ಜಿಯೊಂಗ್ಜು (ದಕ್ಷಿಣ ಕೊರಿಯಾ):ಆರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಇಂದು ಮುಖಾಮುಖಿಯಾಗಿದ್ದು, ದಕ್ಷಿಣ ಕೊರಿಯಾದ ಬುಸಾನ್ನಲ್ಲಿ ಆಯೋಜಿಸಿರುವ ಸಭೆಯಲ್ಲಿ ಭಾಗವಹಿಸಿದ್ದಾರೆ. ವಿಶ್ವದ ಎರಡು ದೊಡ್ಡ ಆರ್ಥಿಕ ನಾಯಕರುಗಳು ವ್ಯಾಪಾರ ಸಮಸ್ಯೆಗಳ ಕುರಿತು ಹಲವು ತಿಂಗಳುಗಳಿಂದ ಇರುವ ಪ್ರಕ್ಷುಬ್ಧತೆಯ ನಂತರ ಎರಡು ದೇಶಗಳ ನಡುವಿನ ಸಂಬಂಧವನ್ನು ಸ್ಥಿರಗೊಳಿಸಲು ಮಾತುಕತೆ ಆರಂಭಿಸಿದ್ದಾರೆ. ಉಭಯ ನಾಯಕರ ನಡುವೆ ಮಹತ್ವದ ಸಭೆ:ದಕ್ಷಿಣ ಕೊರಿಯಾದ ಎರಡನೇ ಅತಿದೊಡ್ಡ ನಗರವಾದ ಬುಸಾನ್‌ನ ಪಶ್ಚಿಮ ತುದಿಯಲ್ಲಿರುವ ಬುಸಾನ್ ವಿಮಾನ ನಿಲ್ದಾಣ ಎಂದೂ ಕರೆಯಲ್ಪಡುವ ಗಿಮ್ಹೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ವಾಯುಪಡೆಯ ನೆಲೆಯೊಳಗೆ ಟ್ರಂಪ್ ಮತ್ತು ಕ್ಸಿ ನಡುವಿನ ಈ ಮಹತ್ವದ ಸಭೆ ನಡೆಯುತ್ತಿದೆ. ಇದು ಮಿಲಿಟರಿ ಮತ್ತು ನಾಗರಿಕ ವಿಮಾನ ನಿಲ್ದಾಣವಾಗಿದ್ದು, ದಕ್ಷಿಣ ಕೊರಿಯಾದ ಮಿಲಿಟರಿ ಮತ್ತು ಅಮೆರಿಕ ವಾಯುಪಡೆಯ ನಡುವಿನ ಜಂಟಿ ವ್ಯಾಯಾಮದ ಭಾಗವಾಗಿದೆ. ಭಾರತೀಯ ಕಾಲಮಾನ ಬೆಳಗ್ಗೆ 7.
30ಕ್ಕೆ ಸಭೆ ಪ್ರಾರಂಭವಾಗಿದೆ. ನಾವು ಯಾವತ್ತೂ ಪರಸ್ಪರ ಮುಖಾಮುಖಿಯಾಗಿರಲಿಲ್ಲ: ನಾವು ಯಾವತ್ತೂ ಪರಸ್ಪರ ಮುಖಾಮುಖಿಯಾಗಿಲ್ಲ ಮತ್ತು ಅದು ಸಹಜವೂ ಕೂಡಾ. ಪ್ರಮುಖ ಆರ್ಥಿಕ ಶಕ್ತಿಗಳು ಘರ್ಷಣೆಗಳನ್ನು ಹೊಂದಿರುವುದು ಸಾಮಾನ್ಯ. ಆದರೆ, ಚೀನಾ ಹಾಗೂ ಅಮೆರಿಕ ಪಾಲುದಾರರು ಹಾಗೂ ಸ್ನೇಹಿತರಾಗಲು ಶ್ರಮಿಸಬೇಕು. ಚೀನಾ ಮತ್ತು ಅಮೆರಿಕ ಜಂಟಿಯಾಗಿ ಪ್ರಮುಖ ರಾಷ್ಟ್ರಗಳಾಗಿ ನಮ್ಮ ಜವಾಬ್ದಾರಿಯನ್ನು ನಿಭಾಯಿಸಬಹುದು ಮತ್ತು ನಮ್ಮ ಎರಡು ದೇಶಗಳ ಮತ್ತು ಇಡೀ ಪ್ರಪಂಚದ ಒಳಿತಿಗಾಗಿ ಹೆಚ್ಚಿನ ಉತ್ತಮ ಮತ್ತು ಕಾಂಕ್ರೀಟ್ ವಿಷಯಗಳನ್ನು ಸಾಧಿಸಲು ಒಟ್ಟಾಗಿ ಕೆಲಸ ಮಾಡಬಹುದು ಎಂದು ಡೊನಾಲ್ಡ್ ಟ್ರಂಪ್ ಅವರನ್ನು ಕೈಕುಲುಕಿ ಸ್ವಾಗತಿಸಿದ ಬಳಿಕ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಹೇಳಿದರು.
