Australian Cricketer Died:ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಐದು ಪಂದ್ಯಗಳ ಟಿ-20 ಸರಣಿಯನ್ನು ಆಡುತ್ತಿವೆ. ಕ್ಯಾನ್ಬರಾದಲ್ಲಿ ನಡೆದಿದ್ದ ಮೊದಲ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. ಇದೀಗ ಎರಡನೇ ಪಂದ್ಯಕ್ಕಾಗಿ ತಂಡಗಳು ಸಿದ್ಧತೆ ನಡೆಸಿವೆ. ಇದರ ನಡುವೆಯೇ ಆಸ್ಟ್ರೇಲಿಯಾದ ಮೆಲ್ಬರ್ನ್ನಿಂದ ಕೆಟ್ಟ ಸುದ್ದಿಯೊಂದು ಹೊರಬಿದ್ದಿದೆ. ಅಭ್ಯಾಸದ ವೇಳೆ ಚೆಂಡು ತಲೆಗೆ ಬಡಿದು ಯುವ ಕ್ರಿಕೆಟರ್ ಸಾವನ್ನಪ್ಪಿದ್ದು, ಈ ಘಟನೆ ಕ್ರೀಡಾ ಜಗತನ್ನು ಬೆಚ್ಚಿಬೀಳಿಸಿದೆ.
ಹೌದು, 17 ವರ್ಷದ ಪ್ರತಿಭಾನ್ವಿತ ಕ್ರಿಕೆಟಿಗ ಬೆನ್ ಆಸ್ಟಿನ್ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ, ಬೆನ್ ಮಂಗಳವಾರ ತಮ್ಮ ಕ್ಲಬ್‌ನ ನೆಟ್ಸ್‌ನಲ್ಲಿ ಸ್ವಯಂಚಾಲಿತ ಬೌಲಿಂಗ್ ಯಂತ್ರದ ಸಹಾಯದಿಂದ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದರು. ಅವರು ಹೆಲ್ಮೆಟ್ ಧರಿಸಿದ್ದರೂ ಸಹ ಚೆಂಡು ತಲೆ ಹಿಂದೆ ಕೆಳಭಾಗದಲ್ಲಿ ಬಲವಾಗಿ ಬಡಿದಿದ್ದು ಕುಸಿದು ಬಿದ್ದಿದ್ದಾರೆ. ನಂತರ ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ನಿಧನ ಹೊಂದಿದ್ದಾರೆ. ಘಟನೆಗೆ ಫರ್ನ್‌ಟ್ರೀ ಗಲ್ಲಿ ಕ್ರಿಕೆಟ್ ಕ್ಲಬ್ ಸಂತಾಪ ಸೂಚಿಸಿದ್ದು, "ಬೆನ್ ಅವರ ನಿಧನದಿಂದ ನಾವು ಆಘಾತಕ್ಕೊಳಗಾಗಿದ್ದೇವೆ.
ಅವರ ಸಾವು ಕ್ರಿಕೆಟ್ಗೆ ಭರಿಸಲಾಗದ ದೊಡ್ಡ ನಷ್ಟವಾಗಿದೆ. ಬೆನ್ ಒಬ್ಬ ಅತ್ಯುತ್ತಮ ಕ್ರಿಕೆಟಿಗ ಆಗಿದ್ದು ನಾಯಕತ್ವದಲ್ಲೂ ಉತ್ತಮ ದಾಖಲೆ ಹೊಂದಿದ್ದರು ಎಂದು ತಿಳಿಸಿದೆ. ಇವರು ತಂಡಕ್ಕೆ ಭರವಸೆಯ ಬೌಲರ್ ಮತ್ತು ಬ್ಯಾಟ್ಸ್‌ಮನ್ ಆಗಿದ್ದರು, ಅಲ್ಲದೇ ಭವಿಷ್ಯದ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದರು. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದೆ. ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಆರ್ನಿ ವಾಲ್ಟರ್ಸ್, ಮೃತನ ಕುಟುಂಬವನ್ನು ಎಲ್ಲ ರೀತಿಯಲ್ಲೂ ಬೆಂಬಲಿಸುವುದಾಗಿಯೂ ತಿಳಿಸಿದ್ದಾರೆ.
