ಹೈದರಾಬಾದ್:ಮೊಂಥಾ ಚಂಡಮಾರುತ ತೆಲಂಗಾಣಕ್ಕೆ ಅಪ್ಪಳಿಸಿದ್ದು, ಪರಿಣಾಮ ಉತ್ತರ ಮತ್ತು ದಕ್ಷಿಣ ತೆಲಂಗಾಣ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಅನೇಕ ಜಿಲ್ಲೆಗಳಲ್ಲಿ ಮಂಗಳವಾರ ರಾತ್ರಿಯಿಂದ ಬುಧವಾರ ಸಂಜೆಯವರೆಗೆ ನಿರಂತರವಾಗಿ ಮಳೆ ಆಗಿರುವ ವರದಿಯಾಗಿದೆ. ಮಂಗಳವಾರ ರಾತ್ರಿ ಆಂಧ್ರಪ್ರದೇಶದ ಕರಾವಳಿಯನ್ನು ದಾಟಿದ ಚಂಡಮಾರುತವು ಅನಿರೀಕ್ಷಿತವಾಗಿ ತೆಲಂಗಾಣದ ಕಡೆಗೆ ದಿಕ್ಕನ್ನು ಬದಲಾಯಿಸಿದ್ದು, ರಾಜ್ಯದ ಜನಜೀವನ ಅಸ್ತವ್ಯಸ್ತಗೊಂಡಿದೆ. ಹವಾಮಾನ ಇಲಾಖೆಯ ಮುನ್ಸೂಚನೆಗಳ ಪ್ರಕಾರ, ಈ ಚಂಡಮಾರುತವು ಕರಾವಳಿ ಆಂಧ್ರದಿಂದ ಛತ್ತೀಸ್‌ಗಢ ಮತ್ತು ಒಡಿಶಾ ಕಡೆಗೆ ಚಲಿಸುವ ನಿರೀಕ್ಷೆಯಿತ್ತು. ಇದಕ್ಕೆ ವ್ಯತಿರಿಕ್ತವಾಗಿ, ಬುಧವಾರ ಬೆಳಗ್ಗೆ ಅದು ದಿಕ್ಕನ್ನು ಬದಲಾಯಿಸಿ, ಉತ್ತರ ಆಂಧ್ರ ಮತ್ತು ತೆಲಂಗಾಣದ ಗಡಿಗಳಲ್ಲಿ ದಕ್ಷಿಣ ಛತ್ತೀಸ್‌ಗಢದ ಕಡೆಗೆ ಚಲಿಸುತ್ತಿದೆ.
ಮಳೆಯಿಂದಾಗಿ, ಹನುಮಕೊಂಡ, ವರಂಗಲ್, ಸಿದ್ದಿಪೇಟೆ, ಯಾದದ್ರಿ ಭುವನಗಿರಿ, ಜನಗಮ, ಮಹಬೂಬಾಬಾದ್, ನಲ್ಗೊಂಡ ಮತ್ತು ಸೂರ್ಯಪೇಟೆ ಜಿಲ್ಲೆಗಳು ನಲುಗಿವೆ. ಬುಧವಾರ ಸಂಜೆಯ ವೇಳೆಗೆ ಸ್ವಲ್ಪ ದುರ್ಬಲಗೊಂಡಿದ್ದು, ಗುರುವಾರ ಸಂಜೆಯ ವೇಳೆಗೆ ಚಂಡಮಾರುತವು ಸಂಪೂರ್ಣವಾಗಿ ದುರ್ಬಲಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಮಳೆಯಿಂದಾಗಿ ಹಲವಾರು ಜಿಲ್ಲೆಗಳಲ್ಲಿ ಸಾವಿರಾರು ಎಕರೆ ಭತ್ತದ ಬೆಳೆಗಳು ನಾಶವಾಗಿವೆ. ಕೊಯ್ಲು ಮಾಡಿದ ಪ್ರದೇಶಗಳಲ್ಲಿನ ಬೆಳೆಗಳು