ಅಂದು ಅಕ್ಟೋಬರ್ 29, 2021. 'ಪುನೀತ್ ರಾಜ್‍ಕುಮಾರ್ ಇನ್ನಿಲ್ಲ!' ಎಂಬ ಸುದ್ದಿ ತಿಳಿದ ಕರುನಾಡಿಗೆ ಬರಸಿಡಿಲು ಬಡಿದ ಅನುಭವ. ಹೃದಯಾಘಾತದಿಂದ ಕಿರಿವಯಸ್ಸಿಗೆ ಕೊನೆಯುಸಿರೆಳೆದ ಖ್ಯಾತ ನಟನ ಸಾಧನೆ ವರ್ಣನಾತೀತ. ತಮ್ಮ ಸಿನಿಮಾ ಮತ್ತು ಸಮಾಜ ಸೇವೆಯಿಂದಾಗಿ ಕನ್ನಡಿಗರೆದೆಯಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ನಟಸಾರ್ವಭೌಮನ ಕಿರಿಪುತ್ರನ ನಾಲ್ಕನೇ ಪುಣ್ಯಸ್ಮರಣೆ ಹಿನ್ನೆಲೆ, ರಾಜಕೀಯ ಮುಖಂಡರು ನಮನ ಸಲ್ಲಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ನಮನ:ಪುನೀತ್ ರಾಜ್‍ಕುಮಾರ್ ಫೋಟೋ ಒಳಗೊಂಡ ಪೋಸ್ಟರ್ ಹಂಚಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ''ಪುನೀತ್ ರಾಜ್‍ಕುಮಾರ್ ನಟನಾಗಿ ಮಾತ್ರವಲ್ಲ, ಸಾಮಾಜಿಕ ಕಳಕಳಿ ಮತ್ತು ನಿಸ್ವಾರ್ಥ ಸೇವೆಗಳಿಂದ ಇತರರಿಗೆ ಮಾದರಿಯಾದವರು. ಅಪ್ಪು ಇಂದು ನಮ್ಮ ಜೊತೆ ಇಲ್ಲದಿದ್ದರೂ ಅವರ ಸರಳತೆ, ಸಜ್ಜನಿಕೆ, ಬದುಕಿನ ಬಗೆಗಿನ ಪ್ರೀತಿ ಅವರನ್ನು ಎಲ್ಲರೆದೆಯಲ್ಲಿ ಜೀವಂತವಾಗಿಸಿದೆ. ಎಂದಿಗೂ ಮಾಸದ ನಗುಮೊಗದ ಅಪ್ಪುವಿಗೆ ಪುಣ್ಯಸ್ಮರಣೆಯ ಪ್ರೀತಿಪೂರ್ವಕ ನಮನಗಳು'' ಎಂದು ಬರೆದುಕೊಂಡಿದ್ದಾರೆ. ಪೋಸ್ಟರ್ ಮೇಲೆ, ಪುನೀತ್ ರಾಜ್‍ಕುಮಾರ್ ಪುಣ್ಯಸ್ಮರಣೆ. ನಿಷ್ಕಲ್ಮಶ ಮನಸ್ಸಿನ ಹಸನ್ಮುಖಿ ಹುಡುಗ ಅಪ್ಪುವಿನ ಜೀವನ ಪ್ರೀತಿ, ಸಾಮಾಜಿಕ ಕಳಕಳಿ ಸ್ಮರಿಸೋಣ ಎಂದು ಬರೆಯಲಾಗಿದೆ.
ಡಿಸಿಎಂ ಡಿಕೆ ಶಿವಕುಮಾರ್ ನಮನ:ಅಪ್ಪು ಮತ್ತು ತಮ್ಮ ಫೋಟೋ - ವಿಡಿಯೋಗಳನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ''ಅಪ್ಪು ಮನುಷ್ಯತ್ವಕ್ಕೆ ದೊಡ್ಡ ಉದಾಹರಣೆ. ಅಪ್ಪು ಅವರು ಸಮಾಜದಿಂದ ಪಡೆದು ಸಮಾಜಕ್ಕೆ ಹಲವಾರು ಕಾಣಿಕೆಗಳನ್ನು ಕೊಟ್ಟು ಹೋಗಿದ್ದಾರೆ. ತಮ್ಮ ಗುರುತನ್ನು ಬಿಟ್ಟು ಹೋಗಿದ್ದಾರೆ. ದೇವರು ಕೊಟ್ಟಂತಹ ಅವಕಾಶವನ್ನು ಸದುಪಯೋಗ ಮಾಡಿಕೊಂಡಿದ್ದಾರೆ. ಅಪ್ಪು ಅಜರಾಮರ.
