ನನ್ನ ಆರೋಗ್ಯ ಸುಧಾರಿಸುತ್ತಿದೆ, ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ: ಶ್ರೇಯಸ್ ಅಯ್ಯರ್

ನನ್ನ ಆರೋಗ್ಯ ಸುಧಾರಿಸುತ್ತಿದೆ, ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ: ಶ್ರೇಯಸ್ ಅಯ್ಯರ್
By Published : October 30, 2025 at 1:24 PM IST

Shreyas Iyer Injury Update:ಆಸ್ಟ್ರೇಲಿಯಾದಲ್ಲಿ ಏಕದಿನ ಕ್ರಿಕೆಟ್ ಸರಣಿ ವೇಳೆ ಗಂಭೀರವಾಗಿ ಗಾಯಗೊಂಡ ಟೀಮ್ ಇಂಡಿಯಾ ಉಪನಾಯಕ​ ಮತ್ತು ಸ್ಟಾರ್​ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರು ಐಸಿಯುನಿಂದ ಬಿಡುಗಡೆಗೊಂಡಿದ್ದು, ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ. ಸಿಡ್ನಿಯ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಹರ್ಷಿತ್ ರಾಣಾ ಅವರ ಬೌಲಿಂಗ್‌ನಲ್ಲಿ ಅಲೆಕ್ಸ್ ಕ್ಯಾರಿ ಹೊಡೆದ ಚೆಂಡನ್ನು ಶ್ರೇಯಸ್ ಅಯ್ಯರ್ ಬ್ಯಾಕ್‌ವರ್ಡ್ ಪಾಯಿಂಟ್‌ನಿಂದ ಓಡಿ ಹೋಗಿ ಯಶಸ್ವಿಯಾಗಿ ಕ್ಯಾಚ್ ಮಾಡಿದ್ದರು. ಕ್ಯಾಚ್​ ವೇಳೆ ಬಲವಾಗಿ ನೆಲಕ್ಕೆ ಉರುಳಿ ಬಿದ್ದಿದ್ದರಿಂದ ಅವರ ಎಡ ಪಕ್ಕೆಲುಬಿನಲ್ಲಿ ರಕ್ತಸ್ರಾವವಾಗಿತ್ತು. ಆರಂಭದಲ್ಲಿ ತಂಡದ ಫಿಸಿಯೋ ಚಿಕಿತ್ಸೆ ನೀಡಿದ್ದರು. ನಂತರ ಆರೋಗ್ಯ ಪರಿಸ್ಥಿತಿ ಹದಗೆಟ್ಟಿದ್ದರಿಂದ ತಕ್ಷಣವೇ ಅವರನ್ನು ಸಿಡ್ನಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವೈದ್ಯಕೀಯ ಪರೀಕ್ಷೆಯ ವೇಳೆ ಅಯ್ಯರ್​ ಪಕ್ಕೆಲುಬಿನಲ್ಲಿ ಉಂಟಾದ ಗಾಯದಿಂದ ರಕ್ತಸ್ರಾವವಾಗಿದ್ದು ಗೊತ್ತಾಗಿತ್ತು. ಬಳಿಕ ಉಸಿರಾಟ ತೊಂದರೆಯೂ ಕಾಣಿಸಿಕೊಂಡಿದ್ದರಿಂದ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಅಯ್ಯರ್​ ತಮ್ಮ ಗಾಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡಿರುವ ಅವರು, "ನಾನು ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದೇನೆ. ನನ್ನ ಆರೋಗ್ಯ ಸುಧಾರಿಸುತ್ತಿದೆ.

ನನ್ನನ್ನು ಬೆಂಬಲಿಸಿದ ಮತ್ತು ನನ್ನ ಚೇತರಿಕೆಗಾಗಿ ಪ್ರಾರ್ಥಿಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು. ನಿಮ್ಮ ಪ್ರೀತಿಗೆ ನಾನು ಕೃತಜ್ಞ" ಎಂದು ಬರೆದಿದ್ದಾರೆ. ಅಯ್ಯರ್ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಎರಡು ತಿಂಗಳು ಬೇಕಾಗಬಹುದು ಎಂಬ ಮಾಹಿತಿ ದೊರೆತಿದೆ. ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಅವರು ಹೊರಗುಳಿಯಲಿದ್ದಾರೆ. ಆಸ್ಟ್ರೇಲಿಯಾ ಏಕದಿನ ಸರಣಿಗೂ ಮುನ್ನ ಅಯ್ಯರ್ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿತ್ತು.

ಮೊದಲ ಪಂದ್ಯದಲ್ಲಿ ರನ್ ​ಗಳಿಸುವಲ್ಲಿ ವಿಫಲರಾಗಿದ್ದು, ಎರಡನೇ ಪಂದ್ಯದಲ್ಲಿ ಅರ್ಧಶತಕದಾಟವಾಡಿದ್ದರು. ಅಡಿಲೇಡ್‌ನಲ್ಲಿ ನಡೆದ ಈ ಪಂದ್ಯದಲ್ಲಿ 61 ರನ್ ಪೇರಿಸಿದ್ದರು. ಮೂರನೇ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಗಾಯಗೊಂಡು ಅರ್ಧಕ್ಕೆ ಮೈದಾನ ತೊರೆದಿದ್ದರು. ಭಾರತ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಕಳೆದುಕೊಂಡಿದೆ. ಈ ಪ್ರವಾಸದಲ್ಲಿ ಪ್ರಸ್ತುತ ಟಿ20 ಸರಣಿ ನಡೆಯುತ್ತಿದೆ.

ಐದು ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಎರಡನೇ ಟಿ20 ಪಂದ್ಯ 31ರಂದು ಮೆಲ್ಬರ್ನ್​ನಲ್ಲಿ ನಡೆಯಲಿದೆ. ಮಹಿಳಾ ವಿಶ್ವಕಪ್‌ನಲ್ಲಿ ಇಂದು ಮಹತ್ವದ ಪಂದ್ಯ: ಮಹಿಳಾ ವಿಶ್ವಕಪ್​ನ ಎರಡನೇ ಸೆಮಿಫೈನಲ್ ಪಂದ್ಯ ಇಂದು ಮುಂಬೈನ ಡಿ. ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತ-ಆಸ್ಟ್ರೇಲಿಯಾ ತಂಡಗಳು ಮುಖಾಮುಖಿ ಆಗುತ್ತಿವೆ. ಆಸ್ಟ್ರೇಲಿಯಾ ಇಲ್ಲಿಯವರೆಗೆ ಒಂದೇ ಒಂದು ಪಂದ್ಯವನ್ನೂ ಸೋತಿಲ್ಲ. ಹಾಗಾಗಿ ಭಾರತಕ್ಕೆ ಕಠಿಣ ಸವಾಲು ಎದುರಾಗಲಿದೆ. ಅಲ್ಲದೇ 8 ವರ್ಷದ ಹಳೆಯ ಇತಿಹಾಸ ಮರುಕಳಿಸಿ ಭಾರತ ಫೈನಲ್​ಗೆ ತಲುಪುತ್ತಾ? ಎಂಬುದು ಅಭಿಮಾನಿಗಳ ಕುತೂಹಲ.

📚 Related News