ಮೂರು ದಿನದಿಂದ‌ ಸಿಗದ ಹುಲಿ: 130ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಬೆಣ್ಣೆಗೆರೆಯಲ್ಲಿ ಠಿಕಾಣಿ

ಮೂರು ದಿನದಿಂದ‌ ಸಿಗದ ಹುಲಿ: 130ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಬೆಣ್ಣೆಗೆರೆಯಲ್ಲಿ ಠಿಕಾಣಿ
By Published : October 30, 2025 at 10:55 AM IST

ಮೈಸೂರು:ಸರಗೂರು ತಾಲೂಕಿನ ಬೆಣ್ಣೆಗೆರೆ ಗ್ರಾಮದ ಜಮೀನಿನಲ್ಲಿ, ರೈತನ ಬಲಿ ಪಡೆದ ಹುಲಿ ಸೆರೆಗೆ 130ಕ್ಕೂ ಹೆಚ್ಚು ಸಿಬ್ಬಂದಿ ಠಿಕಾಣಿ ಹೂಡಿದ್ದಾರೆ. ಅ. 26ರಂದು ರೈತ ರಾಜಶೇಖರ್​ ಅವರನ್ನು ಹುಲಿ ಕೊಂದು ಹಾಕಿತ್ತು‌. ಅದನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸೋಮವಾರದಿಂದ ಕಾರ್ಯಾಚರಣೆಗಿಳಿದಿದೆ. ತಾಲೂಕಿನ ಬೆಣ್ಣೆಗೆರೆ ಗ್ರಾಮದ ಜಮೀನಿನಲ್ಲಿ ಬುಧವಾರ ಅರಣ್ಯ ಇಲಾಖೆ ಹುಲಿ ಸೆರೆಗೆ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದು, ಹುಲಿ ಹೆಜ್ಜೆ ಗುರುತು ಪತ್ತೆಯಾಗಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ನುಗು ವನ್ಯಜೀವಿ ವಲಯದ ಅರಣ್ಯದಂಚಿನ ಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಣ್ಣೆಗೆರೆ ಗ್ರಾಮದ ಜಮೀನಿನಲ್ಲಿ ಅರಣ್ಯ ಇಲಾಖೆ ಸಾಕಾನೆಗಳಾದ ಮಹೇಂದ್ರ, ಭೀಮ, ರೋಹಿತ್ ಆನೆಗಳ ಸಹಾಯದಿಂದ ಪತ್ತೆಯಾದ ಹುಲಿ ಹೆಜ್ಜೆ ಗುರುತು ಆಧಾರಿಸಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗಿದೆ. ಆದರೆ, ಹುಲಿಯ ಸುಳಿವು ಸಿಕ್ಕಿಲ್ಲ ಎಂದು ನುಗು ಆರ್‌ಎಫ್‌ಒ ವಿವೇಕ್ ತಿಳಿಸಿದ್ದಾರೆ. ಹುಲಿ ಸೆರೆಗೆ ಬೋನ್ ಕೂಡ ಇರಿಸಲಾಗಿದ್ದು, 130ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿದೆ. ಸಿಎಫ್ ಪ್ರಭಾಕರನ್, ಎಸಿಎಫ್ ಡಿ. ಪರಮೇಶ್, ಅರವಳಿಕೆ ತಜ್ಞರಾದ ಡಾ.

ರಮೇಶ್, ಡಾ. ವಾಸೀಂ ಮಿರ್ಜಾ, ಆರ್‌ಎಫ್‌ಓಗಳಾದ ವಿವೇಕ್, ರಾಜೇಶ್, ಇಲಾಖಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಚಾಮರಾಜಗರದಲ್ಲಿ ಹುಲಿ ಕೂಂಬಿಂಗ್ ‌ಹೊತ್ತಲ್ಲೇ ವ್ಯಾಘ್ರನ ದಾಳಿಗೆ ಹಸು ಬಲಿ:ಹುಲಿ ಸೆರೆ ಕಾರ್ಯಾಚರಣೆ ಹೊತ್ತಲ್ಲೇ ಹುಲಿ ದಾಳಿಗೆ ಹಸು ಬಲಿಯಾದ ಘಟನೆ ಗುಂಡ್ಲುಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದ್ದು, ಅರಣ್ಯ ಇಲಾಖೆಯದ್ದು ಅವೈಜ್ಞಾನಿಕ ನಡೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ‌. ವೀರಭದ್ರಪ್ಪ ಎಂಬವರು ಹಸುವನ್ನು ಮೇಯಲು ಬಿಟ್ಟಿದ್ದಾಗ ಈ ಘಟನೆ ನಡೆದಿದೆ‌. ಪಡಗೂರು ಗ್ರಾಮದಲ್ಲಿ ಹುಲಿ ಸೆರೆ ಕಾರ್ಯಾಚರಣೆ ನಡೆಯುತ್ತಿತ್ತು‌‌.

