'ಜನರು ಎನ್​​ಟಿಆರ್‌ರನ್ನು ಕೃಷ್ಣನಂತೆ ಪೂಜಿಸಿದರು': ರಣ್​​ಬೀರ್​ ರಾಮನ ಪಾತ್ರದ ಸುತ್ತಲಿನ ಟೀಕೆಗೆ ಸದ್ಗುರು ಪ್ರತಿಕ್ರಿಯೆ

'ಜನರು ಎನ್​​ಟಿಆರ್‌ರನ್ನು ಕೃಷ್ಣನಂತೆ ಪೂಜಿಸಿದರು': ರಣ್​​ಬೀರ್​ ರಾಮನ ಪಾತ್ರದ ಸುತ್ತಲಿನ ಟೀಕೆಗೆ ಸದ್ಗುರು ಪ್ರತಿಕ್ರಿಯೆ
By Published : October 30, 2025 at 4:15 PM IST

ದಕ್ಷಿಣ ಚಿತ್ರರಂಗದ ಖ್ಯಾತ ನಟಿ ಸಾಯಿ ಪಲ್ಲವಿ ಅವರ ಬೀಚ್ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಇತ್ತೀಚೆಗೆ ವೈರಲ್ ಆಗಿ ಸಾಕಷ್ಟು ಟೀಕೆಗಳನ್ನು ಎದುರಿಸಿದರು. ಸ್ವಿಮ್​​​ ಡ್ರೆಸ್​​ ಧರಿಸಿದ್ದಕ್ಕಾಗಿ ಅನೇಕರು ನಟಿಯನ್ನು ಟ್ರೋಲ್ ಮಾಡಿದ್ರು. ನಿತೇಶ್ ತಿವಾರಿ ಅವರ ಮಹತ್ವಾಕಾಂಕ್ಷೆಯ ಸಿನಿಮಾ 'ರಾಮಾಯಣ'ದಲ್ಲಿ ಸೀತೆಯ ಪಾತ್ರದಲ್ಲಿ ನಟಿಸುತ್ತಿರುವುದರಿಂದ ಸ್ವಿಮ್​ ಡ್ರೆಸ್​ ಫೋಟೋಗಳಿಗೆ ಟೀಕೆಗಳು ಕೊಂಚ ಹೆಚ್ಚೇ ಇದ್ದವು. ನಂತರ ಸಾಯಿ ಪಲ್ಲವಿ ಟ್ರೋಲ್‌ಗಳಿಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದರು. ತಮ್ಮ ಕುಟುಂಬ ಪ್ರವಾಸದ ಫೋಟೋ ವಿಡಿಯೋಗಳನ್ನು ಪೋಸ್ಟ್ ಮಾಡಿ, ಇವು ನಿಜವಾದವು ಮತ್ತು ಎಐ ರಚಿತವಲ್ಲ ಎಂದು ಬರೆದುಕೊಂಡಿದ್ದರು.

ಅವರ ಈ ಪೋಸ್ಟ್ ನಂತರ, ಟ್ರೋಲ್​​ ಶಾಂತವಾದಂತೆ ತೋರಿದೆ. ಆದರೆ ಈ ಘಟನೆಯು ಪೌರಾಣಿಕ ಪಾತ್ರಗಳನ್ನು ನಿರ್ವಹಿಸುವಾಗ ಕಲಾವಿದರು ಎಷ್ಟು ಒತ್ತಡವನ್ನು ಎದುರಿಸುತ್ತಾರೆ ಎಂಬುದನ್ನು ತೋರಿಸಿದೆ. ಇದಕ್ಕೂ ಮೊದಲು, ಬಾಲಿವುಡ್​​ ಸೂಪರ್​​ ಸ್ಟಾರ್​​ ರಣ್​​​ಬೀರ್ ಕಪೂರ್ ಅವರನ್ನು ರಾಮನ ಪಾತ್ರಕ್ಕೆ ಆಯ್ಕೆ ಮಾಡಿದ್ದರ ಬಗ್ಗೆಯೂ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಇತ್ತೀಚೆಗೆ, ಇಶಾ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರೊಂದಿಗೆ ಮಾತನಾಡುವಾಗ, ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಅವರ ಮಾತುಕತೆಯ ಸಂದರ್ಭ, ತೆಲುಗು ಲೆಜೆಂಡರಿ ಆ್ಯಕ್ಟರ್ ಎನ್.

