ಪ್ರಣವ್ ಚೌಧರಿಪಾಟ್ನಾ(ಬಿಹಾರ):ಸುಮಾರು 500 ವರ್ಷಗಳ ಹಿಂದೆ ಅಂದರೆ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಸ್ಥಾಪನೆಯಾಗುವ ಮೊದಲೇ ಭಾರತದ ನಳಂದ ವಿಶ್ವವಿದ್ಯಾಲಯ ಜಗತ್ತಿನ ಅತ್ಯುತ್ತಮ ಕಲಿಕಾ ಕೇಂದ್ರವಾಗಿತ್ತು. ಒಂಬತ್ತು ಮಿಲಿಯನ್ ಪುಸ್ತಕಗಳ ಆಗರ ಇಲ್ಲಿತ್ತು. ಪ್ರಪಂಚಾದ್ಯಂತದ ಕನಿಷ್ಠ 10,000 ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದರು. ಕಲಿಕೆಯ ಪ್ರಮುಖ ಕೇಂದ್ರವಾಗಿದ್ದ ಬಿಹಾರದ ನಳಂದ ಇಂದು ಅದಕ್ಕೆ ತದ್ವಿರುದ್ದ ಎಂಬಂತೆ ಪರೀಕ್ಷಾ ಪತ್ರಿಕೆ ಸೋರಿಕೆ ಮತ್ತು ಸೈಬರ್ ಅಪರಾಧದ ಕೇಂದ್ರಬಿಂದುವಾಗಿದೆ. 2003-04ರ ಹಿಂದೆ ನಳಂದ ಜಿಲ್ಲೆಯ ಹಿಲ್ಸಾ ಬ್ಲಾಕ್‌ನ ನಿವಾಸಿ ಡಾ.
ಕುಮಾರ್ ಸುಮನ್ ಸಿಂಗ್ ಅಲಿಯಾಸ್ ರಂಜಿತ್ ಡಾನ್ ಎಂಬಾತ ಸಿಎಟಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ. ಐಐಎಂ, ಏಮ್ಸ್, ವೈದ್ಯಕೀಯ ಕಾಲೇಜುಗಳು ಮತ್ತು ದೇಶಾದ್ಯಂತ ಬ್ಯಾಂಕ್‌ಗಳಲ್ಲಿ ಉದ್ಯೋಗ ಪಡೆಯಲು ನೂರಾರು ಆಕಾಂಕ್ಷಿಗಳಿಗೆ ಈತ ನೆರವಾಗಿದ್ದ ಎಂಬ ಆರೋಪ ಕೇಳಿಬಂದಿತ್ತು. ಸಿಎಟಿ ಹಗರಣದಲ್ಲಿ ಸಿಂಗ್ ವಿರುದ್ಧ ಸಿಬಿಐ ಆರೋಪಪಟ್ಟಿಯನ್ನೂ ಸಲ್ಲಿಸಿತ್ತು. ಆದರೂ ಈ ಆರೋಪಗಳು 2004ರಲ್ಲಿ ಈತ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ತಡೆಯದೇ ಇದ್ದುದು ವ್ಯವಸ್ಥೆಯ ವಿಪರ್ಯಾಸ. ಬೇಗುಸರಾಯ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಂಜಿತ್ 60 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ.
ಜೆಡಿ(ಯು)ನ ರಾಜೀವ್ ರಂಜನ್ ಸಿಂಗ್ ಮತ್ತು ಕಾಂಗ್ರೆಸ್‌ನ ಕೃಷ್ಣ ಸಾಹಿ ನಂತರ ಮೂರನೇ ಸ್ಥಾನ ಪಡೆದಿದ್ದ. ರಂಜಿತ್ ಹಿಲ್ಸಾ ಬ್ಲಾಕ್‌ನ ಖಡ್ಡಿ ಲೋದಿಪುರ ಗ್ರಾಮದಲ್ಲಿ ಸಣ್ಣ ಕೃಷಿ ಕುಟುಂಬದಲ್ಲಿ ಈತ ಜನಿಸಿದವ. ಭಾರತದ ಉನ್ನತ ನಿರ್ವಹಣಾ ಅಧ್ಯಯನ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಬಹುತೇಕ ಅಳಿಸಿಹಾಕುವಷ್ಟು ಪ್ರಬಲ ವ್ಯಕ್ತಿಯಾಗಿ ಬೆಳೆದಿದ್ದ. ಈತನ ಪತ್ನಿ ದೀಪಿಕಾ 2015ರ ವಿಧಾನಸಭಾ ಚುನಾವಣೆಯಲ್ಲಿ ಹಿಲ್ಸಾ ವಿಧಾನಸಭಾ ಸ್ಥಾನದಿಂದ ಎಲ್‌ಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು. ಈ ಬಾರಿಯೂ ದೀಪಿಕಾ ಸ್ಪರ್ಧಿಸಬೇಕಿತ್ತು.