ಪ್ರವಾಹದಿಂದ ಕೊಚ್ಚಿಹೋಗಿವೆ. ಹತ್ತಿ ಮತ್ತು ಮೆಕ್ಕೆಜೋಳ ನೀರಿನಲ್ಲಿ ನೆನದಿದ್ದು, ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ನಿರಂತರ ಮಳೆಯಿಂದಾಗಿ ನದಿ ಕೆರೆ ಕಟ್ಟೆಗಳು ಉಕ್ಕಿ ಹರಿಯುತ್ತಿದ್ದು, ರಸ್ತೆಗಳು ಜಲಾವೃತ್ತಗೊಂಡಿವೆ. ಕೆಲವು ಕಡೆ ಭಾರಿ ಮಳೆಗೆ ವಾಹನಗಳು ಕೊಚ್ಚಿ ಹೋಗಿದ್ದು, ಅನೇಕ ಕಡೆ ಮನೆ ಮತ್ತು ಮರಗಳು ಕುಸಿದಿರುವ ವರದಿಯಾಗಿದೆ. ಮಳೆ ಮುನ್ಸೂಚನೆ ಹಿನ್ನೆಲೆ ಅನೇಕ ಕಡೆ ರೈಲು ಸಂಚಾರ ಬಂದ್ ಆಗಿದ್ದು, ಹಲವು ಕಡೆ ಬಸ್ಗಳ ಸೇವೆಗೂ ಅಡ್ಡಿಯಾಗಿದೆ. ವರಂಗಲ್ನಲ್ಲಿ ದಾಖಲೆ ಮಳೆ:ವರಂಗಲ್ನಲ್ಲಿ ದಾಖಲೆ ಮಳೆಯಾಗಿದ್ದು, ಜಿಲ್ಲೆಯ ಜನರು ಈ ಮಟ್ಟದ ವರ್ಷಧಾರೆಗೆ ನಲುಗಿದ್ದಾರೆ. ಹನುಮಕೊಂಡ ಜಿಲ್ಲೆಯ ಭೀಮದೇವರಪಲ್ಲಿಯಲ್ಲಿ ಅತ್ಯಧಿಕ ಅಂದರೆ 41.
2 ಸೆಂ. ಮೀ. ಮಳೆಯಾಗಿದೆ. ವರಂಗಲ್ ಜಿಲ್ಲೆಯ ಪರ್ವತಗಿರಿ ಮಂಡಲದ ಕಲ್ಲೆಡದಲ್ಲಿ 34. 8 ಸೆಂ.
ಮೀ. ಮಳೆ ದಾಖಲಾಗಿದೆ. ನೆಕ್ಕೊಂಡ, ಸಂಗೆಮ್, ಕಿಲಾ ವರಂಗಲ್, ವರ್ಧನ್ನಪೇಟೆ, ರಾಯಪರ್ತಿ, ವರಂಗಲ್, ಗೀಸುಗೊಂಡ ಮತ್ತು ಚೆನ್ನರಾವ್ಪೇಟೆ ಮಂಡಲಗಳು ಜಲಾವೃತಗೊಂಡಿವೆ. ಜನಗಾಂವ್ ಜಿಲ್ಲೆಯ ಪಾಲಕುರ್ತಿ ಮತ್ತು ನರ್ಮಟ್ಟ ಮಂಡಲಗಳ ಜೊತೆಗೆ, ಹನುಮಕೊಂಡ ಜಿಲ್ಲೆ, ಭೀಮದೇವರಪಲ್ಲಿ, ಹಸನ್‌ಪರ್ತಿ ಮತ್ತು ದಮೇರಾ ಮಂಡಲಗಳಲ್ಲಿ ಮಳೆಯಿಂದಾಗಿ ಹಲವಾರು ಗ್ರಾಮಗಳ ನಡುವಿನ ಸಂಚಾರ ಸ್ಥಗಿತಗೊಂಡಿದೆ. ಮಹಬೂಬಾಬಾದ್ ಜಿಲ್ಲೆಯ ಇನುಗುರ್ತಿ, ಡೋರ್ನಕಲ್ ಮತ್ತು ಗಾರ್ಲಾ ಮಂಡಲಗಳಲ್ಲಿ ಮಳೆಯಾಗಿದೆ.
