ಮೈಸೂರು:ಐದು ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದು ಘೋಷಿಸುವಂತೆ ಆಗ್ರಹಿಸಿ ಮೈಸೂರಿನ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಸದಸ್ಯರು ನಗರದ ರಾಮಸ್ವಾಮಿ ವೃತ್ತದ ಬಳಿ ಇಂದು ಪತ್ರ ಚಳುವಳಿ ನಡೆಸಿದರು. ನವೆಂಬರ್ನಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಅಧ್ಯಕ್ಷ ಶಿವರಾಂ ನೇತೃತ್ವದಲ್ಲಿ ಸುಮಾರು 30 ಮಂದಿ ಸದಸ್ಯರು, ನಗರದ ರಾಮಸ್ವಾಮಿ ವೃತ್ತದಲ್ಲಿರುವ ಅಂಚೆ ಪೆಟ್ಟಿಗೆ ಬಳಿ ಐದು ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿ ಎಂದು ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದು ಆಗ್ರಹಿಸಿದರು. ಕೆ. ಎಸ್. ಶಿವರಾಂ ಮಾತನಾಡಿ, "ಸಿಎಂ ಬದಲಾಗುತ್ತಾರೆ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಗೊಂದಲ ಸೃಷ್ಟಿ ಮಾಡುವ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಈ ರೀತಿ ಹೇಳಿಕೆಗಳಿಂದ ಸಿದ್ದರಾಮಯ್ಯನವರ ವರ್ಚಸ್ಸಿಗೆ ಧಕ್ಕೆ ಉಂಟುಮಾಡುತ್ತಿದ್ದಾರೆ. ಈ ಅವಧಿಯಲ್ಲಿ ಸಿದ್ದರಾಮಯ್ಯನವರು ಎರಡೂವರೆ ವರ್ಷ ಚೆನ್ನಾಗಿ ಆಡಳಿತ ನಡೆಸಿದ್ದಾರೆ" ಎಂದರು. "ಕಾಂಗ್ರೆಸ್ ಹೈಕಮಾಂಡ್ ಈ ಕೂಡಲೇ ಮಧ್ಯಪ್ರವೇಶ ಮಾಡಿ ಗೊಂದಲ ನಿವಾರಿಸಬೇಕು. ಸಿದ್ದರಾಮಯ್ಯನವರೇ ಐದು ವರ್ಷ ಸಿಎಂ ಆಗಿರುತ್ತಾರೆ ಅಂತ ಹೇಳಬೇಕು. ಹಿಂದಿನಿಂದಲೂ ಅಹಿಂದ ಸಮಾಜ ಕಾಂಗ್ರೆಸ್ ಪಕ್ಷದೊಂದಿಗಿದೆ.
ಸಿದ್ದರಾಮಯ್ಯನವರನ್ನು ಬದಲಾಯಿಸದರೆ ಅಹಿಂದ ಸಮಾಜ ಕಾಂಗ್ರೆಸ್ ಜೊತೆ ನಿಲ್ಲುವುದಿಲ್ಲ. ರಾಹುಲ್ ಗಾಂಧಿಯವರು ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಹೇಳಿ ಗೊಂದಲಕ್ಕೆ ತೆರೆ ಎಳೆಯಬೇಕು" ಎಂದು ಒತ್ತಾಯಿಸಿದರು. ಹೈಕಮಾಂಡ್ ತೀರ್ಮಾನಿಸಿದರೆ ನಾನೇ ಪೂರ್ಣಾವಧಿ ಸಿಎಂ-ಸಿದ್ದರಾಮಯ್ಯ:ಐದು ವರ್ಷ ಸಿದ್ದರಾಮಯ್ಯನವರೇ ಸಿಎಂ ಎಂಬ ರಾಜಣ್ಣ ಹೇಳಿಕೆಗೆ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇತ್ತೀಚಿಗೆ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ, "ಅದು ಅವರ ಸ್ವಂತ ಅಭಿಪ್ರಾಯ. ಹೈಕಮಾಂಡ್ ತೀರ್ಮಾನ ಮಾಡಿದರೆ ನಾನೇ ಪೂರ್ಣಾವಧಿ ಮುಖ್ಯಮಂತ್ರಿ" ಎಂದು ಹೇಳಿದ್ದರು. ಇದೇ ವೇಳೆ, ಕೆ.
ಹೆಚ್. ಮುನಿಯಪ್ಪ, ಡಾ. ಜಿ. ಪರಮೇಶ್ವರ್, ಡಿ. ಕೆ.
ಶಿವಕುಮಾರ್ ಅವರು ಮುಖ್ಯಮಂತ್ರಿ ರೇಸ್‌ನಲ್ಲಿರುವ ಕುರಿತ ಪ್ರಶ್ನೆಗೆ, ಪ್ರಜಾಪ್ರಭುತ್ವದಲ್ಲಿ ಸ್ಪರ್ಧೆಯಲ್ಲಿ ಇರುವವರನ್ನು ತಪ್ಪಿಸಲು ಆಗಲ್ಲ. ಸ್ಪರ್ಧೆಯಲ್ಲಿ ಇರಬೇಡಿ ಎಂದು ಹೇಳಲು ಆಗಲ್ಲ. ಪ್ರಜಾಪ್ರಭುತ್ವದಲ್ಲಿ ಕೇಳೋದು ಅವರ ಹಕ್ಕು. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೇಳುವ ಕೇಳುವ ಹಕ್ಕು ಎಲ್ಲರಿಗೂ ಇದೆ ಎಂದು ತಿಳಿಸಿದ್ದರು.
ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನವೆಂದ ಪರಮೇಶ್ವರ್:ನಾಯಕತ್ವ ಬದಲಾವಣೆ ಅಥವಾ ಸಂಪುಟ ಪುನಾರಚನೆಯ ಅಗತ್ಯವಿದ್ರೆ ಬಿಹಾರ ಚುನಾವಣೆಯ ಬಳಿಕ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದರು. ಸದಾಶಿವನಗರ ನಿವಾಸದ ಬಳಿ ಮಾತನಾಡಿದ್ದ ಅವರು, ಸಿಎಂ ಬದಲಾವಣೆ ಬಗ್ಗೆ ತೀರ್ಮಾನ ಕೈಗೊಳ್ಳುವುದು ಹೈಕಮಾಂಡ್. ನಾವು ಇಲ್ಲಿ ಕುಳಿತುಕೊಂಡು ತೀರ್ಮಾನ ಕೈಗೊಳ್ಳಲು ಆಗುವುದಿಲ್ಲ.
ಅವಶ್ಯಕತೆ ಇದ್ದರೆ ಬಿಹಾರ ಚುನಾವಣೆ ನಂತರ ಹೈಕಮಾಂಡ್ನವರೇ ತೀರ್ಮಾನ ಮಾಡುತ್ತಾರೆ ಎಂದಿದ್ದರು. ಇವುಗಳನ್ನೂ ಓದಿ:.








