ಕಾಂಗ್ರೆಸ್​ ಭವನ ಟ್ರಸ್ಟ್​ಗೆ ಸಿಎ ನಿವೇಶನ ಮಂಜೂರು: ಸಿಯುಡಿಎ ಆಯುಕ್ತರಿಗೆ ನೋಟಿಸ್​ ಜಾರಿ ಮಾಡಿದ ಹೈಕೋರ್ಟ್​

ಕಾಂಗ್ರೆಸ್​ ಭವನ ಟ್ರಸ್ಟ್​ಗೆ ಸಿಎ ನಿವೇಶನ ಮಂಜೂರು: ಸಿಯುಡಿಎ ಆಯುಕ್ತರಿಗೆ ನೋಟಿಸ್​ ಜಾರಿ ಮಾಡಿದ ಹೈಕೋರ್ಟ್​
By Published : October 30, 2025 at 7:10 AM IST

ಬೆಂಗಳೂರು:ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿಗೆ ಹೊಂದಿಕೊಂಡಿರುವ ಅಣಕನೂರಿನ ಸದಾಶಿವನಗರ ಬಡಾವಣೆಯ ನಾಗರಿಕ ಸೌಲಭ್ಯಕ್ಕೆ ಮೀಸಲಿಟ್ಟ (ಸಿಎ) ನಿವೇಶನವನ್ನು ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ನೋಂದಣಿ ಮಾಡಿಕೊಟ್ಟಿರುವ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ಸಂಬಂಧ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ (ಸಿಯುಡಿಎ) ಆಯುಕ್ತರಿಗೆ ಹೈಕೋರ್ಟ್‌ ತುರ್ತು ನೋಟಿಸ್‌ ಜಾರಿಗೊಳಿಸಿದೆ. ಬೆಂಗಳೂರಿನ ಕಾವಲ್‌ ಬೈರಸಂದ್ರದ ಎಂಎಂ ಬಡಾವಣೆ ನಿವಾಸಿ ಬಿ. ಕೃಷ್ಣಮೂರ್ತಿ ಸಲ್ಲಿಸಿರುವ ಅರ್ಜಿ ಕುರಿತು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸಿಯುಡಿಎ ಆಯುಕ್ತರಿಗೆ ತುರ್ತು ನೋಟಿಸ್ ಜಾರಿಗೊಳಿಸಿತಲ್ಲದೇ, ಹ್ಯಾಂಡ್ ಸಮನ್ಸ್ ಮೂಲಕ ಆಯುಕ್ತರಿಗೆ ನೋಟಿಸ್ ತಲುಪಿಸಲು ಅರ್ಜಿದಾರರಿಗೆ ಅನುಮತಿಸಿ, ವಿಚಾರಣೆ ಮುಂದೂಡಿತು. ಅಲ್ಲದೆ, ಉದ್ದೇಶಿತ ನಿವೇಶನದಲ್ಲಿ ಯಾವುದೇ ನಿರ್ಮಾಣ ಚಟುವಟಿಕೆ ಕೈಗೊಳ್ಳದಂತೆ ಅಥವಾ ನಿವೇಶನದ ಸ್ವರೂಪ ಬದಲಿಸದಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಹಾಗೂ ಕರ್ನಾಟಕ ಪ್ರದೇಶ‌ ಕಾಂಗ್ರೆಸ್ ಸಮಿತಿಯನ್ನು (ಕೆಪಿಸಿಸಿ) ನಿರ್ಬಂಧಿಸಿ, ಅಕ್ಟೋಬರ್ 24ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಮುಂದಿನ ವಿಚಾರಣೆವರೆಗೆ ವಿಸ್ತರಿಸಿತು.

ಅಕ್ಟೋಬರ್ 24ರಂದು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿ, ಐಎನ್‌ಸಿ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ತುರ್ತು ನೋಟಿಸ್ ಜಾರಿಗೊಳಿಸಿತ್ತು. ಜತೆಗೆ, ನಿವೇಶನದಲ್ಲಿ ಯಾವುದೇ ನಿರ್ಮಾಣ ಕೈಗೊಳ್ಳದಂತೆ ಮಧ್ಯಂತರ ಆದೇಶ ಮಾಡಿತ್ತು. ಅರ್ಜಿದಾರರ ಆಕ್ಷೇಪವೇನು?: ಚಿಕ್ಕಬಳ್ಳಾಪುರ ತಾಲೂಕಿನ ಅಣಕನೂರು ಗ್ರಾಮದಲ್ಲಿ ಸದಾಶಿವನಗರ ಬಡಾವಣೆ ನಿರ್ಮಾಣಕ್ಕೆ ರಸ್ತೆ, ಉದ್ಯಾನ ಮತ್ತು ನಾಗರಿಕ ಸೌಲಭ್ಯ ನಿವೇಶನ ಜಾಗ ಮೀಸಲಿಡಬೇಕು ಎಂಬ ಷರತ್ತಿನೊಂದಿಗೆ ಪ್ರಾಧಿಕಾರವು 2025ರ ಅ. 3ರಂದು ಸಂಭಾವ್ಯ ಅನುಮೋದನೆ ನೀಡಿತ್ತು. 3,404.

