ಶಿವಮೊಗ್ಗ: ಗೂಡ್ಸ್ ವಾಹನ ಮರಕ್ಕೆ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು

ಶಿವಮೊಗ್ಗ: ಗೂಡ್ಸ್ ವಾಹನ ಮರಕ್ಕೆ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು
By Published : October 30, 2025 at 1:53 PM IST | Updated : October 30, 2025 at 2:11 PM IST

ಶಿವಮೊಗ್ಗ:ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ವಾಹನವೊಂದು ಮರಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. ಜಿಲ್ಲೆಯ ಹೊನ್ನಾಳಿ ರಸ್ತೆಯ ತಾವರೆ ಚಟ್ನಳ್ಳಿ ಹಾಗೂ ಗೊಂದಿ ಚಟ್ನಳ್ಳಿ ಗ್ರಾಮದ ನಡುವಿನ ಕೆರೆ ಬಳಿ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ. ಸಾದೀಕ್(40), ಫಿರೋಜ್(30) ಮತ್ತು ಅಸಾದುಲ್ಲಾ(25) ಎಂಬವರು ಮೃತಪಟ್ಟಿದ್ದಾರೆ. ಗೂಡ್ಸ್ ವಾಹನ ಚಾಲಕ ನಿದ್ದೆ ಮಂಪರಿನಲ್ಲಿ ರಸ್ತೆ ಬದಿಯ ಮರಕ್ಕೆ ರಭಸವಾಗಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಡಿಕ್ಕಿಯ ರಭಸಕ್ಕೆ ಗೂಡ್ಸ್ ವಾಹನದಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ವಾಹನದಲ್ಲಿದ್ದ ಸಾದೀಕ್ ಹಾಗೂ ಫಿರೋಜ್ ಉತ್ತರ ಪ್ರದೇಶದವರಾಗಿದ್ದರೆ, ಅಸಾದುಲ್ಲಾ ಚನ್ನಗಿರಿಯ ನಿವಾಸಿ. ಚಾಲಕ ಇರ್ಫಾನ್(40) ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದಾರೆ. ಗೂಡ್ಸ್ ವಾಹನದಲ್ಲಿದ್ದವರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಫರ್ನಿಚರ್ ಕೆಲಸ ಮುಗಿಸಿ ವಾಪಸ್ ಆಗುತ್ತಿದ್ದರು. ಈ ವೇಳೆ, ಮರಕ್ಕೆ ಡಿಕ್ಕಿಯಾಗಿ ಅಪಘಾತವಾಗಿದೆ‌.

ಮೃತರು ಕಳೆದ ಹಲವು ದಿನಗಳಿಂದ ತಾವರೆ ಚಟ್ನಳ್ಳಿ ಗ್ರಾಮದಲ್ಲಿಯೇ ವಾಸವಾಗಿದ್ದರು. ಮನೆ ಸೇರಲು ಇನ್ನೇನು ಒಂದು ಕಿಲೋ ಮೀಟರ್ ಮಾತ್ರ ಇತ್ತು. ಆದರೆ, ನಿದ್ದೆ ಮಂಪರಿನಲ್ಲಿದ್ದ ಚಾಲಕ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ಶಿವಮೊಗ್ಗ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಶವಗಳನ್ನು ಶವಾಗಾರಕ್ಕೆ ರವಾನಿಸಿದ್ದಾರೆ. ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯೇಕ ಘಟನೆ: ಸುಬ್ರಹ್ಮಣ್ಯದ ಘಾಟ್ ಪ್ರದೇಶದಲ್ಲಿ ವಾಹನವೊಂದು ಅಪಘಾತಕ್ಕೀಡಾದ ಘಟನೆ ಇಂದು ಬೆಳಗ್ಗೆ ನಡೆದಿದೆ. ವನಗೂರಿನಿಂದ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನಕ್ಕೆ ಹೊರಟಿದ್ದ ವ್ಯಾನ್, ಬಿಸ್ಲೆ ಘಾಟ್ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ. 30 ಜನರನ್ನು ಹೊತ್ತಿದ್ದ ವ್ಯಾನ್, ಬಿಸ್ಲೆ ಗಡಿಯಿಂದ ಸ್ವಲ್ಪ ಹಿಂದಿನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸುಮಾರು 20 ಅಡಿ ಆಳಕ್ಕೆ ಮಗುಚಿ ಬಿದ್ದಿದೆ. ಅಪಘಾತದಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಉಳಿದ ಪ್ರಯಾಣಿಕರಿಗೆ ಸಣ್ಣ ಗಾಯಗಳಾಗಿವೆ. ಸ್ಥಳೀಯರು ಹಾಗೂ ಪ್ರವಾಸಿಗರು ಕೂಡಲೇ ರಕ್ಷಣಾ ಕಾರ್ಯಕ್ಕೆ ಧಾವಿಸಿ ಗಾಯಾಳುಗಳನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ಪ್ರಾಥಮಿಕ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕಳುಹಿಸಿದರು.

ಗಂಭೀರವಾಗಿ ಗಾಯಗೊಂಡವರನ್ನು ನಂತರ ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ವಾಹನದ ಚಾಲಕನಿಗೂ ಗಾಯಗಳಾಗಿದ್ದು, ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ವೇಳೆ ವಾಹನದಲ್ಲಿ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 30 ಮಂದಿ ಇದ್ದರು. ಬಿಸ್ಲೆ ಘಾಟ್ ರಸ್ತೆಯ ತೀವ್ರ ತಿರುವು ಹಾಗೂ ಮಳೆ ನಂತರದ ಜಾರಿ ಪರಿಸ್ಥಿತಿ ಈ ದುರಂತಕ್ಕೆ ಕಾರಣವಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಸುಬ್ರಹ್ಮಣ್ಯ ಠಾಣಾ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ತಕ್ಷಣ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.

📚 Related News