ಹಾವೇರಿ:ಆರ್ಟಿಐ ಕಾರ್ಯಕರ್ತ ಶಕ್ತಿಕುಮಾರ್ ಅವರು ಕಳಪೆ ಕಾಮಗಾರಿ ಎಂದು ಆರೋಪಿಸಿ ನೀಡಿದ ದೂರಿನ ಹಿನ್ನೆಲೆ, ಬೆಂಗಳೂರಿನ ಲೋಕಾಯುಕ್ತ ಅಧಿಕಾರಿಗಳು ಹಾವೇರಿಗೆ ಆಗಮಿಸಿ ಎಜೆಜೆ ಕನ್ಸ್ಟ್ರಕ್ಷನ್ಸ್ ಕಂಪನಿ ನಿರ್ಮಾಣ ಮಾಡುತ್ತಿರುವ ಮನೆಗಳ ಕಾಮಗಾರಿ ಪರಿಶೀಲನೆ ನಡೆಸಿದರು. ಬಡವರಿಗಾಗಿ 1,112 ಮನೆ ನಿರ್ಮಾಣ:ಹಾವೇರಿ ನಗರದ ವಿವಿಧೆಡೆ ಇರುವ ನಿರ್ಗತಿಕರಿಗೆ, ಬಡವರಿಗೆ, ಅಲೆಮಾರಿಗಳಿಗೆ ಸರ್ಕಾರ ಮನೆ ಕಟ್ಟಿಸಲು 3 ವರ್ಷದ ಹಿಂದೆ ಮುಂದಾಗಿತ್ತು. ಅದರಂತೆ ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಸುಮಾರು 1,112 ಜಿ ಪ್ಲಸ್ ಒನ್ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಹಾವೇರಿಯ ಶಾಂತಿನಗರದಲ್ಲಿ 440 ಮನೆಗಳು ಮತ್ತು ವೀರಾಪುರ ರಸ್ತೆಯಲ್ಲಿರುವ ಖಾಲಿ ಜಾಗದಲ್ಲಿ 672 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಮೂರು ವರ್ಷಗಳ ಹಿಂದೆ ಕಾಮಗಾರಿ ಆರಂಭವಾಗಿದ್ದು, ಶಾಂತಿನಗರದಲ್ಲಿನ ಮನೆಗಳು ಭಾಗಶಃ ಮುಕ್ತಾಯದ ಹಂತದಲ್ಲಿವೆ.
ಆದರೆ ವೀರಾಪುರ ರಸ್ತೆಯಲ್ಲಿರುವ 472 ಮನೆಗಳ ಕಾಮಗಾರಿ ಕುಂಟುತ್ತಾ ಸಾಗಿದೆ. ಕೆಲ ಮನೆಗಳ ಕಾಮಗಾರಿಗಳು ಅರ್ಧಕ್ಕೆ ನಿಂತರೆ ಇನ್ನೂ ಕೆಲ ಮನೆಗಳು ಪ್ಲಿಂತ್ ಹಾಕಿ ಬಿಡಲಾಗಿದೆ. ಎಜೆಜೆ ಕನ್ಸ್ಟ್ರಕ್ಷನ್ ಕಂಪನಿಗೆ ಗುತ್ತಿಗೆ:67 ಕೋಟಿ ರೂಪಾಯಿ ವೆಚ್ಚದಲ್ಲಿ 1112 ಜಿ ಪ್ಲಸ್ ಒನ್ ಮನೆಗಳ ನಿರ್ಮಾಣ ಕಾಮಗಾರಿಯನ್ನು ಸರ್ಕಾರ ಸಿಂಧನೂರಿನ ಎಜೆಜೆ ಕನ್ಸ್ಟ್ರಕ್ಷನ್ಸ್ ಕಂಪನಿಗೆ ಗುತ್ತಿಗೆ ನೀಡಿದೆ. ಕಳೆದ ಮೂರು ವರ್ಷಗಳಿಂದ ಗುತ್ತಿಗೆದಾರರು ಕಾಮಗಾರಿ ಕೈಗೊಂಡಿದ್ದಾರೆ. ಮಳೆಗಾಲ ಸೇರಿದಂತೆ ವಿವಿಧ ಕಾರಣಗಳಿಂದ ವೀರಾಪುರ ರಸ್ತೆಯಲ್ಲಿರುವ ಮನೆಗಳ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ.
