ಬೆಂಗಳೂರು:ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್) ಪಥಸಂಚಲನ ಕುರಿತಂತೆ ನವೆಂಬರ್ 5ರಂದು ಮತ್ತೊಮ್ಮೆ ಶಾಂತಿ ಸಭೆ ನಡೆಸಲು ಹೈಕೋರ್ಟ್ ನಿರ್ದೇಶನ ನೀಡಿದೆ. ಈ ಹಿಂದೆ ಅಕ್ಟೋಬರ್ 24ರಂದು ನಡೆದಿದ್ದ ಶಾಂತಿ ಸಭೆಯಲ್ಲಿ ಅರ್ಜಿದಾರರು ಭಾಗಿಯಾಗಿಲ್ಲ ಎಂದು ತಿಳಿಸಿದ್ದಾರೆ. ಅರ್ಜಿದಾರರು ಬರಲು ಸಾಧ್ಯವಾಗಿಲ್ಲದಿದ್ದರೆ, ಅವರ ಪ್ರತಿನಿಧಿಗಳನ್ನು ಕಳುಹಿಸಬೇಕಾಗಿತ್ತು. ಆ ಕಾರ್ಯಕ್ಕೆ ಮುಂದಾಗಿಲ್ಲ ಎಂದು ಪೀಠ ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿ, ಈ ಸೂಚನೆ ನೀಡಿತು. ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ್ದ ಜಿಲ್ಲಾಡಳಿತದ ಕ್ರಮ ಪ್ರಶ್ನಿಸಿ, ಪಥಸಂಚಲನದ ಸಂಚಾಲಕ ಕಲಬುರಗಿಯ ಅಶೋಕ್ ಪಾಟೀಲ್ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.
ಜೆ. ಎಸ್. ಕಮಲ್ ಅವರಿದ್ದ ನ್ಯಾಯಪೀಠ ಸೂಚನೆ ನೀಡಿದೆ. ಅಲ್ಲದೆ, ನವೆಂಬರ್ 5ರ ಸಂಜೆ 5 ಗಂಟೆಗೆ ಹೈಕೋರ್ಟ್ನ ಬೆಂಗಳೂರು ಪೀಠದಲ್ಲಿನ ಅಡ್ವೋಕೇಟ್ ಜನರಲ್ ಕಚೇರಿಯಲ್ಲಿ ಸಭೆ ನಡೆಸಬೇಕು. ಸಭೆಗೆ ಸಂಬಂಧಿಸಿದಂತೆ ಅರ್ಜಿದಾರರು ಮತ್ತವರ ವಕೀಲರು ಭಾಗವಹಿಸಬೇಕು ಎಂದು ಸೂಚನೆ ನೀಡಿ, ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿತು.
ವಾದ, ಪ್ರತಿವಾದ ಹೀಗಿತ್ತು:ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ಅಕ್ಟೋಬರ್ 24ರಂದು ನಡೆದ ಸಭೆಗೆ ಅರ್ಜಿಗೆ ಸಂಬಂಧಿಸಿದ ಸಂಘಟನೆ ಸದಸ್ಯರು ಭಾಗಿಯಾಗಿದ್ದರು. ಈ ಸೀಮಿತ ಅವಧಿಯಲ್ಲಿಯೇ ಪಥಸಂಚಲನ ನಡೆಸಲು ಅನುಮತಿ ಬೇಕಾಗಿದೆ. ಇತರೆ ಸಂಘಟನೆಗಳು ರ‍್ಯಾಲಿ ನಡೆಸುವುದಕ್ಕೆ ನಮಗೆ ಯಾವುದೇ ಆಕ್ಷೇಪಣೆ ಇಲ್ಲ'' ಎಂದು ಪೀಠಕ್ಕೆ ತಿಳಿಸಿದರು. ಈ ವೇಳೆ ಸರ್ಕಾರದ ಪರ ಹಾಜರಿದ್ದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ''ಹೈಕೋರ್ಟ್ ಆದೇಶದಂತೆ ಸಭೆ ಆಯೋಜನೆ ಮಾಡಲಾಗಿತ್ತು. ಆದರೆ, ಸಭೆಗೆ ಅರ್ಜಿದಾರರು ಗೈರಾಗಿದ್ದರು'' ಎಂದು ತಿಳಿಸಿದರು.
