ವಿದ್ಯುತ್ ತಂತಿ ತಗುಲಿ ಮಗನ ಸಾವು: ಪುತ್ರನನ್ನು ರಕ್ಷಿಸಲು ಹೋದ ತಾಯಿಯೂ ದುರ್ಮರಣ

ವಿದ್ಯುತ್ ತಂತಿ ತಗುಲಿ ಮಗನ ಸಾವು: ಪುತ್ರನನ್ನು ರಕ್ಷಿಸಲು ಹೋದ ತಾಯಿಯೂ ದುರ್ಮರಣ
By Published : October 29, 2025 at 11:54 AM IST | Updated : October 29, 2025 at 12:14 PM IST

ಮೈಸೂರು:ವಿದ್ಯುತ್ ಅವಘಡದಿಂದ ತಾಯಿ, ಮಗ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಹುಣಸೂರು ತಾಲೂಕಿನ ಕಪ್ಪನಾಯನ ಕಾಲೋನಿ - ಎಮ್ಮೆಕೊಪ್ಪಲು ಗ್ರಾಮದಲ್ಲಿ ನಡೆದಿದೆ. ತಾಯಿ ನೀಲಮ್ಮ (42), ಮಗ ಹರೀಶ್ (24) ಮೃತ ತಾಯಿ, ಮಗ ಎಂದು ಗುರುತಿಸಲಾಗಿದೆ. ತಮ್ಮ ಜಮೀನಿನಲ್ಲಿ ಬೆಳೆ ಬೆಳೆದಿದ್ದ ಜೋಳ ನೋಡಲು ಹೋಗುತ್ತಿದ್ದ ವೇಳೆ ತಾಯಿ, ಮಗ ವಿದ್ಯುತ್ ಅವಘಡಕ್ಕೆ ಬಲಿಯಾಗಿದ್ದಾರೆ. ಜಮೀನಿನ ಬಳಿ ಬೇಲಿಯ ಬಳಿ ಕೆಳ ಭಾಗಕ್ಕೆ ಜೊತು ಬಿದ್ದಿದ್ದ ವಿದ್ಯುತ್ ತಂತಿ ಮೊದಲು ಹರೀಶ್‌ಗೆ ಸ್ಪರ್ಶಿಸಿ‌ದೆ‌. ಇದರಿಂದ ಆತ ಒದ್ದಾಡುತ್ತಿರುವುದನ್ನು ನೋಡಿರಕ್ಷಣೆಗೆ ಹೋದ ತಾಯಿಗೂ ವಿದ್ಯುತ್ ಸ್ಪರ್ಶವಾಗಿದೆ.

ಪರಿಣಾಮ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಿದ್ಯುತ್ ಇಲಾಖೆ ನಿರ್ಲಕ್ಷ್ಯದಿಂದ ವಿದ್ಯುತ್ ಅವಘಡ ಸಂಭವಿಸಿ ತಾಯಿ-ಮಗ ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ. ಈ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಣ್ಣ ತಮ್ಮ ನೀರುಪಾಲು: ಅಕ್ಟೋಬರ್ 25 ರಂದು ವರುಣಾ ನಾಲೆಯ ನೀರಿನಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಲು ಹೋದ ಸಹೋದರರಿಬ್ಬರು ನೀರುಪಾಲಾದ ದಾರುಣ ಘಟನೆ ಮೈಸೂರು ತಾಲೂಕಿನ ಬಡಗಲಹುಂಡಿ ಗ್ರಾಮದ ಬಳಿ ಇತ್ತೀಚೆಗೆ ನಡೆದಿತ್ತು. ಮೈಸೂರು ತಾಲೂಕಿನ ಬಡಗಲಹುಂಡಿ ಗ್ರಾಮದ ರಮೇಶ್ ಎಂಬುವರ ಮಗ ನಂದನ್(25), ರವಿ ಎಂಬುವರ ಮಗ ರಾಕೇಶ್(20) ಮೃತ ಸಹೋದರರು.

ಮೃತ ಯುವಕರ ತಂದೆ ಅಣ್ಣ-ತಮ್ಮಂದಿರಾಗಿದ್ದಾರೆ. ಬಡಗಲಹುಂಡಿ ಗ್ರಾಮದ 15 ವರ್ಷದ ಬಾಲಕನೊಬ್ಬ ಮಾರಿಗುಡಿ ಕ್ರಾಸ್ ಬಳಿ ವರುಣಾ ನಾಲೆಯಲ್ಲಿ ನೀರಿನಲ್ಲಿ ಸುಸ್ತಾಗಿ ಮುಳುಗಲಾರಂಭಿಸಿದ್ದ. ಇದೇ ವೇಳೆ ಮಧ್ಯಾಹ್ನ 2. 30ರ ವೇಳೆಗೆ ಗದ್ದೆಗೆ ಗೊಬ್ಬರ ಹಾಕಲು ಬೈಕ್‌ನಲ್ಲಿ ನಂದನ್ ಮತ್ತು ರಾಕೇಶ್ ತೆರಳುತ್ತಿದ್ದರು. ಆಗ ನೀರಿನಲ್ಲಿ ಬಾಲಕ ಮುಳುಗುತ್ತಿರುವುದನ್ನು ನೋಡಿ, ಕೂಡಲೇ ರಕ್ಷಣೆಗಾಗಿ ಇಬ್ಬರೂ ಸಹೋದರರು ನಾಲೆಗೆ ಧುಮುಕಿದ್ದರು.

ಈ ವೇಳೆ ನೀರಿನಲ್ಲಿ ಮುಳುಗುತ್ತಿದ್ದ ಬಾಲಕ ಕಾಲುವೆ ದಡದಲ್ಲಿದ್ದ ಗಿಡವೊಂದನ್ನು ಹಿಡಿದು ದಡ ಸೇರಿದ್ದ. ಮಾರಿಗುಡಿ ಕ್ರಾಸ್ ಬಳಿ ನಾಲೆಯಲ್ಲಿ ನೀರು ರಭಸವಾಗಿ ಹರಿಯುತ್ತಿರುವುದರಿಂದ ಬಾಲಕನ ರಕ್ಷಣೆಗೆ ನಾಲೆಗೆ ಇಳಿದಿದ್ದ ನಂದನ್ ಮತ್ತು ರಾಕೇಶ್ ನೀರಿನ ಸೆಳೆತಕ್ಕೆ ಸಿಲುಕಿ, ಕೊಚ್ಚಿಕೊಂಡು ಹೋಗಿದ್ದರು. ಇಬ್ಬರಿಗೂ ಈಜು ಬರುತ್ತಿದ್ದರೂ ರಭಸವಾಗಿ ಹರಿಯುತ್ತಿದ್ದ ನೀರಿನ ಸೆಳೆತದಿಂದ ತಪ್ಪಿಸಿಕೊಳ್ಳಲಾಗದೇ ನೀರುಪಾಲಾಗಿದ್ದರು. 15 ದಿನಗಳ ಹಿಂದೆಯಷ್ಟೇ ಮೃತ ನಂದನ್ ಚನ್ನಪಟ್ಟಣ ಮೂಲದ ಯುವತಿಯನ್ನು ಪ್ರೀತಿಸಿ, ಆಕೆಯ ಪೋಷಕರ ವಿರೋಧದ ನಡುವೆ ಪೊಲೀಸರ ರಕ್ಷಣೆಯಲ್ಲಿ ಮದುವೆಯಾಗಿದ್ದ ಎಂದು ತಿಳಿದುಬಂದಿತ್ತು.

📚 Related News