‌ಪಡಗೂರು ಹಾಗೂ ಕಲ್ಲಹಳ್ಳಿ ಅಕ್ಕಪಕ್ಕದ ಊರುಗಳಾಗಿದ್ದು, ಈ ವೇಳೆ ಕಲ್ಲಹಳ್ಳಿಯಲ್ಲಿ ಹುಲಿ ದಾಳಿಗೆ ಹಸು ಬಲಿಯಾಗಿದೆ. ರೈತ ಮುಖಂಡ ಪಡಗೂರು ಶಿವಕುಮಾರ್ ಮಾತನಾಡಿ, ಹುಲಿ ಸೆರೆ ಕಾರ್ಯಾಚರಣೆಗಳಲ್ಲಿ ಎನ್ಟಿಸಿಎ ಮಾರ್ಗಸೂಚಿ ಪಾಲನೆಯಾಗುತ್ತಿಲ್ಲ, ಹುಲಿ ಕೂಂಬಿಂಗ್ ನಡೆಸುವಾಗ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಎಚ್ಚರಿಕೆ ಕೊಡಬೇಕಿದ್ದ ಅರಣ್ಯ ಇಲಾಖೆ ಈ ಕಾರ್ಯವನ್ನು ಮಾಡಿಲ್ಲ. ಅವೈಜ್ಞಾನಿಕವಾಗಿ ಹುಲಿ ಸೆರೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ವೈದ್ಯರೇ ಬರದೆ ಇವರು ಹೇಗೆ ಹುಲಿ ಸೆರೆ ಕೂಂಬಿಂಗ್ ಮಾಡುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಪಡಗೂರು ಸುತ್ತಮುತ್ತ ಹುಲಿ, ಚಿರತೆ ಹಾವಳಿ ಹೆಚ್ಚಿದ್ದರಿಂದ ಮಂಗಳವಾರದಿಂದ ಗ್ರಾಮದಲ್ಲಿ ಕೂಂಬಿಂಗ್ ನಡೆಸಲಾಗುತ್ತಿದೆ.

ಸಾಕಾನೆ ಪಾರ್ಥಸಾರಥಿ ಬಳಸಿಕೊಂಡು ಸುಮಾರು 20ಕ್ಕೂ ಅಧಿಕ ಅರಣ್ಯ ಸಿಬ್ಬಂದಿ ತಂಡ ಪಡಗೂರು ಜಮೀನುಗಳ‌ ಸುತ್ತಮುತ್ತ ಹಾಗೂ ಅರಣ್ಯ ಪ್ರದೇಶದಲ್ಲಿ ಹುಲಿ ಸೆರೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹುಲಿ, ಚಿರತೆ ಹಾವಳಿಯಿಂದ ಜಮೀನಿಗೆ ತೆರಳಲು ಭಯ ಪಡುವಂತಾಗಿದೆ. ಕೂಲಿ ಕಾರ್ಮಿಕರು ಯಾರೂ ಕೂಲಿಗೆ ಬರುತ್ತಿಲ್ಲ. ಆದಷ್ಟು ಶೀಘ್ರ ಹುಲಿ- ಚಿರತೆ ಹಿಡಿಯಬೇಕೆಂದು ರೈತರು ಒತ್ತಾಯಿಸಿದ್ದರು. ಕಲ್ಪುರದಲ್ಲೂ ಕೂಂಬಿಂಗ್: ಚಾಮರಾಜನಗರ ತಾಲೂಕಿನ ಕಲ್ಪುರದಲ್ಲೂ ಕೂಡ ಹುಲಿ ಸೆರೆ ಕಾರ್ಯಾಚರಣೆ ನಡೆಯುತ್ತಿದೆ.

‌ ಬಿಆರ್​ಟಿ ಅರಣ್ಯಾಧಿಕಾರಿಗಳು ರೈತರ ಜಮೀನುಗಳಲ್ಲಿ ವ್ಯಾಘ್ರನ ಪತ್ತೆ ಕಾರ್ಯ ನಡೆಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಒಂದೇ ದಿನ ಹುಲಿ ದಾಳಿಗೆ ಎರಡು ಹಸುಗಳು ಬಲಿಯಾಗಿದ್ದವು. ಬಳಿಕ, ರೈತರ ಒತ್ತಾಯದ ಮೇರೆಗೆ ಕೂಂಬಿಂಗ್ ಆರಂಭಗೊಂಡಿದೆ.

📚 Related News