ಎಂಜಿಎಂ ಆಸ್ಪತ್ರೆ ಮತ್ತು ಹನುಮಕೊಂಡ ಬಸ್ ನಿಲ್ದಾಣ ಜಲಾವೃತವಾಗಿದೆ. ವರಂಗಲ್ ಜಿಲ್ಲೆಯ ರಾಯಪರ್ತಿ ಮಂಡಲದ ಮೈಲಾರಂನಲ್ಲಿರುವ ಕೋಳಿ ಸಾಕಣೆ ಕೇಂದ್ರಕ್ಕೆ ಪ್ರವಾಹದ ನೀರು ನುಗ್ಗಿ ಸುಮಾರು 5,000 ಕೋಳಿಗಳು ಸಾವನ್ನಪ್ಪಿವೆ. ಮೋರಿಪಿರಾಲದ ಹೊರವಲಯದಲ್ಲಿರುವ ಲಿಂಗಲಕಾಂತದಲ್ಲಿ 15 ಕುರಿಗಳು ಕೊಚ್ಚಿ ಹೋಗಿವೆ. ನಲಗೊಂಡದಲ್ಲಿ ಭಾರಿ ಪ್ರವಾಹ:ನಲ್ಗೊಂಡ ಜಿಲ್ಲೆಯಲ್ಲಿ ಭಾರಿ ಮಳೆಗೆ ಪ್ರವಾಹ ಉಂಟಾಗಿದೆ. ಯದಾದ್ರಿ ಭುವನಗಿರಿ ಜಿಲ್ಲೆಯ ಆತ್ಮಕೂರು, ಅಡ್ಡಗುದೂರು, ಆಲೇರು ಮತ್ತು ಇತರ ಮಂಡಲಗಳಲ್ಲಿ ನದಿಗಳು ಉಕ್ಕಿ ಹರಿಯುತ್ತಿದ್ದು, ಹಲವಾರು ಮಂಡಲಗಳ ನಡುವಿನ ಸಂಚಾರ ಸ್ಥಗಿತಗೊಂಡಿದೆ.
ಸೂರ್ಯಪೇಟೆ ಮತ್ತು ನಲ್ಗೊಂಡ ಜಿಲ್ಲೆಗಳ ಶಾಲೆಗಳು ಜಲಾವೃತವಾಗಿವೆ. ದೇವರಕೊಂಡ - ಕೊಮ್ಮೆಪಲ್ಲಿ ಪ್ರದೇಶದ ಬುಡಕಟ್ಟು ಗುರುಕುಲ ಬಾಲಕರ ಶಾಲೆ ಪ್ರವಾಹಕ್ಕೆ ತುತ್ತಾಗಿದ್ದ ಪರಿಣಾಮ ನಲ್ಗೊಂಡ ಎಸ್ಪಿ ಶರತ್ಚಂದ್ರ ಪವಾರ್ ಮತ್ತು ಎಎಸ್ಪಿ ಮೌನಿಕಾಲು ತಮ್ಮ ಸಿಬ್ಬಂದಿಯೊಂದಿಗೆ ಶಾಲೆಗೆ ಹೋಗಿ ವಿದ್ಯಾರ್ಥಿಗಳನ್ನು ರಕ್ಷಿಸಿದರು. ಕೊಂಡಮಲ್ಲೆಪಲ್ಲಿ ಮತ್ತು ಗೌರಿಕುಂಟ ತಾಂಡಾ ಹಾಗೂ ಸೂರ್ಯಪೇಟೆ ಜಿಲ್ಲೆಯ ಜಾಜಿರೆಡ್ಡಿಗುಡೆಮ್ ಮಂಡಲದ ಅರ್ವಪಲ್ಲಿಯಲ್ಲಿ ಕಸ್ತೂರ್ಬಾ ಶಾಲೆ ಜಲಾವೃತಗೊಂಡಿದೆ. ನಾಗಕರ್ನೂಲ್ನಲ್ಲಿ ಮಳೆ ಅಬ್ಬರ:ಮಂಗಳವಾರ ರಾತ್ರಿ ನಾಗರ್ಕರ್ನೂಲ್ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದೆ. ಜಿಲ್ಲೆಯ 15 ಮಂಡಲಗಳಲ್ಲಿ ಭಾರಿ ಮಳೆಯಾಗಿದ್ದು, ಉಪ್ಪುಂತಲ ಮಂಡಲದಲ್ಲಿ 20.
