ಮಂಗಳೂರು: ವೀಸಾ ಕೊಡಿಸುವುದಾಗಿ 1 ಕೋಟಿ ವಂಚನೆ - ಇಬ್ಬರ ಬಂಧನ

ಮಂಗಳೂರು: ವೀಸಾ ಕೊಡಿಸುವುದಾಗಿ 1 ಕೋಟಿ ವಂಚನೆ - ಇಬ್ಬರ ಬಂಧನ
By Published : October 30, 2025 at 10:22 AM IST

ಮಂಗಳೂರು: ವಿದೇಶದಲ್ಲಿ ಉದ್ಯೋಗಕ್ಕಾಗಿ ವೀಸಾ ಕೊಡಿಸುವುದಾಗಿ ಹಲವಾರು ಜನರಿಗೆ ನಂಬಿಸಿ ಹಣ ಪಡೆದು ಆ ಬಳಿಕ ಉದ್ಯೋಗವನ್ನು ಕೊಡಿಸದೇ ಮೋಸ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರಿನ ಕಾವೂರು ಪೊಲೀಸರು ಬಂಧಿಸಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರದ ಆಲ್ಟನ್ ರೆಬೇರೋ (42) ಮತ್ತು ಬೆಂಗಳೂರಿನ ಆನೇಕಲ್​ನ ಪ್ರಕೃತಿಯು (34) ಬಂಧಿತ ಆರೋಪಿಗಳು. ಬಂಧಿತರಿಂದ ಚಿನ್ನಾಭರಣ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ. ಬಂಧಿತರು ಕಾವೂರು ಠಾಣಾ ವ್ಯಾಪ್ತಿಯ ಹಲವರಿಗೆ ವಿದೇಶದಲ್ಲಿ ಉದ್ಯೋಗಕ್ಕಾಗಿ ವೀಸಾ ಕೊಡಿಸುವುದಾಗಿ ನಂಬಿಸಿದ್ದರು. ಸುಮಾರು 1 ಕೋಟಿ ರೂ.

ಹಣವನ್ನು ಪಡೆದುಕೊಂಡು ಉದ್ಯೋಗವನ್ನು ಕೊಡಿಸದೇ ನಂಬಿಸಿ, ಮೋಸ ಮಾಡಿದ್ದಾರೆ ಎಂದು ಆರೋಪಿಸಿ, ಈ ಕಠಿಣ ಕ್ರಮ ಕೈಗೊಳ್ಳುವಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರಿನಂತೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ. ಆರೋಪಿಗಳು ಇದೇ ರೀತಿ ಇನ್ನೂ ಹಲವರಿಗೆ ವೀಸಾ ಕೆಲಸ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿರುವ ಮಾಹಿತಿ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಅವರಿಂದ ಪಾಸ್‌ ಪೋರ್ಟ್‌ಗಳನ್ನು ಪಡೆದುಕೊಂಡು ತಮ್ಮ ಮನೆಯಲ್ಲಿಯೇ ಅಕ್ರಮವಾಗಿ ಇರಿಸಿಕೊಂಡಿದ್ದ ಸುಮಾರು 24 ಪಾಸ್ ಪೋರ್ಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಜೊತೆಗೆ 4.

30 ಲಕ್ಷ ಮೌಲ್ಯದ 43 ಗ್ರಾಂ ಬಂಗಾರ ಹಾಗೂ 2 ಮೊಬೈಲ್‌ಗಳನ್ನು ಬೆಂಗಳೂರಿನಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಪಾರ್ಟ್ ಟೈಂ ಕೆಲಸದ ಆಮಿಷವೊಡ್ಡಿ ಸಾವಿರಾರು ಮಹಿಳೆಯರಿಗೆ ವ್ಯಕ್ತಿಯೊಬ್ಬ ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ. ಮಹಾರಾಷ್ಟ್ರ ಮೂಲದ ಬಾಬಾಸಾಹೇಬ್ ಕೋಳೇಕರ್ ಎಂಬಾತ ಬಡ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಕೋಟ್ಯಂತರ ರೂ. ವಂಚಿಸಿದ್ದಾರೆ. ಹೆಚ್ಚಾಗಿ ಗೃಹ ಲಕ್ಷ್ಮೀ ಯೋಜನೆ ಲಾಭ ಪಡೆಯುತ್ತಿರುವವರನ್ನೇ ಟಾರ್ಗೆಟ್ ಮಾಡಿ ಲೂಸ್ ಅಗರಬತ್ತಿ ಪ್ಯಾಕ್ ಮಾಡಲು ಹೇಳಿ ವಂಚಿಸಿದ್ದಾನೆ ಎಂದು ಆರೋಪಿಸಿರುವ ಮಹಿಳೆಯರು, ನಮಗೆ ಸೂಕ್ತ ನ್ಯಾಯ ಕೊಡಿಸಬೇಕೆಂದು ಬೆಳಗಾವಿಯ ಶಾಹಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸದ್ಯ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲು ಏರಿರುವ ಮಹಿಳೆಯರು, ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಜಿಲ್ಲಾಧಿಕಾರಿ ಕಚೇರಿಗೂ ಆಗಮಿಸಿ ಪ್ರತಿಭಟನೆ ನಡೆಸಿ ತಮಗಾದ ಮೋಸದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲಿಗೆ ಐಡಿ ಕಾರ್ಡ್ ಮಾಡಲು ಮಹಿಳೆಯರಿಂದ 2,500 ರೂ. ಹಣ ವಸೂಲಿ ಮಾಡಿರುವ ಆರೋಪಿ, ಒಂದು ಐಡಿ ಕಾರ್ಡ್​ಗೆ 20 ದಿನಕ್ಕೆ 3 ಸಾವಿರ ಹಣ ಕೊಡುತ್ತೇನೆ ಅಂತ ನಂಬಿಸಿದ್ದ. ವಂಚಕನ ಮಾತಿಗೆ ಮರುಳಾಗಿ ಹಣದಾಸೆಗೆ ಬಿದ್ದ ಮಹಿಳೆಯರು, 20 ರಿಂದ 30ರವರೆಗೆ ಐಡಿ ಕಾರ್ಡ್ ಮಾಡಿಸಿದ್ದಾರೆ.

ಅಂದಾಜು ಓರ್ವ ಮಹಿಳೆ 75 ಸಾವಿರಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಸುಮಾರು 8 ಸಾವಿರ ಮಹಿಳೆಯರಿಂದ 12 ಕೋಟಿ ರೂ. ವಂಚನೆ ಆಗಿದೆ. 20 ದಿನಕ್ಕೆ 3 ಸಾವಿರ, ದಿನಕ್ಕೆ 150 ರೂ. ಕೊಡುವುದಾಗಿ ಹೇಳಿ ವಂಚಿಸಲಾಗಿದೆ.

ಅಗರಬತ್ತಿ ಪ್ಯಾಕ್ ಮಾಡಿದ ಸಂಬಳವೂ‌ ಇಲ್ಲದೇ ಮಹಿಳೆಯರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ ಎಂದು ವಂಚನೆಗೆ ಒಳಗಾದವರು ದೂರು ನೀಡಿದ್ದಾರೆ.

📚 Related News