ವ್ಯಾಪಾರ ತಂಡಗಳು ಮೂಲಭೂತ ಒಮ್ಮತಕ್ಕೆ ಬಂದಿವೆ. ಮತ್ತು ದ್ವಿಮುಖ ಸಂಬಂಧಗಳಿಗೆ ಭದ್ರ ಬುನಾದಿ ನಿರ್ಮಿಸಲು ಟ್ರಂಪ್ ಅವರೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸಲು ಸಿದ್ಧ ಎಂದು ಅವರು ಹೇಳಿದರು. ಆರು ವರ್ಷಗಳಲ್ಲಿ ಇಬ್ಬರು ಮೊದಲ ಬಾರಿಗೆ ಮುಖಾಮುಖಿ ಭೇಟಿಯಾಗುತ್ತಿದ್ದು, ಈ ವಾರದ ಆರಂಭದಲ್ಲಿ ಎರಡೂ ಕಡೆಯ ಅಧಿಕಾರಿಗಳು ತಮ್ಮ ಕಾಳಜಿಗಳನ್ನು ಪರಿಹರಿಸಲು ಒಮ್ಮತಕ್ಕೆ ಬಂದಿದ್ದೇವೆ ಎಂದು ಹೇಳಿದ್ದರು. ಕ್ಸಿ ಭೇಟಿಗೆ ಕಾಯುತ್ತಿದ್ದೆ ಎಂದ ಟ್ರಂಪ್; ಸಭೆಗೂ ಮುನ್ನ, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗೆ ಗುರುವಾರ ದಕ್ಷಿಣ ಕೊರಿಯಾದ ಬುಸಾನ್ನಲ್ಲಿ ನಿಗದಿಯಾಗಿರುವ ಸಭೆಗಾಗಿ ತುಂಬಾ ಕಾಯುತ್ತಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ ಡೊನಾಲ್ಡ್ ಟ್ರಂಪ್, "ಚೀನಾ ಅಧ್ಯಕ್ಷ ಕ್ಸಿ ಅವರೊಂದಿಗಿನ ನನ್ನ ಸಭೆಗಾಗಿ ನಾನು ತುಂಬಾ ಕಾತರದಿಂದ ಕಾಯುತ್ತಿದ್ದೇನೆ.
ಕೆಲವೇ ಗಂಟೆಗಳಲ್ಲಿ ಸಭೆ ನಡೆಯಲಿದೆ" ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದರು. ಉಭಯ ನಾಯಕರ ನಡುವಣ ಈ ಸಭೆ ಭಾರಿ ಮಹತ್ವ ಪಡೆದುಕೊಂಡಿದ್ದು, ಇದು ವಿಶ್ವ ವ್ಯಾಪಾರ ಯುದ್ಧವನ್ನು ಶಮನಗೊಳಿಸುವ ಸಾಧ್ಯತೆ ಇದೆ. ಹೀಗಾಗಿ ಇಡೀ ವಿಶ್ವವೇ ಈ ಸಭೆಯ ಫಲಶೃತಿಗಾಗಿ ಕಾಯುತ್ತಿದೆ.








