ನವದೆಹಲಿ:ದೀಪಾವಳಿ ಬಳಿಕ ತೀವ್ರ ಕುಸಿತ ಕಂಡಿದ್ದ ರಾಷ್ಟ್ರ ರಾಜಧಾನಿಯ ವಾಯು ಮಾಲಿನ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ನಡೆಸಿದ್ದ ಮೋಡ ಬಿತ್ತನೆ ನಿರೀಕ್ಷಿತ ಫಲಿತಾಂಶ ನೀಡುವಲ್ಲಿ ವಿಫಲವಾಗಿದೆ. ಕಾನ್ಪುರ ಐಐಟಿ ಸಹಯೋಗದಲ್ಲಿ ಹಲವಾರೂ ಪರೀಕ್ಷೆಗಳನ್ನು ನಡೆಸಿದರೂ ದೆಹಲಿಯ ಹಲವು ಭಾಗದಲ್ಲಿ ಮಳೆಯಾಗಿಲ್ಲ. ಇದು ನಗರದ ಮಾಲಿನ್ಯವನ್ನು ತಗ್ಗಿಸುವ ಭರವಸೆಯನ್ನು ಹುಸಿ ಮಾಡಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ, ಇಂದು ಬೆಳಗ್ಗೆ 5 ಗಂಟೆಗೆ, ಐಟಿಒ ಸುತ್ತಮುತ್ತಲಿನ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 307 ರಲ್ಲಿ ದಾಖಲಾಗಿದ್ದು, ಇದು ತುಂಬಾ ಕಳಪೆಯಾಗಿದೆ ಮಂಗಳವಾರ ನಡೆಸಿದ ಮೋಡ ಬಿತ್ತನೆಯಿಂದಾಗಿ ಬುಧವಾರ ಎಲ್ಲಿಯೂ ಮಳೆಯಾಗಿಲ್ಲ. ಎಚ್ಚರಿಕೆ ಗಂಟೆಯಲ್ಲಿ ದೆಹಲಿ ವಾಯು ಮಾಲಿನ್ಯ:ದೆಹಲಿ ವಾಯು ಮಾಲಿನ್ಯ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮೋಡ ಬಿತ್ತನೆಗೆ ಮುಂದಾಗಲಾಗಿತ್ತು.
ಕೃತಕ ಮಳೆಯನ್ನು ಸುರಿಸಲು ತೇವಾಂಶ ತುಂಬಿದ ಮೋಡಗಳಿಗೆ ಬೆಳ್ಳಿ ಅಯೋಡೈಡ್ ಹರಳುಗಳು ಅಥವಾ ಉಪ್ಪು ಆಧಾರಿತ ಸಂಯುಕ್ತಗಳಂತಹ ನಿರ್ದಿಷ್ಟ ಕಣಗಳನ್ನು ಸಿಂಪಡಿಸಲಾಗುತ್ತದೆ. ಇವು ನೀರಿನ ಆವಿ ಘನೀಕರಣಗೊಂಡು ಮಳೆಯ ರೂಪದಲ್ಲಿ ಬೀಳುತ್ತದೆ. ದೀಪಾವಳಿ ಬಳಿಕ ದೆಹಲಿಯಲ್ಲಿ ಅಕ್ಟೋಬರ್ 28ರಂದು ಮೋಡ ಬಿತ್ತನೆ ನಡೆಸಲಾಗಿದೆ. ಇಂದು ಕೂಡ ಐಐಟಿ ಕಾನ್ಪುರದ ತಜ್ಞರು ದೆಹಲಿ - ಎನ್‌ಸಿಆರ್‌ನ ವಿವಿಧ ಪ್ರದೇಶಗಳಾದ ಬುರಾರಿ, ಕರೋಲ್ ಬಾಗ್ ಮತ್ತು ಖೇಕ್ರಾದಲ್ಲಿ ಮಿಲಿಟರಿ ವಿಮಾನಗಳನ್ನು ಬಳಸಿಕೊಂಡು ಬಹು ಮೋಡ ಬಿತ್ತನೆ ಪ್ರಯೋಗ ನಡೆಸುವ ಸಾಧ್ಯತೆ ಇದೆ ಎಂದು ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ತಿಳಿಸಿದ್ದಾರೆ. ಪ್ರತಿಕೂಲ ಹವಾಮಾನ:ಮೋಡ ಬಿತ್ತನೆಯ ಪ್ರಯತ್ನದ ಹೊರತಾಗಿ ನಿರೀಕ್ಷಿತ ಫಲಿತಾಂಶ ಲಭ್ಯವಾಗಿಲ್ಲ.
