ಬಳ್ಳಾರಿ ಯುವಕನ ಅನುಮಾನಾಸ್ಪದ ಸಾವು: 10 ಆರೋಪಿಗಳ ಬಂಧನ

ಬಳ್ಳಾರಿ ಯುವಕನ ಅನುಮಾನಾಸ್ಪದ ಸಾವು: 10 ಆರೋಪಿಗಳ ಬಂಧನ
By Published : October 29, 2025 at 11:21 AM IST

ಬಳ್ಳಾರಿ: ತಾಲೂಕಿನ ಅಸುಂಡಿ ಗ್ರಾಮದ ರವಿ ಎನ್ನುವ ಯುವಕನ ಅಸಹಜ, ಸಂಶಯಾಸ್ಪದ ಸಾವು ಪ್ರಕರಣ, ಕೊಲೆ ಎಂಬುದು ಖಚಿತಗೊಂಡಿದೆ. ಕೊಲೆ ಮಾಡಿದ ಆರೋಪಿಗಳನ್ನು, ಪರಮದೇವನಹಳ್ಳಿ (ಪಿ. ಡಿ. ಹಳ್ಳಿ) ಠಾಣೆಯ ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.

ಜೆ. ಅವರು ತಿಳಿಸಿದ್ದಾರೆ. ಅ. 24ರ ನಸುಕಿನ ಜಾವದಲ್ಲಿ ಅಸುಂಡಿ ಗ್ರಾಮದ ಬಳಿ ಇರುವ ಬೈಪಾಸ್ ರಸ್ತೆ ಸಮೀಪದ ಬಳ್ಳಾರಿ-ಅಸುಂಡಿ ಮಾರ್ಗದ ತಗ್ಗಿನಲ್ಲಿ ರವಿಕುಮಾರ್ ಎನ್ನುವ ಯುವಕನ ಶವ ಪತ್ತೆಯಾಗಿತ್ತು. ರವಿಕುಮಾರನ ಹಣೆ, ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು.

ಇದೊಂದು ಅಪಘಾತ ಪ್ರಕರಣ ಎನ್ನುವಂತೆ ಸೃಷ್ಟಿ ಮಾಡಲಾಗಿತ್ತು. ಅಪಘಾತ ಸಂಭವಿಸಿರಬಹುದು ಎಂದು ಆರಂಭದಲ್ಲಿ ಶಂಕಿಸಲಾಗಿತ್ತಾದರೂ, ರವಿಯವರ ಕುಟುಂಬದವರು, ಹಳೆಯ ದ್ವೇಷ-ವೈಷಮ್ಯಗಳ ಹಿನ್ನೆಲೆಯಲ್ಲಿ ಅಸುಂಡಿ ಗ್ರಾಮದ ಕೆಲವರು ಕೊಲೆ ಮಾಡಿರುವ ಅನುಮಾನವಿದೆ ಎಂದು ಹೇಳಿ ಪೊಲೀಸರಿಗೆ ದೂರು ನೀಡಿದ್ದರು ಎಂದು ಹೇಳಿದರು. ಈ ಬಗ್ಗೆ ಪಿ. ಡಿ. ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಎಸ್ಪಿ ಡಾ. ಶೋಭಾರಾಣಿ, ಎಎಸ್‌ಪಿ ನವೀನ್‌ ಕುಮಾರ್ ಮಾರ್ಗದರ್ಶನದಲ್ಲಿ, ಬಳ್ಳಾರಿ ಗ್ರಾಮೀಣ (ಸಿರುಗುಪ್ಪ) ಡಿವೈಎಸ್‌ಪಿ ಮಾಲತೇಶ್ ಕೂನಬೇವು, ಪಿ. ಡಿ. ಹಳ್ಳಿ ಸಿಪಿಐ ಎಲ್. ರುದ್ರಪ್ಪ ನೇತೃತ್ವದಲ್ಲಿ, ಬಳ್ಳಾರಿ ಗ್ರಾಮೀಣ ಠಾಣೆಯ ಪಿಐ ಎನ್.

ಸತೀಶ್, ಮೋಕಾ ಪಿಎಸ್‌ಐ ಎ. ಕಳಿಂಗ, ಪಿ. ಡಿ. ಹಳ್ಳಿಯ ಪಿಎಸ್‌ಐ ಎಂ. ಜಿ.

ತಿಮ್ಮಾರೆಡ್ಡಿ, ಹೆಚ್. ಸಿ. ಪ್ರವೀಣ್ ಹಾಗೂ ಇತರ ಪೊಲೀಸ್ ಸಿಬ್ಬಂದಿ ವರ್ಗದವರು ಸಮಗ್ರ ತನಿಖೆ ನಡೆಸಿ, ಕೊಲೆ ಪ್ರಕರಣ ದಾಖಲಾದ ಎರಡೇ ದಿನಗಳಲ್ಲಿ ರವಿಕುಮಾರ್ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು. ಬಂಧಿತ ಆರೋಪಿಗಳನ್ನು ಅಸುಂಡಿ ಗ್ರಾಮದ ದೊಡ್ಡ ಹೊನ್ನೂರಸ್ವಾಮಿ ಅಲಿಯಾಸ್ ರಿಕ್ಕಿ, ಶೇಖರ್ ಅಲಿಯಾಸ್ ಉದ್ದೇಹಾಳ್ ಶೇಖರ್, ದುಬ್ಬು ಹೊನ್ನೂರುಸ್ವಾಮಿ, ದೊಡ್ಡ ಈರಪ್ಪ, ನಾಗರಾಜ, ಆಟೋ ಎರೆಸ್ವಾಮಿ, ಪ್ರಕಾಶ್​, ಸುರೇಂದ್ರ, ಹೊನ್ನೂರಸ್ವಾಮಿ ಅಲಿಯಾಸ್ ಅಗಸರ ಹೊನ್ನೂರಸ್ವಾಮಿ, ಹಾಗೂ ಪ್ರಸಾದ್ ಎಂದು ಗುರುತಿಸಲಾಗಿದ್ದು, ಅವರಿಂದ ಕೃತ್ಯಕ್ಕೆ ಬಳಸಿದ ಆಯುಧಗಳನ್ನು ಹಾಗೂ ಎರಡು ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು. ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪಿ. ಡಿ. ಹಳ್ಳಿ ಪೊಲೀಸರ ಈ ತನಿಖಾ ಕಾರ್ಯವನ್ನು ಎಸ್ಪಿ ಶೋಭಾರಾಣಿ ಶ್ಲಾಘಿಸಿ, ಅಭಿನಂದಿಸಿದ್ದಾರೆ.

📚 Related News