ಪತ್ನಿಯೊಂದಿಗಿನ ಖಾಸಗಿ ಕ್ಷಣಗಳಿಗೆ ಅಡ್ಡಿಯೆಂದು 7 ವರ್ಷದ ಬಾಲಕಿಯ ಹತ್ಯೆ, ಮಲತಂದೆ ಅರೆಸ್ಟ್​

ಪತ್ನಿಯೊಂದಿಗಿನ ಖಾಸಗಿ ಕ್ಷಣಗಳಿಗೆ ಅಡ್ಡಿಯೆಂದು 7 ವರ್ಷದ ಬಾಲಕಿಯ ಹತ್ಯೆ, ಮಲತಂದೆ ಅರೆಸ್ಟ್​
By Published : October 28, 2025 at 5:37 PM IST

ಬೆಂಗಳೂರು:ಏಳು ವರ್ಷದ ಬಾಲಕಿಯನ್ನು ಉಸಿರುಗಟ್ಟಿಸಿ ಹತ್ಯೆಗೈದು ಪರಾರಿಯಾಗಿದ್ದ ಮಲತಂದೆಯನ್ನು ಕುಂಬಳಗೋಡು ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ದರ್ಶನ್ ಎಂಬಾತನನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ಟೋಬರ್ 24ರಂದು ಕುಂಬಳಗೋಡು ಠಾಣೆ ವ್ಯಾಪ್ತಿಯ ಕನ್ನಿಕಾ ಬಡಾವಣೆಯ ಮನೆಯೊಂದರಲ್ಲಿ ಸಿರಿ (7) ಎಂಬ ಬಾಲಕಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿತ್ತು. ಬಾಲಕಿಯ ತಾಯಿ ಶಿಲ್ಪಾ ತನ್ನ ಮೊದಲ ಪತಿ ಮೃತಪಟ್ಟ ನಂತರ ದರ್ಶನ್ ಜೊತೆ ಎರಡನೇ ಮದುವೆಯಾಗಿದ್ದರು. ಆನೇಕಲ್‌ನ ರೀಟೈಲ್ ಮಾರ್ಕೆಟಿಂಗ್ ಕಂಪನಿಯೊಂದರಲ್ಲಿ ದರ್ಶನ್ ಕೆಲಸ ಮಾಡುತ್ತಿದ್ದರೆ, ಶಿಲ್ಪಾ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಆರಂಭದಲ್ಲಿ ಮಗುವನ್ನು ಪ್ರೀತಿಯಿಂದ‌ ನೋಡಿಕೊಳ್ಳುತ್ತಿದ್ದ ದರ್ಶನ್, ನಂತರ ದಂಪತಿಯ ಖಾಸಗಿ ಸಮಯಕ್ಕೆ ಅಡ್ಡಿಯಾಗುತ್ತಿದ್ದಾಳೆಂದು ಸಿರಿಗೆ ಹಿಂಸಿಸುವುದು, ಹೊಡೆಯುವುದು ಮಾಡುತ್ತಿದ್ದ. ಇದರಿಂದ ದರ್ಶನ್‌ನನ್ನು ಕಂಡರೆ ಸಿರಿ ಭಯಭೀತಳಾಗುತ್ತಿದ್ದಳು. ಶುಕ್ರವಾರ ಸಂಜೆ ಕೆಲಸಕ್ಕೆ ಹೋಗಿದ್ದ ಶಿಲ್ಪಾ ಇನ್ನೂ ಮನೆಗೆ ಬಂದಿರಲಿಲ್ಲ. ಹೀಗಾಗಿ ಶಾಲೆ ಮುಗಿಸಿ ಬಂದಿದ್ದ ಸಿರಿ ಪರಿಚಯಸ್ಥರ ಅಂಗಡಿ ಬಳಿ ನಿಂತಿದ್ದಳು. ಈ ವೇಳೆ ಮನೆಯಲ್ಲಿದ್ದ ದರ್ಶನ್, ಬಾಲಕಿಯನ್ನು ಹುಡುಕಿಕೊಂಡು ಬಂದಿದ್ದ.