ಮೋಡಗಳಲ್ಲಿ ಸಾಕಷ್ಟು ತೇವಾಂಶದ ಕೊರತೆಯೇ ಇದಕ್ಕೆ ಕಾರಣ ಎಂದು ಹವಾಮಾನಶಾಸ್ತ್ರಜ್ಞರು ತಿಳಿಸಿದ್ದಾರೆ. ಈಗಾಗಲೇ ಮಳೆ ಬೀಳುವ ಸಾಮರ್ಥ್ಯವನ್ನು ಹೊಂದಿರುವಾಗ ಮಾತ್ರ ಮೋಡ ಬಿತ್ತನೆ ಪರಿಣಾಮಕಾರಿಯಾಗಿರುತ್ತದೆ. ಮೋಡ ಬಿತ್ತನೆ ಯಶಸ್ವಿಯಾಗಲು ಮೋಡಗಳಲ್ಲಿ ಕನಿಷ್ಠ 40 ರಿಂದ 50ರಷ್ಟು ತೇವಾಂಶ ಹಾಗೂ ಕೆಳ ಹಂತದ ಮೋಡಗಳ ಉಪಸ್ಥಿತಿ ಅಗತ್ಯ. ದೆಹಲಿಯಲ್ಲಿ ಪ್ರಸ್ತುತ ಸುಮಾರು 10,000 ಅಡಿ ಎತ್ತರದಲ್ಲಿ ಮೋಡಗಳಿದ್ದು, ಮೋಡ ಬಿತ್ತನೆ ಕಷ್ಟಕರವಾಗಿದೆ ಎಂದು ಹವಾಮಾನ ತಜ್ಞ ಮಹೇಶ್ ಪಲಾವತ್ ತಿಳಿಸಿದ್ದಾರೆ. ಭವಿಷ್ಯದ ಯೋಜನೆ ವೆಚ್ಚ:ಮೇ ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ದೆಹಲಿಯ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಒಟ್ಟು 3.
21 ಕೋಟಿ ರೂ ವೆಚ್ಚದಲ್ಲಿ ಐದು ಮೋಡ ಬಿತ್ತನೆ ಪ್ರಯೋಗಗಳ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿತ್ತು. ಪ್ರತಿ ಪ್ರಯೋಗಕ್ಕೆ 6. 4 ಮಿಲಿಯನ್ ವೆಚ್ಚವಾಗಲಿದೆ. ಆರಂಭಿಕ ಪ್ರಯತ್ನ ವಿಫಲವಾದರೂ ಇದನ್ನು ಯಶಸ್ವಿ ಪ್ರಯತ್ನ ಎಂದು ಪರಿಸರ ಸಚಿವರು ಕರೆದಿದ್ದಾರೆ. ಕಾರಣ ವಿಭಿನ್ನ ತೇವಾಂಶ ಮಟ್ಟವನ್ನು ನಿರ್ಣಯಿಸುವ ಗುರಿಯನ್ನು ಹೊಂದಿದ್ದು, 2026ರ ಫೆಬ್ರವರಿಯಲ್ಲಿ ಹೆಚ್ಚಿನ ಪ್ರಯೋಗ ಯೋಜಿಸಲಾಗಿದೆ ಎಂದರು.
