ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಇಂದಿನಿಂದ 5 ಪಂದ್ಯಗಳ ಟಿ20 ಕ್ರಿಕೆಟ್ ಸರಣಿ ಆಡಲಿದೆ. ಈಗಾಗಲೇ ಏಕದಿನ ಸರಣಿ ಮುಕ್ತಾಯಗೊಂಡಿದ್ದು, ಭಾರತ 2-1ರ ಅಂತರದಿಂದ ಸೋತಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇದೀಗ ಕಾಂಗರೂ ಪಡೆಗಳನ್ನು ಅವರದ್ದೇ ನಾಡಿನಲ್ಲಿ ಮಣಿಸಿ ಸರಣಿ ಗೆಲ್ಲುವ ತವಕದಲ್ಲಿದೆ. ಭಾರತ-ಆಸ್ಟ್ರೇಲಿಯಾ ಟಿ20 ಸರಣಿ ಪ್ರಾರಂಭಕ್ಕೂ ಮುನ್ನ ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್‌ಗ್ರಾತ್ ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಭಾರತೀಯ ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಿದ ಟಾಪ್ 5 ಏಕದಿನ ಬ್ಯಾಟರ್‌ಗಳನ್ನು ಹೆಸರಿಸಿದ್ದಾರೆ.
ಇವರು ಪ್ರಕಟಿಸಿದ ಈ ಪಟ್ಟಿಯಲ್ಲಿ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಹೆಸರಿದ್ದರೂ ಸಹ ಮೊದಲ ಸ್ಥಾನದಲ್ಲಿಲ್ಲ. ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಅವರಂತಹ ಆಟಗಾರರಿಗೆ ಸ್ಥಾನವಿಲ್ಲ. ಬದಲಿಗೆ ಪ್ರಸ್ತುತ ಪೀಳಿಗೆಯ ಆಟಗಾರರಿಗೆ ಅವರು ಪ್ರಾಶಸ್ತ್ಯ ನೀಡಿದ್ದಾರೆ. ಮೆಕ್‌ಗ್ರಾತ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಗೆ ಮೊದಲ ಸ್ಥಾನವಿದೆ. ಇನ್ನುಳಿದಂತೆ, ರೋಹಿತ್ ಶರ್ಮಾ, ಸಚಿನ್ ತೆಂಡೂಲ್ಕರ್, ಎಂ.
ಎಸ್. ಧೋನಿ ಮತ್ತು ಯುವರಾಜ್ ಸಿಂಗ್ ಅವರನ್ನು ಟಾಪ್-5 ಏಕದಿನ ಬ್ಯಾಟರ್‌ಗಳೆಂದು ಎಂದು ತಿಳಿಸಿದ್ದಾರೆ. "ಈ ಪಟ್ಟಿಯಲ್ಲಿ ರೋಹಿತ್ ಶರ್ಮಾಗೆ ಎರಡನೇ ಸ್ಥಾನ ನೀಡುತ್ತೇನೆ. ಏಕದಿನ ಕ್ರಿಕೆಟ್‌ನಲ್ಲಿ ಅವರ ಅಂಕಿ ಅಂಶಗಳು ತುಂಬಾ ಉತ್ತಮವಾಗಿವೆ. ಇದರಲ್ಲಿ ಅವರು ಮೂರು ದ್ವಿಶತಕ ಗಳಿಸಿದ್ದಾರೆ.
ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ 264 ರನ್ ಗಳಿಸಿದ ದಾಖಲೆಯನ್ನೂ ಹೊಂದಿದ್ದಾರೆ. ಇಲ್ಲಿಯವರೆಗೆ, 276 ಪಂದ್ಯಗಳಲ್ಲಿ 11 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಟೆಸ್ಟ್‌ಗೆ ಹೋಲಿಸಿದರೆ ಅವರು ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ರೋಹಿತ್ ಒಬ್ಬ ಶ್ರೇಷ್ಠ ಆಟಗಾರ. ಅದಕ್ಕಾಗಿಯೇ ನಾನು ಅವರಿಗೆ ಎರಡನೇ ಸ್ಥಾನ ನೀಡಿದ್ದೇನೆ" ಎಂದು ಮೆಕ್‌ಗ್ರಾತ್ ಹೇಳಿದ್ದಾರೆ.
ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿ ಬೇರೆಯವರಿಗೆ ಈ ಪಟ್ಟಿಯಲ್ಲಿ ಮೊದಲ ಸ್ಥಾನ ನೀಡುವುದು ತುಂಬಾ ಕಷ್ಟ. ಅವರ ಸ್ಟ್ರೈಕ್ ರೇಟ್ ಮತ್ತು ಸರಾಸರಿ ಅದ್ಭುತವಾಗಿದೆ" ಎಂದು ವಿಶ್ಲೇಷಣೆ ಮಾಡಿದ್ದಾರೆ. ಸುಮಾರು ಏಳು ತಿಂಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದ ರೋಹಿತ್ ಶರ್ಮಾ, ಆಸೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದರು. ಒಂದು ಶತಕ ಮತ್ತು ಅರ್ಧಶತಕ ಗಳಿಸಿ ಸರಣಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಆಸ್ಟ್ರೇಲಿಯಾ ನೆಲದಲ್ಲಿ ಏಕದಿನ ಪಂದ್ಯಗಳಲ್ಲಿ 1000 ರನ್ ಗಳಿಸಿದ ಬ್ಯಾಟರ್ ಆಗಿಯೂ ದಾಖಲೆ ಸೃಷ್ಟಿಸಿದ್ದಾರೆ.
ಏಕದಿನ ಪಂದ್ಯಗಳಲ್ಲಿ ಆಸೀಸ್ ವಿರುದ್ಧ 2,500 ರನ್ ಗಳಿಸಿದ ಎರಡನೇ ಬ್ಯಾಟರ್ ಕೂಡ ರೋಹಿತ್ ಆಗಿದ್ದಾರೆ. ಮತ್ತೊಂದೆಡೆ, ವಿರಾಟ್ ಕೊಹ್ಲಿ ಆಸೀಸ್ ವಿರುದ್ಧದ ಆರಂಭಿಕ ಎರಡು ಏಕದಿನ ಪಂದ್ಯಗಳಲ್ಲಿ ಡಕೌಟ್ ಆಗಿದ್ದರು. ಆದರೆ ಮೂರನೇ ಪಂದ್ಯದಲ್ಲಿ ವಿರಾಟ್ ಪ್ರದರ್ಶನ ನೀಡಿದ್ದರು. ಕೊನೆಯ ಪಂದ್ಯದಲ್ಲಿ ಅಜೇಯ 74 ರನ್ ಪೇರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ರೋ-ಕೊ ಮತ್ತೆ ಮೈದಾನಕ್ಕೆ ಮರಳುವುದು ಯಾವಾಗ?: ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ತಂಡ ಭಾರತ ಪ್ರವಾಸ ಬೆಳೆಸಲಿದೆ.
ಈ ವೇಳೆ ಎರಡು ಟೆಸ್ಟ್, ಮೂರು ಏಕದಿನ ಮತ್ತು ಐದು ಪಂದ್ಯಗಳ ಟಿ-20 ಸರಣಿ ನಡೆಯಲಿದೆ. ಮೂರು ಪಂದ್ಯಗಳ ಏಕದಿನ ಸರಣಿ ನವೆಂಬರ್ 30ರಿಂದ ಶುರುವಾಗಲಿದ್ದು, ಡಿಸೆಂಬರ್ 6ರಂದು ಮುಗಿಯಲಿದೆ. ಈ ಸರಣಿಯಲ್ಲಿ ರೋಹಿತ್-ವಿರಾಟ್ ಜೋಡಿ ಮತ್ತೆ ಕಣಕ್ಕಿಳಿಯಲಿದ್ದಾರೆ.