ಅಲ್ಲದೇ ಬೆನ್ ಅಧ್ಯಯನ ಮಾಡಿದ ರೌವಿಲ್ಲೆ ಸೆಕೆಂಡರಿ ಕಾಲೇಜಿನ ವಿದ್ಯಾರ್ಥಿಗಳಿಗೂ ತಾವು ಬೆಂಬಲ ನೀಡುವಾದಾಗಿ ವಿಕ್ಟೋರಿಯಾದ ಶಿಕ್ಷಣ ಸಚಿವ ಬೆನ್ ಕ್ಯಾರೊಲ್ ಹೇಳಿದರು. ಪಿಲ್ ಹ್ಯೂಸ್ ನೆನಪಿಸಿದ ಘಟನೆ:ಬೆನ್ ಸಾವು 2014ರಲ್ಲಿ ದೇಶೀಯ ಶೆಫೀಲ್ಡ್ ಶೀಲ್ಡ್ ಪಂದ್ಯದ ಸಮಯದಲ್ಲಿ ಫಿಲ್ ಹ್ಯೂಸ್ ಅವರ ದುರಂತ ಸಾವನ್ನು ನೆನಪಿಸಿದೆ. ಆಸೀಸ್ನ ಉದಯೋನ್ಮುಕ ಆಟಗಾರು ಫಿಲ್ ಹ್ಯೂಸ್ ಘಟನೆ ನಡೆದು ಒಂದು ದಶಕದ ನಂತರ ಆಸ್ಟ್ರೇಲಿಯಾದ ಯುವ ಕ್ರಿಕೆಟಿಗ ಬೆನ್ ಆಸ್ಟಿನ್ ಸಾವು ಸಂಭವಿಸಿದೆ. 2014 ರಲ್ಲಿ, ಶೆಫೀಲ್ಡ್ ಶೀಲ್ಡ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ತೆಲೆಯ ಹಿಂದೆ ಕೆಳಬಾಗದಲ್ಲಿ ಚೆಂಡು ಬಿದ್ದು ಫಿಲ್ ಹ್ಯೂಸ್ ಸಾವನ್ನಪ್ಪಿದರು. ಚೆಂಡು ಬಡಿದ ಬೆನ್ನಲ್ಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಯಾವುದೇ ಪ್ರಯೋಜನವಾಗಿಲ್ಲ.
ಹ್ಯೂಸ್ ಅವರ ಸಾವು ಕ್ರಿಕೆಟ್‌ನಲ್ಲಿ ಸುರಕ್ಷತಾ ಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲು ಕಾರಣವಾಗಿತ್ತು. ಕ್ರಿಕೆಟ್ ಆಸ್ಟ್ರೇಲಿಯಾ ಸಂತಾಪ: ಬೆನ್ ಆಸ್ಟಿನ್ ನಿಧನಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಸಂತಾಪ ಸೂಚಿಸಿದ್ದು, ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ 17 ವರ್ಷದ ಮೆಲ್ಬೋರ್ನ್ ಕ್ರಿಕೆಟಿಗ ಬೆನ್ ಆಸ್ಟಿನ್ ನೆಟ್ಸ್ ನಲ್ಲಿ ಬ್ಯಾಟಿಂಗ್ ಮಾಡುವಾಗ ಚೆಂಡು ತಲೆಗೆ ಬಡಿದು ಸಾವನ್ನಪ್ಪಿದ್ದು ದೊಡ್ಡ ನಷ್ಟವಾಗಿದೆ ಎಂದು ತಿಳಿಸಿದೆ.








