ಬೆಂಗಳೂರು: ಕನ್ನಡ ಚಿತ್ರರಂಗದ ಬೇಡಿಕೆಯ ನಟ ಧ್ರುವ ಸರ್ಜಾ ಅವರ ವಿರುದ್ಧ ಪಕ್ಕದ ಮನೆಯ ನಿವಾಸಿಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಧ್ರುವ ಸರ್ಜಾ, ಅವರ ಮ್ಯಾನೇಜರ್, ಕಾರು ಚಾಲಕ ಹಾಗೂ ಅಭಿಮಾನಿಗಳಿಂದ ಸಮಸ್ಯೆಯಾಗುತ್ತಿರುವುದಾಗಿ ಆರೋಪಿಸಿ ಮನೋಜ್ ಕುಮಾರ್ ಎಂಬುವವರು ಬನಶಂಕರಿ ಠಾಣೆಗೆ ದೂರು ಸಲ್ಲಿಸಿದ್ದು, ಗಂಭೀರವಲ್ಲದ ಪ್ರಕರಣ (NCR) ದಾಖಲಿಸಿಕೊಳ್ಳಲಾಗಿದೆ. ಧ್ರುವ ಸರ್ಜಾ ಅವರ ಮ್ಯಾನೇಜರ್, ಕಾರು ಚಾಲಕರು ಹಾಗೂ ಅವರನ್ನು ಭೇಟಿಯಾಗಲು ಬರುವ ಅಭಿಮಾನಿಗಳು ನಮ್ಮ ಮನೆಯ ಮುಂಭಾಗದ ರಸ್ತೆಯಲ್ಲಿ ಅಡ್ಡಲಾಗಿ ತಮ್ಮ ವಾಹನಗಳನ್ನು ನಿಲ್ಲಿಸಿರುತ್ತಾರೆ. ಅಲ್ಲದೇ ನಮ್ಮ ಮನೆಯ ಮುಂದೆ ನಿಂತು ಧೂಮಪಾನ ಮಾಡುವುದು, ಉಗುಳುವುದು ಮಾಡುತ್ತಿರುತ್ತಾರೆ. ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ನಿತ್ಯ ಸಮಸ್ಯೆಯಾಗುತ್ತಿದೆ ಎಂದು ಮನೋಜ್ ಕುಮಾರ್ ಅವರು ದೂರಿದ್ದಾರೆ.
ಸದ್ಯ ನಟನ ವಿರುದ್ಧ ಬನಶಂಕರಿ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದು, ಎಫ್ಐಆರ್ ದಾಖಲಿಸಬೇಕೆಂದು ಮನೋಜ್ ಕುಮಾರ್ ಒತ್ತಾಯಿಸಿದ್ದಾರೆ.