ಆದರೆ, ಶಾಂತಿನಗರದಲ್ಲಿರುವ 440 ಮನೆಗಳ ಕಾಮಗಾರಿ ಮುಕ್ತಾಯವಾಗಿದ್ದು, ಡಿಸೆಂಬರ್ ತಿಂಗಳಲ್ಲಿ ಫಲಾನುಭವಿಗಳಿಗೆ ಹಸ್ತಾಂತರ ಮಾಡುವುದಾಗಿ ಕಂಪನಿ ತಿಳಿಸಿದೆ. ಕಳಪೆ ಕಾಮಗಾರಿ ಆರೋಪ:ಈ ಮಧ್ಯೆ ಎಜೆಜೆ ಕನ್ಸ್ಟ್ರಕ್ಷನ್ಸ್ ಕಂಪನಿ ಗುತ್ತಿಗೆ ನಿಯಮ ಉಲ್ಲಂಘಿಸಿ ಕಳೆಪ ಮನೆಕಟ್ಟುತ್ತಿದೆ ಎಂದು ಆರ್ಟಿಐ ಕಾರ್ಯಕರ್ತ ಶಕ್ತಿಕುಮಾರ್ ಆರೋಪಿಸಿದ್ದಾರೆ. ನಿಗದಿತ ಪ್ರಮಾಣದಲ್ಲಿ ಸಿಮೆಂಟ್, ಜಲ್ಲಿಕಲ್ಲು ಬಳಕೆ ಮಾಡುತ್ತಿಲ್ಲ, ನಿರ್ದಿಷ್ಟಪಡಿಸಿದ ತೂಕದ ಕಬ್ಬಿಣ ಬಳಕೆ ಮಾಡುತ್ತಿಲ್ಲ. ಈ ರೀತಿಯ ಮನೆಗಳಲ್ಲಿ ಬಡವರು ವಾಸಿಸಿದರೆ ಜೀವಹಾನಿ ಕಟ್ಟಿಟ್ಟ ಬುತ್ತಿ, ಕಾಮಗಾರಿ ಕಳಪೆಯಾಗಿದ್ದು ತನಿಖೆ ನಡೆಸುವಂತೆ ಶಕ್ತಿಕುಮಾರ್ ಬೆಂಗಳೂರು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದಾರೆ. ಹಾವೇರಿಗೆ ಆಗಮಿಸಿದ ಬೆಂಗಳೂರು ಲೋಕಾಯುಕ್ತರು:ಶಕ್ತಿಕುಮಾರ್ ದೂರಿನ ಹಿನ್ನೆಲೆಯಲ್ಲಿ ಬೆಂಗಳೂರಿನ ಲೋಕಾಯುಕ್ತ ಅಧಿಕಾರಿಗಳು ಹಾವೇರಿಗೆ ಆಗಮಿಸಿ ಎಜೆಜೆ ಕನ್ಸ್ಟ್ರಕ್ಷನ್ಸ್ ಕಂಪನಿ ನಿರ್ಮಾಣ ಮಾಡುತ್ತಿರುವ ಮನೆಗಳ ಕಾಮಗಾರಿ ಪರಿಶೀಲನೆ ನಡೆಸಿದರು.
ಗುತ್ತಿಗೆ ನೀಡುವಾಗ ಇದ್ದ ನಿಯಮಗಳು ಮನೆ ನಿರ್ಮಾಣಕ್ಕೆ ಬಳಸಿದ ಸಿಮೆಂಟ್, ಕಬ್ಬಿಣ ಸೇರಿದಂತೆ ಸ್ಲಾಬ್‌ಗಳನ್ನು ಅಧಿಕಾರಿಗಳ ತಂಡ ಪರಿಶೀಲನೆ ಮಾಡಿತು. ಹಾವೇರಿಯ ವೀರಾಪುರ ರಸ್ತೆಯಲ್ಲಿರುವ 672 ಮನೆಗಳ ಕಾಮಗಾರಿ ಮತ್ತು ಶಾಂತಿನಗರದಲ್ಲಿರುವ 440 ಮನೆಗಳ ಕಾಮಗಾರಿಯನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಆರೋಪ ತಳ್ಳಿಹಾಕಿದ ಎಜೆಜೆ ಕನ್ಸ್ಟ್ರಕ್ಷನ್ಸ್ ಕಂಪನಿ: ಆದರೆ, ಸಿಂಧನೂರಿನ ಎಜೆಜೆ ಕನ್ಸ್ಟ್ರಕ್ಷನ್ಸ್ ಕಂಪನಿ ಗುತ್ತಿಗೆದಾರರು ಕಳಪೆ ಕಾಮಗಾರಿ ಆರೋಪವನ್ನು ತಳ್ಳಿಹಾಕಿದ್ದಾರೆ. ಸರ್ಕಾರ ನಿಗದಿಪಡಿಸಿದ ಮಾನದಂಡಗಳ ಮೇಲೆ ಕಟ್ಟಡ ಕಟ್ಟುತ್ತಿದ್ದೇವೆ. ಎಸ್ಟಿಮೇಟ್ ಪ್ರಕಾರ ಸಿಮೆಂಟ್, ಕಬ್ಬಿಣ ಹಾಗೂ ಕಾಂಕ್ರೀಟ್ ಹಾಕಿದ್ದೇವೆ.
ಬಡವರಿಗೆ ಮನೆ ನಿರ್ಮಿಸಿಕೊಡುತ್ತಿದ್ದೇವೆ. ನೀವು ತೋರಿಸಿದ ಮನೆಯಲ್ಲಿ ಒಂದು ತಿಂಗಳು ನಾನೇ ಇದ್ದು ತೋರಿಸುತ್ತೇನೆ ಎಂದು ಗುತ್ತಿಗೆದಾರ ಪ್ರಸನ್ನ ತಿಳಿಸಿದರು. ನಾವು ರಾಜ್ಯದ ವಿವಿಧಡೆ ಸುಮಾರು 500 ಕೋಟಿ ರೂಪಾಯಿ ಗುತ್ತಿಗೆ ಕೆಲಸ ಮಾಡುತ್ತಿದ್ದೇವೆ. ಇದರಲ್ಲಿ ಯಾವುದೇ ಕಳಪೆ ಕಾಮಗಾರಿ ಕೈಗೊಂಡಿಲ್ಲ. ಒಂದು ವೇಳೆ ಕಳಪೆ ಕಾಮಗಾರಿ ಪತ್ತೆಯಾದರೆ ನಮ್ಮ ಮೇಲೆ ಕ್ರಮ ಕೈಗೊಳ್ಳಲಿ ಎಂದು ತಿಳಿಸಿದ್ದಾರೆ.