8 ಸೆಂ. ಮೀ, ಅಮ್ರಾಬಾದ್ ನಲ್ಲಿ 19. 7 ಸೆಂ. ಮೀ, ಅಚಂಪೆಟ್ ನಲ್ಲಿ 17. 8 ಸೆಂ.
ಮೀ, ಪದರದಲ್ಲಿ 16. 2 ಸೆಂ. ಮೀ ಮತ್ತು ಬಲ್ಮೂರ್ನಲ್ಲಿ 14. 9 ಸೆಂ. ಮೀ ಮಳೆಯಾಗಿದೆ.
ಕೃಷ್ಣಾ ಮತ್ತು ತುಂಗಭದ್ರಾ ನದಿಗಳು ಉಕ್ಕಿ ಹರಿಯುತ್ತಿದ್ದು, ಮಳೆ ಮತ್ತು ಚಳಿಯಿಂದಾಗಿ ತಾಡೂರ್ ಮಂಡಲದ ಅಂತರಾಮ್ ಉಪನಗರದಲ್ಲಿರುವ ಹೊಲದಲ್ಲಿ ಕುರಿಗಳ ಹಿಂಡು ಸಾವನ್ನಪ್ಪಿದೆ. ಉಪ್ಪುಂತಲ ಮಂಡಲದ ಲತ್ತಿಪುರದಲ್ಲಿ ದಿಂಡಿ ಹೊಳೆ ವೇಗವಾಗಿ ಹರಿಯುತ್ತಿರುವುದರಿಂದ ಶ್ರೀಶೈಲಂ-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಬಂದ್ ಆಗಿದೆ. ಮುನ್ನೆರುನಲ್ಲಿ ಮಳೆ:ಖಮ್ಮಂ ಜಿಲ್ಲೆಯ ಕೊನಿಜರ್ಲಾ ಮಂಡಲದ ಅಂಜನಪುರಂ ಮತ್ತು ಎಂಕೂರ್ ಮಂಡಲದ ಜನ್ನಾರಂ ನಡುವಿನ ರಸ್ತೆ ಸೇತುವೆ ದಾಟುವಾಗ, ಡಿಸಿಎಂ ವಾಹನ ಕೊಚ್ಚಿ ಹೋಗಿದೆ. ಚಾಲಕ ನಾಪತ್ತೆಯಾಗಿದ್ದಾನೆ. ನಾಪತ್ತೆಯಾದ ಚಾಲಕನನ್ನು ಅಶ್ವರಾವ್‌ಪೇಟೆಯ ಮುರಳಿ (30) ಎಂದು ಗುರುತಿಸಲಾಗಿದೆ.
ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್: ಆರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಮಹಬೂಬಾಬಾದ್, ವರಂಗಲ್, ಹನುಮಕೊಂಡ, ಜನಗಾಮ, ಯಾದಾದ್ರಿ ಭುವನಗಿರಿ ಮತ್ತು ಸಿದ್ದಿಪೇಟೆ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಆದಿಲಾಬಾದ್, ಮಂಚೇರಿಯಲ್, ನಿರ್ಮಲ್, ಜಗ್ತಿಯಾಲ್, ರಾಜಣ್ಣ ಸಿರ್ಸಿಲ್ಲಾ, ಕರೀಂನಗರ, ಪೆದ್ದಪಲ್ಲಿ, ಜಯಶಂಕರ್ ಭೂಪಾಲಪಲ್ಲಿ ಮತ್ತು ಸೂರ್ಯಪೇಟ್ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.








