ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಕನ್ನಡ ಮಾತ್ರವಲ್ಲದೇ ಭಾರತೀಯ ಚಿತ್ರರಂಗದಲ್ಲೇ ಮಾದರಿ ದಂಪತಿಯಾಗಿ ಗುರುತಿಸಿಕೊಂಡಿದ್ದಾರೆ. ಒಟ್ಟಿಗೆ ವೃತ್ತಿಜೀವನ ಆರಂಭಿಸಿದ ಜೋಡಿಯ ಸ್ನೇಹ ಪ್ರೀತಿಗೆ ತಿರುಗಿ, ಸದ್ಯ ಮಾದರಿ ದಾಂಪತ್ಯ ಜೀವನ ಸಾಗಿಸುತ್ತಿದ್ದಾರೆ. ಅದೆಷ್ಟೋ ಯುವ ಜೋಡಿಗೆ ಇವರು ರೋಲ್ ಮಾಡೆಲ್. ಈ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳಿದ್ದು, ಕಿರಿಪುತ್ರ ಯಥರ್ವ್ ಆರನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾನೆ. ಒಂದು ಸಮಯ ಕನ್ನಡ ಚಿತ್ರರಂಗದಲ್ಲಿ ಉತ್ತುಂಗದಲ್ಲಿದ್ದ ನಟಿ ರಾಧಿಕಾ ಪಂಡಿತ್ ಮದುವೆ, ಮಕ್ಕಳ ಬಳಿಕ ಸಿನಿಮಾಗಳಿಂದ ದೂರ ಉಳಿದರು.
ಅದಾಗ್ಯೂ, ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸಿದ್ದಾರೆ. ಆಗಾಗ್ಗೆ ಮನಮೋಹಕ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಅದರಂತೆ ಇಂದು ಮಗನ ಜನ್ಮದಿನದ ಹಿನ್ನೆಲೆ ಸುಂದರ ಕ್ಷಣಗಳನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಮಗನ ಎರಡು ಸಿಂಗಲ್ ಫೋಟೋ ಮತ್ತು ಮಗನೊಂದಿಗಿನ ತಮ್ಮ ಫೋಟೋ ಶೇರ್ ಮಾಡಿದ ಯಶ್ ಮುದ್ದಿನ ಮಡದಿ, ನನ್ನ ಪುಟ್ಟ ಮಗನಿಗೆ ಇಂದು ಆರು ವರ್ಷ ತುಂಬಿದೆ. ನಿನ್ನ ಬೆಚ್ಚಗಿನ ಅಪ್ಪುಗೆ, ನಗು ಮತ್ತು ಸಂತೋಷ ನಮ್ಮ ಜೀವನವನ್ನು ಬೆಳಗಿಸಿದೆ.
ಕೀಪ್ ಶೈನಿಂಗ್ ಬೇಬಿ. ಹ್ಯಾಪಿ ಬರ್ತ್ಡೇ ಯಥರ್ವ್ ಎಂದು ಬರೆದುಕೊಂಡಿದ್ದಾರೆ. ಈ ಮೂರು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ. ನೆಟ್ಟಿಗರು ಮತ್ತು ಅಭಿಮಾನಿಗಳು ಪೋಸ್ಟ್ಗೆ ಪ್ರತಿಕ್ರಿಯಿಸಿಸುತ್ತಿದ್ದು, ನಮ್ಮ ಅತ್ತಿಗೆ, ಯಶ್ ಬಾಸ್ ಅನ್ನೋ ಕಾಮೆಂಟ್ಸ್ ಹೇರಳವಾಗಿವೆ. ಜೂನಿಯರ್ ಯಶ್ ಬಾಸ್ ಅಂತಾ ಓರ್ವರು ಕಾಮೆಂಟ್ ಮಾಡಿದ್ದರೆ, ಹ್ಯಾಪಿ ಬರ್ತ್ಡೇ ಲಿಟಲ್ ರಾಕಿ ಎಂದು ಮತ್ತೋರ್ವರು ತಿಳಿಸಿದ್ದಾರೆ.
ಅಭಿಮಾನಿಯೋರ್ವರು ಪ್ರತಿಕ್ರಿಯಿಸಿ, ಯಶ್ ಸರ್ಗಿಂತ ಯಥರ್ವ್ ಹೆಚ್ಚು ಹ್ಯಾಡ್ಸಂ ಎಂದು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ರಿಯಾಕ್ಟ್ ಮಾಡಿ, ಅಮ್ಮನ ಮಗನಿಗೆ, ಮಿನಿ ಹುಲಿ ಸಾಹೇಬ್ರಿಗೆ ಹ್ಯಾಪಿಯೆಸ್ಟ್ ಬರ್ತ್ಡೇ ಎಂದು ತಿಳಿಸಿದ್ದಾರೆ. ಉಳಿದಂತೆ ಹ್ಯಾಪಿ ಬರ್ತ್ಡೇ ಚೋಟಾ ರಾಕಿ ಭಾಯ್, ಹ್ಯಾಪಿ ಬರ್ತ್ಡೇ ಲಿಟಲ್ ರಾಕಿಂಗ್ ಸ್ಟಾರ್, ಹ್ಯಾಪಿ ಬರ್ತ್ಡೇ ಜೂನಿಯರ್ ಯಶ್ ಎಂದೆಲ್ಲಾ ಕಾಮೆಂಟ್ಸ್ ಹರಿದುಬರುತ್ತಿದೆ. ಜೊತೆಗೆ, ಯಶ್ ಅಣ್ಣನ ಸ್ವಾಗ್ ಇಲ್ಲಿದೆ ಎಂದು ಅಭಿಮಾನಿಯೋರ್ವರು ತಿಳಿಸಿದ್ದಾರೆ. ಯಥರ್ವ್ 2019ರ ಅಕ್ಟೋಬರ್ 30ರಂದು ಜನಿಸಿದ.
ಪೋಷಕರು ಭಾರತದ ಸ್ಟಾರ್ ಕಪಲ್. ಅವರಂತೆಯೇ ಇಬ್ಬರು ಮಕ್ಕಳಿಗೂ ಅಭಿಮಾನಿಗಳಿದ್ದಾರೆ. ಈಗಾಗಲೇ ಯಶ್ ರಾಧಿಕಾ ಮಕ್ಕಳ ಕ್ಯೂಟ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿ, ಅಭಿಮಾನಿಗಳ ಮೆಚ್ಚುಗೆ ಸಂಪಾದಿಸಿದೆ.