'' ಎಂದು ಬರೆದುಕೊಂಡಿದ್ದಾರೆ. ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ:''ಸರಳತೆ, ಸಜ್ಜನಿಕೆ ಮತ್ತು ಔದಾರ್ಯದ ಮೇರು ಶಿಖರವೇ ಆಗಿದ್ದ ಕನ್ನಡ ಚಿತ್ರರಂಗದ ಶ್ರೇಷ್ಠ ನಟರಾದ ಶ್ರೀ ಪುನೀತ್ ರಾಜಕುಮಾರ್ ಅವರನ್ನು ಅತ್ಯಂತ ಭಾವಪೂರ್ಣವಾಗಿ ಸ್ಮರಿಸುತ್ತೇನೆ. ತಮ್ಮ ಇಡೀ ಬದುಕನ್ನು ಕಲೆ ಮತ್ತು ಸಮಾಜಸೇವೆಗೆ ಮೀಸಲಿಟ್ಟು, ನಮ್ಮೆಲ್ಲರ ಪಾಲಿಗೆ ಅಕ್ಕರೆಯ ಅಪ್ಪು, ಪವರ್ ಸ್ಟಾರ್ ಆಗಿದ್ದ ಪುನೀತ್ ಅವರು ಕನ್ನಡಿಗರು ಮರೆಯಲಾಗದ ಅನನ್ಯ ವ್ಯಕ್ತಿತ್ವದ ಕಲಾವಿದರು. ಇಂದು ಅವರ ಪುಣ್ಯಸ್ಮರಣೆ ದಿನ. ನನ್ನ ನಲ್ಮೆಯ ನೆಚ್ಚಿನ ಅಪ್ಪುಗೆ ನಮನಗಳನ್ನು ಸಲ್ಲಿಸುತ್ತೇನೆ'' ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಮನ:''ಕನ್ನಡಿಗರೆಲ್ಲರ ಮನದಲ್ಲಿ ಚಿರಸ್ಥಾಯಿಯಾಗಿ ನೆಲೆಸಿರುವ ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯ ಸಂಸ್ಮರಣೆಗಳು'' ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಮನ ಸಲ್ಲಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಮನ:''ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ "ಕರ್ನಾಟಕ ರತ್ನ", ನಮ್ಮೆಲ್ಲರ ಪ್ರೀತಿಯ "ಅಪ್ಪು" ದಿ. ಡಾ. ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆಯ ದಿನದಂದು ಗೌರವ ನಮನಗಳು'' ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.
ವೈ. ವಿಜಯೇಂದ್ರ ನಮನ:''ಅಭಿಮಾನಿಗಳ ಹೃದಯದಲ್ಲಿ ಸದಾ ನೆಲೆಸಿರುವ ಅನರ್ಘ್ಯ ರತ್ನ, ಅಭಿಮಾನಿ ದೇವರುಗಳ ಪಾಲಿನ ಮೆಚ್ಚಿನ ಅಪ್ಪು, ಪುನೀತ್ ರಾಜ್‍ಕುಮಾರ್ ಅವರ ಪುಣ್ಯಸ್ಮರಣೆಯಂದು ಅಗಣಿತ ನಮನಗಳು. ದೈಹಿಕವಾಗಿ ಮಾತ್ರ ನಮ್ಮಿಂದ ದೂರವಾಗಿರುವ ಕರ್ನಾಟಕ ರತ್ನ ಪವರ್ ಸ್ಟಾರ್ ಅವರ ನೆನಪು ಕನ್ನಡ ನಾಡಿನ ಕೋಟ್ಯಂತರ ಹೃದಯಗಳಲ್ಲಿ ಸದಾ ಹಸಿರು'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ತಿಳಿಸಿದ್ದಾರೆ.
ಆರ್. ಅಶೋಕ್ ನಮನ: ''ಕನ್ನಡದ ರಾಜರತ್ನ ಪುನೀತ್ ರಾಜ್‍ಕುಮಾರ್ ಬಾಲ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದರು, ಪ್ರತಿಯೊಬ್ಬರ ಮನೆ ಮಗನಾಗಿ ಜನ ಮನ್ನಣೆ ಗಳಿಸಿದ್ದ ಅಪ್ಪು ನಮ್ಮನ್ನೆಲ್ಲ ಅಗಲಿ ಇಂದಿಗೆ 4 ವರ್ಷ. ಕರ್ನಾಟಕ ರತ್ನ ಅಪ್ಪು ಅವರ ಪುಣ್ಯಸ್ಮರಣೆಯಂದು ಅವರ ಕಲಾ ಸೇವೆ ಹಾಗೂ ಜನಸೇವೆಯನ್ನು ಸ್ಮರಿಸೋಣ'' ಎಂದು ವಿಪಕ್ಷ ನಾಯಕ ಆರ್ ಅಶೋಕ್ ತಿಳಿಸಿದ್ದಾರೆ.