ಆದರೆ ಅದು ಸಾಧ್ಯವಾಗಿಲ್ಲ. ಪತ್ರಿಕೆ ಸೋರಿಕೆ ಹಗರಣದ ಮತ್ತೊಬ್ಬ ಆರೋಪಿ ಸಂಜೀವ್ ಮುಖಿಯಾ. ಈತ ನಳಂದದ ನಾಗರ್ನೌಸಾದ ಮೂಲದವ. ಈತನ ಪತ್ನಿ ಮಮತಾ ದೇವಿ ಕೂಡ 2020ರ ಚುನಾವಣೆಯಲ್ಲಿ ಹರ್ನೌತ್ ವಿಧಾನಸಭಾ ಕ್ಷೇತ್ರದಿಂದ ಎಲ್‌ಜೆಪಿ ಟಿಕೆಟ್‌ನಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಭೂತಾಖರ್ ಪಂಚಾಯತ್‌ನಿಂದ ಆಯ್ಕೆಯಾದರು.
ಮಮತಾ ಕೂಡ ಕಳೆದ ಹಲವು ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. 2024ರ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಳಿಬಂದ ಹೆಸರುಗಳಲ್ಲಿ ಸಂಜೀವ್ ಮುಖಿಯಾ ಹೆಸರಿತ್ತು. ಪರೀಕ್ಷಾ ಪ್ರಶ್ನೆ ಪತ್ರಿಕೆಗಳನ್ನು ಪಡೆದುಕೊಂಡು ವಿತರಿಸಿದ ಅಂತರ್‌ರಾಜ್ಯ ಸಾಲ್ವರ್ ಗ್ಯಾಂಗ್ ಅನ್ನು ನಿರ್ವಹಿಸುತ್ತಿದ್ದ ಆರೋಪ ಈತನ ಮೇಲಿತ್ತು. ಸಿಬಿಐ ಮತ್ತು ಬಿಹಾರ ಆರ್ಥಿಕ ಅಪರಾಧಗಳ ಘಟಕವು ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣ ಮತ್ತು ಪಂಜಾಬ್‌ನಾದ್ಯಂತ ಆರೋಪಿಗಳ ಜಾಲವನ್ನು ಪತ್ತೆ ಹಚ್ಚಿತ್ತು. ಬಿಪಿಎಸ್‌ಸಿ ಶಿಕ್ಷಕರ ನೇಮಕಾತಿ ಪರೀಕ್ಷೆಗಳು ಮತ್ತು ಬಿಹಾರ ಪೊಲೀಸ್ ಕಾನ್‌ಸ್ಟೆಬಲ್ ಪರೀಕ್ಷೆಯಂತಹ ಹಲವು ರಾಜ್ಯ ಮಟ್ಟದ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಸಂಜೀವ್ ಭಾಗಿಯಾಗಿದ್ದ ಎಂಬ ಆರೋಪವಿದೆ.
ಈ ವರ್ಷದ ಏಪ್ರಿಲ್‌ನಲ್ಲಿ ಈತನನ್ನು ದಾನಾಪುರದಿಂದ ಬಂಧಿಸಲಾಯಿತು. ಮಗ ಶಿವ್ ಎಂಬಾತನಿಗೂ ಕೂಡಾ ಹಗರಣದಲ್ಲಿ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ನಳಂದದ ಕತ್ರಿಸರೈ ಪಂಚಾಯತ್‌ನ ಸೈಬರ್ ಅಪರಾಧದ ಕೇಂದ್ರಬಿಂದುವಾಗಿದ್ದು, ವಿಶೇಷವಾಗಿ ನಕಲಿ ಉದ್ಯೋಗ, ನಕಲಿ ನೇಮಕಾತಿ, ಸಿಮ್ ಕಾರ್ಡ್ ಮತ್ತು ಮೊಬೈಲ್ ಫೋನ್ ಹ್ಯಾಂಡ್‌ಸೆಟ್ ವಂಚನೆಗಳನ್ನು ಒಳಗೊಂಡಂತೆ ಸೈಬರ್ ಅಪರಾಧಗಳ ತಾಣವಾಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ, ನೂರಾರು ಸೈಬರ್ ಅಪರಾಧ ಸಂಬಂಧಿತ ಪ್ರಕರಣಗಳು ಇಲ್ಲಿ ದಾಖಲಾಗಿವೆ. ದೆಹಲಿ, ಕೋಲ್ಕತ್ತಾ, ಗುರುಗ್ರಾಮ್, ಬೆಂಗಳೂರು ಮತ್ತು ಹೈದರಾಬಾದ್‌ನ ಸೈಬರ್ ಅಪರಾಧ ಪ್ರಕರಣಗಳು ಇಲ್ಲಿನ ನಂಟು ಹೊಂದಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ಹೇಳುತ್ತಿದ್ದಾರೆ.