26 ಚದರ ಮೀಟರ್‌ ಅನ್ನು ಸಿಎ ನಿವೇಶನಕ್ಕೆ ಹಾಗೂ 20,467. 20 ಚದರ ಮೀಟರ್​ ಜಾಗವನ್ನು ಉದ್ಯಾನ/ಮುಕ್ತ ಪ್ರದೇಶಕ್ಕಾಗಿ ಪ್ರಾಧಿಕಾರಕ್ಕೆ ಬಿಟ್ಟುಕೊಟ್ಟು ಭೂ ಮಾಲೀಕರು/ಭೂ ಅಭಿವೃದ್ಧಿದಾರರು ಕ್ರಯ ಮಾಡಿಕೊಟ್ಟಿದ್ದರು. ಪಾರ್ಕ್‌, ಸಿಎ ನಿವೇಶನ ಮತ್ತು ರಸ್ತೆಗಳಿಗೆ ಮೀಸಲಿಟ್ಟ ಜಾಗವನ್ನು ತನ್ನ ಸುಪರ್ದಿಯಲ್ಲಿಟ್ಟುಕೊಂಡು ಪ್ರಾಧಿಕಾರವು ಸದಾಶಿವನಗರ ಬಡಾವಣೆಗೆ 2025ರ ಫೆ. 7ರಂದು ಅಂತಿಮ ಅನುಮೋದನೆ ನೀಡಿ ಆದೇಶಿಸಿತ್ತು. ಆದರೆ, ಪ್ರಾಧಿಕಾರವು 3,404.

26 ಚದರ ಮೀಟರ್‌ ವಿಸ್ತೀರ್ಣದ ನಾಗರಿಕ ಸೌಲಭ್ಯಕ್ಕೆ ಮೀಸಲಿಟ್ಟ ನಿವೇಶನವನ್ನು 2025ರ ಜು. 1ರಂದು ಕಾಂಗ್ರೆಸ್‌ ಭವನ ಟ್ರಸ್ಟ್‌ ಹೆಸರಿಗೆ ಮಾರಾಟ ಮಾಡಿದೆ. ಈ ಕುರಿತು ಶುದ್ಧ ಕ್ರಯ ನೋಂದಣಿ ಮಾಡಿಕೊಟ್ಟಿದೆ. ರಾಜಕೀಯ ಪಕ್ಷದ ಕಚೇರಿಗೆ ಭೂಮಿ ಮಂಜೂರು ಮಾಡಿರುವುದು ಕರ್ನಾಟಕ ನಗರ ಅಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ - 1987ರ ಮತ್ತು ಕರ್ನಾಟಕ ನಗರಾಭಿವೃದ್ಧಿ (ನಾಗರಿಕ ಸೌಲಭ್ಯ ನಿವೇಶನಗಳ ಮಂಜೂರಾತಿ) ಅಧಿನಿಯಮಗಳು-1991ರ ಮತ್ತು ಸಾರ್ವಜನಿಕ ನಂಬಿಕೆ ತತ್ವಕ್ಕೆ ವಿರುದ್ಧವಾಗಿದೆ. ಸಾರ್ವಜನಿಕ ಉದ್ಯಾನ, ಶಾಲೆ ಅಥವಾ ಸರ್ಕಾರಿ ಸೇವೆಗಳಿಗೆ ಮೀಸಲಿಟ್ಟಿರುವ ಜಾಗವನ್ನು ಖಾಸಗಿ ವ್ಯಕ್ತಿಗಳ ಬಳಕೆಗೆ ವರ್ಗಾಯಿಸಿರುವುದು ಅಕ್ರಮ ಮತ್ತು ರಾಜ್ಯದ ಮೇಲೆ ಸಾರ್ವಜನಿಕರು ಇಟ್ಟಿರುವ ನಂಬಿಕೆ - ವಿಶ್ವಾಸವನ್ನು ಬುಡಮೇಲು ಮಾಡುವುದಾಗಿದೆ.

ಆದ್ದರಿಂದ ಪ್ರಾಧಿಕಾರವು ನಾಗರಿಕ ಸೌಲಭ್ಯ ನಿವೇಶನವನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ನೋಂದಣಿ ಮಾಡಿರುವುದನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

📚 Related News