ಕಾರವಾರ:ನಗರದ ಗುಡ್ಡೆಹಳ್ಳಿಯಲ್ಲಿ ಅತೀ ದೊಡ್ಡ ಗಾತ್ರದ ಪತಂಗ ಎಂದೇ ಗುರುತಿಸಲ್ಪಟ್ಟಿರುವ 'ಅಟ್ಲಾಸ್ ಮೋತ್' (Attacus atlas) ಅಥವಾ ದೈತ್ಯ ಪತಂಗವೊಂದು ಪತ್ತೆಯಾಗಿದೆ. ಸ್ಥಳೀಯ ಹವ್ಯಾಸಿ ಛಾಯಾಗ್ರಾಹಕ ರವಿ ಗೌಡ ಪತಂಗದ ಛಾಯಾಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ತನ್ನ ಗಾತ್ರದ ಕಾರಣಕ್ಕೆ ಜನರಿಂದ ಸಾಮಾನ್ಯವಾಗಿ ಚಿಟ್ಟೆ ಎಂದು ತಪ್ಪಾಗಿ ಭಾವಿಸಲ್ಪಡುವ ಈ ಜೀವಿಯು ಕೀಟ ತಜ್ಞರ ಪ್ರಕಾರ ಇದು ಲೆಪಿಡಾಪ್ಟೆರಾ ವರ್ಗಕ್ಕೆ ಸೇರಿದ ಒಂದು ವಿಶೇಷ 'ಪತಂಗ' ಆಗಿದೆ. ವೈಜ್ಞಾನಿಕವಾಗಿ Attacus atlas ಎಂದು ಕರೆಯಲ್ಪಡುವ ಈ ಪತಂಗವು ತನ್ನ ಗಾತ್ರದಿಂದಲೇ ಪ್ರಸಿದ್ಧವಾಗಿದೆ. ಇದರ ರೆಕ್ಕೆಗಳ ವಿಸ್ತೀರ್ಣವು ಸುಮಾರು 24 ಸೆಂ.
ಮೀ. ಗಳಷ್ಟು ಇದ್ದು, ಇದು ಅತಿ ದೊಡ್ಡ ರೆಕ್ಕೆಗಳ ವಿಸ್ತೀರ್ಣ ಹೊಂದಿದೆ. ಬಾಯಿ, ಜೀಣಾಂಗ ವ್ಯವಸ್ಥೆ ಇಲ್ಲ:ಈ ಅಟ್ಲಾಸ್ ಪತಂಗವು ಬಾಯಿ ಅಥವಾ ಜೀರ್ಣಾಂಗ ವ್ಯವಸ್ಥೆಯನ್ನೇ ಹೊಂದಿಲ್ಲ. ಕರಾವಳಿ ಹಾಗೂ ಮಲೆನಾಡು ಕಾಡುಗಳಲ್ಲಿ ಕಾಣಿಸುವ ಈ ಪತಂಗವು ಕೆಲ ನಿರ್ದಿಷ್ಟ ಮರಗಳ ಎಲೆಗಳಲ್ಲಿ ಇಟ್ಟ ಮೊಟ್ಟೆಯಿಂದ ಹೊರಬಂದ ನಂತರ ಅದೇ ಎಲೆಗಳನ್ನು ಯಥೇಚ್ಛವಾಗಿ ತಿಂದು ತನ್ನ ಜೀವನಕ್ಕೆ ಬೇಕಾದ ಸಂಪೂರ್ಣ ಶಕ್ತಿಯನ್ನು ಸಂಗ್ರಹಿಸಿಕೊಳ್ಳುತ್ತದೆ. ಶಕ್ತಿ ಸಂಗ್ರಹದ ನಂತರ ಕೋಶವನ್ನು (ಕೋಕೂನ್) ರಚಿಸಿ, ಪೂರ್ಣಾವಸ್ಥೆಯ ಪತಂಗವಾಗಿ ಹೊರಬರುತ್ತದೆ.
ಹೊರಬಂದ ನಂತರ, ಬಾಯಿ ಮತ್ತು ಜೀರ್ಣಾಂಗ ವ್ಯವಸ್ಥೆ ಇಲ್ಲದ ಕಾರಣ, ಈ ಪತಂಗವು ಯಾವುದೇ ಆಹಾರವನ್ನು ಸೇವಿಸುವುದಿಲ್ಲ. ಹುಳುವಿನ ರೂಪದಲ್ಲಿ ಸಂಗ್ರಹಿಸಿದ ಶಕ್ತಿಯನ್ನು ಮಾತ್ರ ಅವಲಂಬಿಸಿ ಬದುಕುತ್ತದೆ. ಸಂತಾನೋತ್ಪತ್ತಿಯಾದ ನಂತರ ಮೊಟ್ಟೆ ಇಟ್ಟ ಹೆಣ್ಣು ಪತಂಗ ಮತ್ತು ಗಂಡು ಪತಂಗ ಎರಡೂ ಸಾವನ್ನಪ್ಪುತ್ತವೆ. ದಿನಗಳು ಕಳೆದಂತೆ ಬಲಹೀನವಾಗುತ್ತಾ ಸಾಗುವ ಈ ಜೀವಿ, ಅಂತಿಮವಾಗಿ ಹಕ್ಕಿಗಳು, ಇರುವೆಗಳು ಅಥವಾ ಓತಿಗಳಂತಹ ಪರಭಕ್ಷಕಗಳಿಗೆ ಸುಲಭವಾಗಿ ಆಹಾರವಾಗುತ್ತದೆ ಎನ್ನಿತ್ತಾರೆ ಕೀಟ ತಜ್ಞರು 14-18 ದಿನ ಮಾತ್ರ ಬದುಕುವ ಅಟ್ಲಾಸ್ ಪತಂಗ: ಇನ್ನು ಅಟ್ಲಾಸ್ ಪತಂಗ ಬೃಹತ್ ಆಕಾರದಲ್ಲಿ ಇದ್ದು, ಯಾವಾಗಲೂ ಇದು ರೆಕ್ಕೆಯನ್ನು ಬಿಚ್ಚಿಕೊಂಡೆ ಇರುತ್ತದೆ. ಇತರ ಪ್ರಾಣಿ ಪಕ್ಷಿಗಳ ದಾಳಿಯಿಂದ ತಪ್ಪಿಸಿಕ್ಕೊಳ್ಳಲು ಹುಟ್ಟಿನಿಂದಲೇ ಹೀಗಿರುತ್ತದೆ.
ಇದು ಕೇವಲ 14-18 ದಿನ ಮಾತ್ರ ಬದುಕುತ್ತದೆ. ಹೆಚ್ಚಿನ ಸಮಯ ವಿಶ್ರಾಂತಿ ಇಲ್ಲವೇ ಮಿಲನ ಕ್ರಿಯೆಯಲ್ಲಿ ತೊಡಗಿಕ್ಕೊಳ್ಳುತ್ತದೆ. ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆಗಾಲದಲ್ಲಿ ಕಾಣಿಸುತ್ತದೆ ಎನ್ನುತ್ತಾರೆ ಫಾರೇಸ್ಟರ್ ಗೋಪಾಲಕೃಷ್ಣ.