ಇದಕ್ಕೆ ಅರ್ಜಿದಾರರ ಪರ ವಕೀಲರು, ''ಅರ್ಜಿದಾರರ ಮನೆಯಲ್ಲಿ ಸಾವು ಉಂಟಾಗಿತ್ತು. ಆದ ಕಾರಣ ಅವರು ಸಭೆಗೆ ಹಾಜರಾಗಿರಲಿಲ್ಲ. ಇತರೆ ಪ್ರತಿನಿಧಿಗಳು ಹಾಜರಿದ್ದರು'' ಎಂದು ತಿಳಿಸಿದರು. ಇದಕ್ಕೆ ಪೀಠ, ''ಸಭೆಗೆ ಹಾಜರಾಗಿದ್ದ ಇತರೆ ಅರ್ಜಿದಾರರು ಅರ್ಜಿ ಸಲ್ಲಿಸಲಿಲ್ಲ'' ಎಂದು ತಿಳಿಸಿತು. ವಾದ ಮುಂದುವರೆಸಿದ ಅಡ್ವೋಕೇಟ್ ಜನರಲ್, ''ಸಭೆಗೆ ಸಂಬಂಧಿಸಿದಂತೆ ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಆದರೂ ಸಭೆಗೆ ಹಾಜರಾಗದೆ ಸಹಕರಿಸುತ್ತಿಲ್ಲ. ಅಗತ್ಯವಿದ್ದಲ್ಲಿ ಮತ್ತೊಂದು ದಿನ ಸಭೆ ಆಯೋಜಿಸುವುದಾಗಿ'' ಪೀಠಕ್ಕೆ ಹೇಳಿದರು. ''ಅಲ್ಲದೇ, ರಾಜ್ಯ ಸರ್ಕಾರ ಈ ಪ್ರಕರಣಕ್ಕೆ ಅಂತಿಮ ಪರಿಹಾರ ಕಂಡುಕೊಳ್ಳಬೇಕಾಗಿದೆ. ಆದರೆ, ಅರ್ಜಿದಾರರು, ಸರ್ಕಾರಕ್ಕೆ ಸಹಕರಿಸದೆ, ಇದೀಗ ಕೇಂದ್ರ ಸರ್ಕಾರವನ್ನು ಪ್ರತಿವಾದಿಯನ್ನಾಗಿ ಮಾಡಲು ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಅವರ ನಡೆ ಸಂಪೂರ್ಣ ರಾಜಕೀಯಪ್ರೇರಿತವಾಗಿದೆ'' ಎಂದು ಪೀಠಕ್ಕೆ ವಿವರಿಸಿದರು.
ಈ ವೇಳೆ ಪೀಠ, ''ಒಂದು ಉದ್ದೇಶದಿಂದಲೇ ಸಭೆ ನಡೆಸಿ ಹಾಜರಾಗಲು ಸೂಚನೆ ನೀಡಲಾಗಿತ್ತು'' ಎಂದು ತಿಳಿಸಿತು. ಅಲ್ಲದೆ, ''ಅರ್ಜಿ ಸಲ್ಲಿಸಿರುವವರು ಸಭೆಗೆ ಹಾಜರಾಗಬೇಕಿತ್ತು. ಅವರ ಬದಲಾಗಿ ಇತರರು ಹಾಜರಾಗಿ ಹೇಳಿಕೆ ನೀಡುವುದು ಸರಿಯಾಗುವುದಿಲ್ಲ. ಗೊಂದಲ ಪರಿಹರಿಸುವುದು ನ್ಯಾಯಾಲಯದ ಉದ್ದೇಶವಾಗಿದೆ'' ಎಂದು ತಿಳಿಸಿತು. ಈ ವೇಳೆ ಅರ್ಜಿದಾರರ ಪರ ವಕೀಲರು, ''ಇದೀಗ ಮತ್ತೆ ಹಾಜರಾಗಲು ಸಿದ್ಧರಿದ್ದಾರೆ'' ಎಂದು ತಿಳಿಸಿದರು.
ವಾದ ಆಲಿಸಿದ ಪೀಠ, ಮತ್ತೆ ಶಾಂತಿ ಸಭೆ ನಡೆಸಲು ನಿರ್ದೇಶನ ನೀಡಿತು. ಪ್ರಕರಣದ ಹಿನ್ನೆಲೆ: ಕಳೆದ ಭಾನುವಾರ ಚಿತ್ತಾಪುರದಲ್ಲಿ ಪಥಸಂಚಲನ ನಡೆಸುವುದಕ್ಕೆ ಆರ್ಎಸ್ಎಸ್ ಪಥಸಂಚಲನದ ಸಂಚಾಲಕ ಅಶೋಕ್ ಪಾಟೀಲ್ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಜಿಲ್ಲಾಡಳಿತ ಮನವಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಪಥಸಂಚಲನಕ್ಕೆ ಅವಕಾಶ ನೀಡುವಂತೆ ಹೊಸದಾಗಿ ಮನವಿ ಸಲ್ಲಿಸುವಂತೆ ಅರ್ಜಿದಾರರ ಪರ ವಕೀಲರಿಗೆ ನಿರ್ದೇಶನ ನೀಡಿತ್ತು.
ಜೊತೆಗೆ, ವಿವಿಧ ಸಂಘಟನೆಗಳೊಂದಿಗೆ ಶಾಂತಿ ಸಭೆ ಕರೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ದೇಶನ ನೀಡಿತ್ತು. ಸಭೆಗೆ ಅರ್ಜಿದಾರರು ಭಾಗಿಯಾಗದ ಹಿನ್ನೆಲೆಯಲ್ಲಿ ಇದೀಗ ಮತ್ತೊಂದು ಶಾಂತಿ ಸಭೆ ನಡೆಸಲು ನ್ಯಾಯಪೀಠ ಸೂಚನೆ ನೀಡಿದೆ.