ಟಿ. ರಾಮರಾವ್ ಪರದೆ ಮೇಲೆ ಪೌರಾಣಿಕ ಪಾತ್ರಗಳನ್ನು ಹೇಗೆ ನಿರ್ವಹಿಸಿದರು ಎಂಬುದರ ಕುರಿತು ಮಾತನಾಡಿದರು. ರಾಮಾಯಣ ನಟರಿಂದ ಅವಾಸ್ತವಿಕ ನಿರೀಕ್ಷೆಗಳ ಕುರಿತು ಸದ್ಗುರು ಹೇಳಿದ್ದಿಷ್ಟು:ನಮಿತ್ ಮಲ್ಹೋತ್ರಾ ಇತ್ತೀಚೆಗೆ ಇಶಾ ಫೌಂಡೇಶನ್‌ಗೆ ಭೇಟಿ ನೀಡಿದ್ದರು. ರಾಮಾಯಣದ ಕುರಿತು ಸದ್ಗುರುಗಳೊಂದಿಗಿನ ತಮ್ಮ ಮಾತುಕತೆಯನ್ನು ಚಿತ್ರದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ರಾಮ, ಹನುಮಾನ್ ಮತ್ತು ಸೀತೆಯ ಪಾತ್ರಗಳನ್ನು ನಿರ್ವಹಿಸುವ ನಟರ ವಿಷಯವನ್ನು ನಮಿತ್ ಪ್ರಸ್ತಾಪಿಸಿದಾಗ, ಅವರು ಆ ದೈವಿಕ ವ್ಯಕ್ತಿಗಳಂತೆ ಆಗಬೇಕೆಂದು ಜನರು ನಿರೀಕ್ಷಿಸುತ್ತಾರೆ ಎಂದು ಹೇಳಿದರು.

"ಅವರಿಗೆ ಬುದ್ಧಿ ಇದ್ದರೆ, ಅವರು ಹಾಗೆ ಆಗಬೇಕು. ರಾಮನ ಪಾತ್ರ ಮಾಡುವುದು ಅಪರೂಪದ ಅವಕಾಶ, ಆದ್ದರಿಂದ ಅವರು (ಅವಕಾಶ ಸಿಕ್ಕವರು) ತಮ್ಮನ್ನು ತಾವು ಪರಿವರ್ತಿಸಿಕೊಳ್ಳಬೇಕು. ಅಂತಹ ಅವಕಾಶ ನಿಮಗೆ ಬೇರೆ ಯಾವಾಗ ಸಿಗುತ್ತದೆ? ಆದರೂ, ಯಾವಾಗಲೂ ಅವಾಸ್ತವಿಕ ನಿರೀಕ್ಷೆಗಳು ಇರುತ್ತವೆ" ಎಂದು ಸದ್ಗುರು ಉತ್ತರಿಸಿದರು. 'ಜನರು ಎನ್‌ಟಿಆರ್‌ರನ್ನು ಕೃಷ್ಣನಂತೆ ಪೂಜಿಸುತ್ತಿದ್ದರು, ಏಕೆಂದರೆ':ತೆಲುಗು ಸಿನಿಮಾ ದಿಗ್ಗಜ ಎನ್. ಟಿ.

ರಾಮರಾವ್ ಅವರ ಉದಾಹರಣೆಯನ್ನು ನೀಡಿದ ಸದ್ಗುರು, "ತೆಲುಗು ಚಿತ್ರರಂಗದಲ್ಲಿ, ಜನರು ಎನ್. ಟಿ. ಆರ್ ಅವರನ್ನು ಕೃಷ್ಣ ಎಂದು ಪೂಜಿಸುತ್ತಿದ್ದರು. ಏಕೆಂದರೆ ಅವರು 15 ಅಥವಾ 16 ಚಿತ್ರಗಳಲ್ಲಿ ಆ ಪಾತ್ರವನ್ನು ನಿರ್ವಹಿಸಿದ್ದರು. ಬೃಹತ್ ಕಟೌಟ್‌ಗಳಲ್ಲಿ ಅವರು ಕೊಳಲಿನೊಂದಿಗೆ ಕಾಣಿಸಿಕೊಂಡಿದ್ದರು.

ಆ ಇಮೇಜ್‌ನಿಂದಾಗಿ ಅವರು ಚುನಾವಣೆಗಳಲ್ಲಿ ಗೆದ್ದರು. ಸ್ವಲ್ಪ ಮಟ್ಟಿಗೆ, ಇದು ಇಂದಿಗೂ ಮುಂದುವರೆದಿದೆ. ಯಾರಾದರೂ ರಾಮನಾಗಿ ನಟಿಸಿದರೆ, ನಾನು ಅವರಿಂದ ಸ್ವಲ್ಪ ಸೌಮ್ಯತೆಯನ್ನು ನಿರೀಕ್ಷಿಸುತ್ತೇನೆ. ಆದರೆ ಅದು ನಟನಿಗೆ ಅನ್ಯಾಯವಾಗುತ್ತದೆ. ಏಕೆಂದರೆ ಅದು ಕೇವಲ ಒಂದು ವೃತ್ತಿ.