ಅಂಗಡಿ ಬಳಿಯಿದ್ದ ಸಿರಿಯನ್ನು ಮನೆಗೆ ಹೋಗಲು ಕರೆದಾಗ ಆಕೆ ಮನೆಗೆ ಬರುವುದಿಲ್ಲ ಎಂದು ಹಠ ಮಾಡಿದ್ದಳು. ಅಲ್ಲದೆ ಅಪ್ಪ ನನಗೆ ಹೊಡೆಯುತ್ತಾನೆ ಎಂದು ಎಲ್ಲರೆದುರು ಹೇಳಿದ್ದಳು. ಆದರೂ ದರ್ಶನ್ ಬಲವಂತವಾಗಿ ಸಿರಿಯನ್ನು ಮನೆಗೆ ಕರೆದೊಯ್ದಿದ್ದ. ಮನೆಗೆ ಬಂದ ಬಳಿಕ ಕೋಪದಲ್ಲಿ ಸಿರಿಯನ್ನು ಥಳಿಸಿ, ಕತ್ತು ಹಿಸುಕಿ ಹತ್ಯೆಗೈದಿದ್ದ. ಈ ವೇಳೆ ಬಾಲಕಿಯ ಮೂಗು, ಬಾಯಿಯಲ್ಲಿ ರಕ್ತಸ್ರಾವವಾಗಿತ್ತು.

ರಕ್ತದ ಕಲೆಗಳನ್ನು ತೊಳೆದಿದ್ದ ದರ್ಶನ್, ಪತ್ನಿ ಶಿಲ್ಪಾ ಬರುವವರೆಗೂ ಕಾದು, ಶಿಲ್ಪಾ ಮನೆಗೆ ಬಂದ ಬಳಿಕ ಮಗಳು ಮಾತನಾಡುತ್ತಿಲ್ಲವೆಂದು ಹೇಳಿದ್ದ. ಮನೆಯಲ್ಲಿ ಮಗುವಿನ ಸ್ಥಿತಿ ಕಂಡ ಶಿಲ್ಪಾ ಕಿರುಚಿಕೊಂಡಿದ್ದಳು. ಇದೇ ವೇಳೆ ದರ್ಶನ್ ಶಿಲ್ಪಾಳನ್ನು ರೂಮ್‌ನಲ್ಲಿ ಕೂಡಿಹಾಕಿ ಬೈಕ್‌ನಲ್ಲಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ತಾಯಿಯಿಂದ ದೂರು ಪಡೆದ ಬಳಿಕ ಕುಂಬಳಗೋಡು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಸದ್ಯ ಮಲತಂದೆ ದರ್ಶನ್‌ನನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಬ್ರೆಜಿಲ್ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಡೆಲಿವರಿ ಬಾಯ್ ಬಂಧನ:ಮತ್ತೊಂದೆಡೆ, ಆನ್​​ಲೈನ್ ಮೂಲಕ ದಿನಸಿ ವಸ್ತುಗಳನ್ನು ಆರ್ಡರ್ ಮಾಡಿದ್ದ ಬ್ರೆಜಿಲ್ ಮೂಲದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಡೆಲಿವರಿ ಬಾಯ್​​ಯೊಬ್ಬನನ್ನು ಆರ್. ಟಿ. ನಗರ ಪೊಲೀಸರು ಬಂಧಿಸಿದ್ದಾರೆ. ಕಿರುಕುಳಕ್ಕೊಳಗಾದ ವಿದೇಶಿ ಮಹಿಳೆಯು ತಾನು ಕೆಲಸ ಮಾಡುತ್ತಿದ್ದ ಕಂಪನಿಯ ಸಹದ್ಯೋಗಿ ಕಾರ್ತಿಕ್ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಕುಮಾರ್ (22) ಎಂಬಾತನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ಧಾರೆ. ಮಾಡೆಲಿಂಗ್ ವೃತ್ತಿ ಮಾಡುತ್ತಿದ್ದ ಸಂತ್ರಸ್ತೆ ಎರಡು ತಿಂಗಳ ಹಿಂದೆ ಉದ್ಯೋಗ ವೀಸಾದಡಿ ನಗರಕ್ಕೆ ಬಂದಿದ್ದರು.

ಕಂಪನಿಯೊಂದರ ಮಾಡೆಲಿಂಗ್ ಮಾಡುವ ಸಂತ್ರಸ್ತೆ ಜೊತೆ ಇನ್ನಿಬ್ಬರು ವಿದೇಶಿ ಮಹಿಳೆಯರು ಆರ್. ಟಿ. ನಗರದ ಅಪಾರ್ಟ್​ಮೆಂಟ್​ನಲ್ಲಿ ಒಟ್ಟಿಗೆ ವಾಸವಾಗಿದ್ದರು. ಇವುಗಳನ್ನೂ ಓದಿ:.

📚 Related News