AB de Villiers on Kohli:ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ವೃತ್ತಿಜೀವನದ ಅಂತ್ಯದಲ್ಲಿದ್ದಾರೆ ಎಂಬ ಸುದ್ದಿಗಳು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿವೆ. ಕೊಹ್ಲಿ ಈಗಾಗಲೇ ಟಿ20 ಮತ್ತು ಟೆಸ್ಟ್ ಸ್ವರೂಪಗಳಿಂದ ನಿವೃತ್ತರಾಗಿರುವುದು ಗೊತ್ತಿರುವ ವಿಷಯ. ಪ್ರಸ್ತುತ ಏಕದಿನ ಪಂದ್ಯಗಳಲ್ಲಿ ಮಾತ್ರ ಆಡುತ್ತಿದ್ದಾರೆ. ಆದಾಗ್ಯೂ, ಆಸೀಸ್ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಅವರು ಮೊದಲ ಎರಡು ಪಂದ್ಯಗಳಲ್ಲಿ ಸತತ ಡಕೌಟ್ ಆಗಿದ್ದರು. ಮೂರನೇ ಪಂದ್ಯದಲ್ಲಿ ಲಯ ಕಂಡುಕೊಂಡರು ಮತ್ತು 74 ರನ್‌ಗಳೊಂದಿಗೆ ಅಜೇಯ ಇನ್ನಿಂಗ್ಸ್ ಆಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ವಿರಾಟ್ ಅವರ ಈ ಇನ್ನಿಂಗ್ಸ್ ನಂತರ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಕೆಲ ಆಸಕ್ತಿಕರ ಕಾಮೆಂಟ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಇನ್ನೂ ಎಷ್ಟು ಕ್ರಿಕೆಟ್ ಆಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ. "ನನ್ನ ಪ್ರಕಾರ ಕೊಹ್ಲಿ ಇನ್ನೂ ಐದು ವರ್ಷಗಳ ಕಾಲ ಕ್ರಿಕೆಟ್ ಆಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ನನ್ನ ಅಭಿಪ್ರಾಯದಲ್ಲಿ, ಕೊಹ್ಲಿ 2027ರ ಏಕದಿನ ವಿಶ್ವಕಪ್ ನಂತರ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ವಿದಾಯ ಹೇಳಬಹುದು". "ಆದರೆ ಅವರು ಐಪಿಎಲ್‌ನಲ್ಲಿ ಮುಂದುವರಿಯುತ್ತಾರೆ.
ಅವರು ಇನ್ನೂ ಮೂರು ಅಥವಾ ನಾಲ್ಕು ವರ್ಷಗಳ ಕಾಲ ಮೈದಾನದಲ್ಲಿ ಇರುತ್ತಾರೆ, ಸಾಧ್ಯವಾದರೆ ಐದು ವರ್ಷಗಳ ಕಾಲ ಕ್ರಿಕೆಟ್ ಆಡಲಿದ್ದಾರೆ. ಆದರೂ ಐಪಿಎಲ್‌ಗಿಂತ ವಿಶ್ವಕಪ್‌ಗೆ ತಯಾರಿ ನಡೆಸಲು ಹೆಚ್ಚು ಸಮಯವನ್ನು ಕಳೆಯಬೇಕಾಗುತ್ತದೆ" ಎಂದು ಡಿವಿಲಿಯರ್ಸ್ ತಿಳಿಸಿದ್ದಾರೆ. ತಂಡದಲ್ಲಿ ವಿರಾಟ್ ಕೊಹ್ಲಿಯ ಪಾತ್ರ ಎಷ್ಟು ಮುಖ್ಯ ಎಂಬುದನ್ನು ಸಹ ಅವರು ವಿವರಿಸಿದರು. "ಕೊಹ್ಲಿ ತಂಡದಲ್ಲಿದ್ದರೆ ಸಾಕು ಇತರ ಯುವ ಆಟಗಾರರು ಮಾನಸಿಕವಾಗಿ ಬಲಿಷ್ಠರಾಗುತ್ತಾರೆ. ವಿರಾಟ್ ಮತ್ತು ರೋಹಿತ್ ಶರ್ಮಾ ಇತರ ಆಟಗಾರರಲ್ಲಿ ಆತ್ಮವಿಶ್ವಾಸ ತುಂಬುತ್ತಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ಇನ್ನೊಂದು ವಿಷಯವೆಂದರೆ ಅವರು ಕೆಲವೊಮ್ಮೆ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೂ, ಫೀಲ್ಡಿಂಗ್ ಮೂಲಕ ತಂಡದಲ್ಲಿ ತಮ್ಮದೇ ಆದ ಛಾಪು ಮೂಡಿಸಬಲ್ಲರು" ಎಂದು ಎಬಿ ಡಿವಿಲಿಯರ್ಸ್ ವಿಶ್ಲೇಷಿಸಿದ್ದಾರೆ. ರೋಹಿತ್ ಕೊಹ್ಲಿ ಟೀಕಿಸುವವರಿಗೆ ಡಿವಿಲಿಯರ್ಸ್ ಸ್ಟ್ರಾಂಗ್ ಕೌಂಟರ್:ಇದೇ ವೇಳೆ, ರೋ-ಕೊ ಟೀಕಕಾರರಿಗೆ ಎಬಿ ಡಿವಿಲಿಯರ್ಸ್ ಚಾಟಿ ಬೀಸಿದ್ದಾರೆ. ದೇಶ ಮತ್ತು ಕ್ರಿಕೆಟ್‌ಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಆಟಗಾರರನ್ನು ಕೆಲವರು ಏಕೆ ಟೀಕಿಸಲು ಬಯಸುತ್ತಾರೆಂದು ನನಗೆ ಅರ್ಥವಾಗುತ್ತಿಲ್ಲ. ನಾನು ಅವರನ್ನು ಮನುಷ್ಯರು ಎಂದು ಕರೆಯಬೇಕೇ ಎಂದು ನನಗೆ ಅರ್ಥವಾಗುತ್ತಿಲ್ಲ. ಆಟಗಾರರು ತಮ್ಮ ವೃತ್ತಿಜೀವನದ ಅಂತ್ಯಕ್ಕೆ ತಲುಪಿದ ತಕ್ಷಣ, ಕೆಲವರು ಜಿರಳೆಗಳಂತೆ ರಂಧ್ರಗಳಿಂದ ಹೊರಬರಲು ಪ್ರಾರಂಭಿಸುತ್ತಾರೆ.
ಇದು ಏಕೆ ಎಂದು ಇಂದಿಗೂ ತಿಳಿಯದ ಸಂಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. "ಈ ಇಬ್ಬರೂ ಕಳೆದ ಕೆಲವು ತಿಂಗಳುಗಳಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ಎಲ್ಲರೂ ಅವರ ಕ್ರಿಕೆಟ್ ವೃತ್ತಿಜೀವನವನ್ನು ಕೆಡವಲು ಪ್ರಯತ್ನಿಸುತ್ತಿದ್ದಾರೆ. ನನ್ನ ಅಭಿಪ್ರಾಯದಲ್ಲಿ, ಕೆಲವರು ಮಾತ್ರ ಈ ರೀತಿ ಮಾತನಾಡುತ್ತಿದ್ದಾರೆ. ಹೆಚ್ಚಿನ ಜನರು ರೋಹಿತ್-ವಿರಾಟ್ ಅವರ ಆಟವನ್ನು ಗೌರವಿಸುತ್ತಾರೆ ಮತ್ತು ಆನಂದಿಸುತ್ತಾರೆ" ಆದಾಗ್ಯೂ, ಯಾವುದೇ ಆಟಗಾರರ ವಿರುದ್ಧ ಇಂತಹ ಟೀಕೆಗಳನ್ನು ಮಾಡುವುದು ಸರಿಯಲ್ಲ ಎಂದು ಡಿವಿಲಿಯರ್ಸ್ ತಿಳಿಸಿದ್ದಾರೆ.
ಆಸ್ಟ್ರೇಲಿಯಾ ಸರಣಿಯಲ್ಲಿ ಹೇಗಿತ್ತು ರೋ-ಕೊ ಪ್ರದರ್ಶನ:ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಆಡಿದ ಮೂರು ಪಂದ್ಯಗಳ ಪೈಕಿ ಎರಡು ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಅಡಿಲೇಡ್ನಲ್ಲಿ ನಡೆದ್ದ ಎರಡನೇ ಪಂದ್ಯದಲ್ಲಿ 73 ರನ್ ಕಲೆಹಾಕಿದ್ದ ಹಿಟ್ಮ್ಯಾನ್, ಸಿಡ್ನಿ ಮೈದಾನದಲ್ಲಿ ನಡೆದಿದ್ದ ಮೂರನೇ ಪಂದ್ಯದಲ್ಲಿ 121 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು. ಮತ್ತೊಂದೆಡೆ ವಿರಾಟ್ ಕೊಹ್ಲಿ ಆರಂಭಿಕ ಎರಡೂ ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ಭಾರಿ ಟೀಕೆಗೆ ಗುರಿಯಾಗಿದ್ದರು. ಆ ಬಳಿಕ ಮೂರನೇ ಪಂದ್ಯದಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿದರು. ರೋಹಿತ್ ಜೊತೆಗೂಡಿ ಅರ್ಧಶತಕ ಸಿಡಿಸಿ ಪಂದ್ಯವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿ ಆಗಿದ್ದರು.
ರೋ-ಕೊ ಮೈದಾನಕ್ಕೆ ಮರಳುವುದು ಯಾವಾಗ?: ಇದೀಗ ಈ ಇಬ್ಬರು ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಏಕದಿನ ಸರಣಿಯಲ್ಲಿ ಮತ್ತೆ ಮೈದಾನಕ್ಕಿಳಿಯಲಿದ್ದಾರೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿವೆ.