ಅವರು ಕೇವಲ ನಟಿಸುತ್ತಿದ್ದಾರೆ. ಆದರೂ, ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದರೆ ನಟನಿಗೆ ಕೆಲ ಗುಣಗಳನ್ನು ಅಳವಡಿಸಿಕೊಳ್ಳಲು ಸಹಾಯವಾದರೆ, ಅದು ಅದ್ಭುತವಾಗಿರುತ್ತದೆ" ಎಂದು ತಿಳಿಸಿದರು. 'ದೊಡ್ಡ ಜವಾಬ್ದಾರಿ': ರಣ್​​ಬೀರ್ ಅವರ ಹಿಂದಿನ ಪಾತ್ರಗಳು ಅಥವಾ ಹೇಳಿಕೆಗಳಿಂದಾಗಿ ಕೆಲ ಅಭಿಮಾನಿಗಳು ರಾಮನ ಪಾತ್ರಕ್ಕೆ ಅವರ ಆಯ್ಕೆಯನ್ನು ನಿರಾಕರಿಸುತ್ತಾರೆ ಎಂಬುದನ್ನು ನಮಿತ್ ಇದೇ ವೇಳೆ ಉಲ್ಲೇಖಿಸಿದರು. ಪ್ರತಿಕ್ರಿಯಿಸಿದ ಸದ್ಗುರು, "ಅದು ನ್ಯಾಯಯುತವಲ್ಲ. ಅವರು ಕೇವಲ ಪಾತ್ರವೊಂದರಲ್ಲಿ ನಟಿಸಿದ್ದರು.

ನಾಳೆ ಅವರು ರಾವಣನ ಪಾತ್ರವನ್ನೂ ಮಾಡಬಹುದು. ವೃತ್ತಿಪರ ನಟರು ಅದನ್ನೇ ಮಾಡುತ್ತಾರೆ. ಆದರೆ, ಒಂದು ಚಿತ್ರ ಯಶಸ್ವಿಯಾಗುವುದು ಪ್ರೇಕ್ಷಕರಿಂದಾಗಿ, ನಟರು ಅಥವಾ ನಿರ್ದೇಶಕರಿಂದಲ್ಲ. ಆದ್ದರಿಂದ ಪ್ರೇಕ್ಷಕರ ನಿರೀಕ್ಷೆಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ಇದು ದೊಡ್ಡ ಜವಾಬ್ದಾರಿ.

ಆದರೆ ನಟ ಮತ್ತು ನಿರ್ದೇಶಕ ಇಬ್ಬರೂ ರಾಮನ ಸ್ವಭಾವವನ್ನು ಸ್ವಲ್ಪಮಟ್ಟಿಗೆ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು" ಎಂದು ತಿಳಿಸಿದರು. ರಾಮಾಯಣವನ್ನು ಎರಡು ಭಾಗಗಳ ಚಿತ್ರವಾಗಿ ನಿರ್ಮಿಸಲಾಗುತ್ತಿದೆ. ಇದು ಅತ್ಯಂತ ದುಬಾರಿ ಅಥವಾ ಬಿಗ್​​ ಬಜೆಟ್ ಭಾರತೀಯ ಚಿತ್ರ ಎಂದು ಹೇಳಲಾಗಿದೆ. ಈ ಸಿನಿಮಾದ ಬಜೆಟ್ 4,000 ಕೋಟಿ ರೂಪಾಯಿ ಮೀರಲಿದೆ ಎಂದು ನಮಿತ್ ಈ ಹಿಂದೆ ದೃಢಪಡಿಸಿದ್ದರು. ರಣ್​ಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಹೊರತುಪಡಿಸಿ, ಚಿತ್ರದಲ್ಲಿ ರಾವಣನಾಗಿ ಕನ್ನಡದ ಯಶ್, ಲಕ್ಷ್ಮಣನಾಗಿ ರವಿ ದುಬೆ ಮತ್ತು ಹನುಮಂತನಾಗಿ ಸನ್ನಿ ಡಿಯೋಲ್ ಕಾಣಿಸಿಕೊಳ್ಳಲಿದ್ದಾರೆ.

ಮೊದಲ ಭಾಗವು 2026ರ ದೀಪಾವಳಿಯಂದು ಬಿಡುಗಡೆಯಾಗಲಿದ್ದು, ಎರಡನೇ ಭಾಗವು 2027ರ ದೀಪಾವಳಿಯಂದು ಬಿಡುಗಡೆಯಾಗಲಿದೆ.

📚 Related News