ಕತ್ರಿಸರೈನಿಂದ ಈ ಬಾರಿ ರವಿ ರಂಜನ್ ಕುಮಾರ್ ಅಲಿಯಾಸ್ ಛೋಟು ಮುಖಿಯಾ ಎಂಬವರನ್ನು ಆರ್‌ಜೆಡಿ ಕಣಕ್ಕಿಳಿಸಿದೆ. ಜೆಡಿ(ಯು)ನಿಂದ ಆರು ಬಾರಿ ಹಾಲಿ ಶಾಸಕ ಜಿತೇಂದ್ರ ಕುಮಾರ್ ವಿರುದ್ಧ ಇವರು ಸ್ಪರ್ಧಿಸುತ್ತಿದ್ದಾರೆ. ಛೋಟು ಮುಖಿಯಾ ಬಿಲ್ಡರ್ ಒಬ್ಬರ ಮಗನಾಗಿದ್ದು, ಬಹಳ ಕಡಿಮೆ ಅವಧಿಯಲ್ಲಿ ಜನಪ್ರಿಯರಾಗಿದ್ದಾರೆ ಎಂದು ಇಲ್ಲಿನ ನಿವಾಸಿಗಳು ಹೇಳುತ್ತಿದ್ದಾರೆ. ಛೋಟು ಅವರನ್ನು ಕಣಕ್ಕಿಳಿಸುವ ಮೂಲಕ ಆರ್‌ಜೆಡಿ ಸಾಕಷ್ಟು ಅಪಾಯವನ್ನು ತೆಗೆದುಕೊಂಡಿದೆ. ಅದರಲ್ಲೂ ಜಿತೇಂದ್ರ ಕುಮಾರ್ ವಿರುದ್ಧ ಅವರು ಕಣಕ್ಕಿಳಿದಿದ್ದಾರೆ.
ಕಣಕ್ಕಿಳಿದಿರುವ ಮತ್ತೊಬ್ಬ ಅಭ್ಯರ್ಥಿ ಎಂದರೆ ಸುಪ್ರೀಂ ಕೋರ್ಟ್ ವಕೀಲೆ ಲತಾ ಸಿಂಗ್. ಇವರು ಜನ್ ಸುರಾಜ್ ಪಕ್ಷದ ಟಿಕೆಟ್‌ನಲ್ಲಿ ಈ ಸ್ಥಾನದಿಂದ ಸ್ಪರ್ಧಿಸುತ್ತಿದ್ದಾರೆ. ಲತಾ, ಮಾಜಿ ಕೇಂದ್ರ ಸಚಿವ ಆರ್‌ಸಿಪಿ ಸಿಂಗ್ ಅವರ ಪುತ್ರಿ. ಇವರು ಉತ್ತರ ಪ್ರದೇಶ ಕೇಡರ್ ಮಾಜಿ ಐಎಎಸ್ ಅಧಿಕಾರಿಯಾಗಿದ್ದು, ಒಂದು ಕಾಲದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಪ್ತ ಸಹಾಯಕರಾಗಿದ್ದರು. ನಳಂದ ಮೂಲದ ಆರ್‌ಸಿಪಿ ಸಿಂಗ್ ಕೆಲವು ತಿಂಗಳ ಹಿಂದೆ 'ಆಶಾ' ಎಂಬ ಹೊಸ ರಾಜಕೀಯ ಪಕ್ಷ ಸ್ಥಾಪಿಸಿದ್ದರು.
ಬಳಿಕ ತಮ್ಮ ಪಕ್ಷವನ್ನು ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷದೊಂದಿಗೆ ವಿಲೀನಗೊಳಿಸಿದರು. ಛೋಟು ಮುಖಿಯಾ ಮತ್ತು ಲತಾ ಸಿಂಗ್ ಅವರಂತಹ ಯುವ ಮುಖಗಳು ಭವಿಷ್ಯದ ಪೀಳಿಗೆಗೆ ಭರವಸೆ ಮೂಡಿಸಿದ್ದಾರೆ. ಇವರು ಪ್ರಚಾರದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸೈಬರ್ ಅಪರಾಧಗಳನ್ನು ಹೊರತುಪಡಿಸಿ ನಳಂದದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಮುಂಬರುವ ಚುನಾವಣೆಯಲ್ಲಿ ಜೆಡಿಯು ಭದ್ರಕೋಟೆಯಲ್ಲಿ ಇವರು ಬದಲಾವಣೆ ಮೂಡಿಸಬಹುದೇ ಎಂಬುದು ಕುತೂಹಲ ಕೆರಳಿಸಿದೆ. ಇವುಗಳನ್ನೂ ಓದಿ:.