ಕಾರ್ಯಾಚರಣೆಯ ವಿವರ:ಐಐಟಿ ಕಾನ್ಪುರದ ತಜ್ಞರ ತಂಡವು ಕಾನ್ಪುರ ಮತ್ತು ಮೀರತ್ ವಾಯುನೆಲೆಗಳಿಂದ ಎರಡು ವಿಮಾನಗಳಲ್ಲಿ ಮೋಡ ಬಿತ್ತನೆ ಕಾರ್ಯವನ್ನು ನಿನ್ನೆ ನಡೆಸಿತ್ತು. ವಿಮಾನಗಳು ಖೇಕ್ರಾ, ಬುರಾರಿ, ಉತ್ತರ ಕರೋಲ್ ಬಾಗ್, ಮಯೂರ್ ವಿಹಾರ್, ಸಡಕ್ಪುರ್, ಭೋಜ್ಪುರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿತ್ತನೆ ನಡೆಸಲಾಗಿದೆ. ಪ್ರತಿ ವಿಮಾನವು ಸುಮಾರು 0. 5 ಕೆಜಿ ತೂಕದ ಎಂಟು ಜ್ವಾಲೆಗಳನ್ನು ಬಿಡುಗಡೆ ಮಾಡಿತು, ಪ್ರತಿಯೊಂದೂ ಮೋಡಗಳಲ್ಲಿ ತೇವಾಂಶವನ್ನು ಹೆಚ್ಚಿಸಲು ಸಹಾಯ ಮಾಡುವ ವಿಶೇಷ ಮಿಶ್ರಣವನ್ನು ಹೊಂದಿತ್ತು. ಈ ಕಾರ್ಯಾಚರಣೆಯು ಸುಮಾರು ಒಂದೂವರೆ ಗಂಟೆಗಳ ಕಾಲ ನಡೆಯಿತು.
ಮೋಡ ಬಿತ್ತನೆ ಎಂದರೇನು: ಮೋಡ ಬಿತ್ತನೆ ಕೃತಕ ಮಳೆ ಭರಿಸುವ ತಂತ್ರವಾಗಿದೆ. ವಾತಾವರಣಕ್ಕೆ ಅಯೋಡೈಡ್ ಬಿಡುಗಡೆ ಮಾಡುವ ಮೂಲಕ ಹವಾಮಾನವನ್ನು ಬದಲಾಯಿಸಲು ಬಳಸುವ ಒಂದು ತಂತ್ರ. ಇದು ಮಂಜುಗಡ್ಡೆಯ ಹರಳುಗಳ ರಚನೆಯನ್ನು ಉತ್ತೇಜಿಸುತ್ತದೆ ಮತ್ತು ಮಳೆ ಉತ್ಪಾದಿಸುವ ಮೋಡದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಬೆಳ್ಳಿ ಅಯೋಡೈಡ್ ಮೋಡಗಳಲ್ಲಿ ಮಂಜುಗಡ್ಡೆಯ ನ್ಯೂಕ್ಲಿಯಸ್‌ಗಳನ್ನು ರೂಪಿಸಲು ಸಹಾಯ ಮಾಡುತ್ತದೆ, ಇದು ಕೃತಕ ಮಳೆಗೆ ಅವಶ್ಯಕವೂ ಹೌದು. ಪರಿಸರ ಸಚಿವ ಮಜಿಂದರ್ ಸಿಂಗ್ ಸಿರ್ಸಾ ಮಾತನಾಡಿ, ದೆಹಲಿ ಮಾಲಿನ್ಯದ ವಿರುದ್ಧದ ಹೋರಾಟದಲ್ಲಿ ಮೋಡ ಬಿತ್ತನೆ ಪ್ರಮುಖ ಹೆಜ್ಜೆಯಾಗಿದೆ.
ನಿಜವಾದ ಪರಿಸರದಲ್ಲಿ ಕೃತಕ ಮಳೆ ಎಷ್ಟು ಸಾಧ್ಯ ಎಂಬುದನ್ನು ನಾವು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ತಜ್ಞರ ಪ್ರಕಾರ, ಬಿತ್ತನೆಯ ನಂತರ ಮಳೆ ಮುಂದಿನ 24 ಗಂಟೆಗಳಲ್ಲಿ ಸಂಭವಿಸಬಹುದು, ಇದು ಮೋಡಗಳ ತೇವಾಂಶವನ್ನು ಅವಲಂಬಿಸಿರುತ್ತದೆ ಎಂದಿದ್ದಾರೆ.








