್ಲಿ ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಗೌಪ್ಯ ಮಾಹಿತಿ ಮತ್ತು ತಾಂತ್ರಿಕ ತನಿಖೆಯ ಆಧಾರದ ಮೇಲೆ, ಪೊಲೀಸ್ ತನಿಖೆ ನಡೆಯುತ್ತಿದೆ ಎಂದರು.

ಸಾಮೂಹಿಕ ಅತ್ಯಾಚಾರದ ನಂತರ, ಮೃತ ಮಹಿಳೆಯ ಕುತ್ತಿಗೆಯಲ್ಲಿದ್ದ ಸುಮಾರು ಐದರಿಂದ ಆರು ತೊಲ ತೂಕದ ಚಿನ್ನದ ಆಭರಣ ಹಾಗೇ ಇದೆ. ಈ ಹಿನ್ನೆಲೆಯಲ್ಲಿ ಇದು ಕಳ್ಳತನದ ಕೊಲೆಯಲ್ಲ. ಬದಲಾಗಿ ಮಹಿಳೆ ಮೇಲೆ ಅತ್ಯಾಚಾರ ನಡೆಸಲಾಗಿದೆ. ಕೊಲೆಯ ನಂತರ ಆ ಪ್ರದೇಶದಿಂದ ಮೂವರು ಓಡಿ ಹೋಗುತ್ತಿರುವುದನ್ನು ಕೆಲವರು ನೋಡಿದ್ದಾರೆ ಎಂದು ಸಂತ್ರಸ್ತೆಯ ಮಗ ತಿಳಿಸಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸಂತ್ರಸ್ತರ ಕುಟುಂಬ ಬೇಡಿಕೆ ಇರಿಸಿದೆ.

ವೃದ್ಧ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳನ್ನು ಆಕೆ ಗುರುತಿಸಬಹುದೆಂಬ ಭಯದಿಂದ ಮಹಿಳೆಯನ್ನು ಕೊಲೆ ಮಾಡಲಾಗಿದೆ. ಈ ಘಟನೆ ಸಮಾಜ ತಲೆ ತಗ್ಗಿಸುವ ಘಟನೆ ಆಗಿದೆ. ಪೊಲೀಸರು ತಕ್ಷಣ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಮತ್ತು ವಕೀಲರ ಸಂಘದ ಅಧ್ಯಕ್ಷೆ ಅಡ್ ಕಿರಣ್ ಚನ್ನೆ ಒತ್ತಾಯಿಸಿದ್ದಾರೆ. ಈ ಘಟನೆಯ ಬಗ್ಗೆ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

📚 Related News