ಜಗಿತ್ಯಾಲ್(ತೆಲಂಗಾಣ):ತೆಲಂಗಾಣದ ಜಗಿತ್ಯಾಲ ಜಿಲ್ಲೆಯ ಬಹುತೇಕರ ಜೀವನೋಪಾಯ ಕೃಷಿ. ಇಲ್ಲಿನ ನಿವಾಸಿಯಾದ ಆಕುರಾಳ ಅಮೃತಮ್ಮ ಅವರೂ ಕೂಡಾ ಕೃಷಿಯಲ್ಲಿ ಖುಷಿ ಕಾಣುತ್ತಿರುವವರು. ಇವರನ್ನು ಪ್ರೀತಿಯಿಂದ ಮುದ್ದಂ ಅಮೃತಮ್ಮ ಎಂದೂ ಕರೆಯುತ್ತಾರೆ. ಕಳೆದ ಮೂರು ದಶಕಗಳಿಂದ ಸಾವಯವ ಹಸಿರು ಸೊಪ್ಪುಗಳನ್ನು ಬೆಳೆಯುವ ಮೂಲಕ ಇವರು ಪ್ರಸಿದ್ಧಿ ಗಳಿಸಿದ್ದಾರೆ. ಕಠಿಣ ಪರಿಶ್ರಮಿ.
ಭೂಮಿಯ ಮೇಲಿನ ಅತೀವ ಪ್ರೀತಿಯಿಂದಾಗಿ ತುಂಡು ಭೂಮಿಯಲ್ಲೇ ಬಂಗಾರದಂಥ ಕೃಷಿ ಮಾಡುತ್ತಿದ್ದಾರೆ. ಈ ಮೂಲಕ ಮಾದರಿ ಕೃಷಿಕರಾಗಿದ್ದಾರೆ. ತಮ್ಮ ಕೃಷಿಯ ಕುರಿತು ಹೆಮ್ಮೆಯಿಂದ ಮಾತನಾಡಿರುವ ಅಮೃತಮ್ಮ, "ನಮ್ಮ ಭೂಮಿಯಲ್ಲಿ ಏನು ಬೆಳೆಯುತ್ತೇವೋ ಅದು ಚಿನ್ನಕ್ಕೆ ಸಮ. ಭೂಮಿ ಮತ್ತು ನಮ್ಮ ಕಠಿಣ ಪರಿಶ್ರಮದ ಮೇಲಿನ ನಂಬಿಕೆಯಿಂದಾಗಿ ನಮ್ಮ ಕುಟುಂಬ ನಡೆಯುತ್ತಿದೆ" ಎನ್ನುತ್ತಾರೆ. ಅಮೃತಮ್ಮ ಜಗಿತ್ಯಾಲ ಜಿಲ್ಲೆಯ ಶಂಕುಪಲ್ಲಿ ಗ್ರಾಮದವರು.
ಸಾಂಪ್ರದಾಯಿಕ ಕೃಷಿ ಕುಟುಂಬದಲ್ಲಿ ಹುಟ್ಟಿ ಬೆಳೆದರು. ಕಳೆದ 20 ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡ ಇವರ ಮೇಲೆ ಇಬ್ಬರು ಮಕ್ಕಳನ್ನು ಸಾಕುವ ಜವಾಬ್ದಾರಿ ಬಿತ್ತು. ಮನೆಯ ಬೆನ್ನೆಲುಬು ಮರೆಯಾದ ಮೇಲೆ ಬದುಕು ಕಷ್ಟವಾಯಿತು. ಪುಟ್ಟ ಮಕ್ಕಳೊಂದಿಗೆ ನಾನು ನೋವಿನಲ್ಲೇ ದಿನ ಕಳೆಯುತ್ತಿದ್ದೆ. ಈ ಸಂದರ್ಭದಲ್ಲಿ ಮುಂದೆ ಅವರಿಗೆ ಆಸರೆ ಯಾರೆಂಬ ಪ್ರಶ್ನೆ ಮೂಡಿ, ಧೈರ್ಯದಿಂದ ಭೂಮಿ ನಂಬಿ ಬದುಕು ಆರಂಭಿಸಿದೆ ಎಂದು ಅಮೃತಮ್ಮ ಹೇಳಿದರು.
ಕಷ್ಟಕಾಲದಲ್ಲಿ ಇಂಥ ಧೈರ್ಯವನ್ನು ಮೈಗೂಡಿಕೊಂಡು, ಹಸಿರು ಸೊಪ್ಪಿನ ಕೃಷಿಗೆ ಮುಂದಾದೆ. ಇದಕ್ಕಾಗಿ ಕೃಷಿಕರಾಗಿದ್ದ ನನ್ನ ಪೋಷಕರ ಸಹಾಯ ಪಡೆದೆ. ಅವರ ಅನುಭವವನ್ನೇ ಅಡಿಪಾಯವಾಗಿಸಿದೆ. ಆರಂಭದಲ್ಲಿ ಕಷ್ಟ ಎನಿಸಿತು. ಅನೇಕ ತೊಂದರೆಗಳು ಎದುರಾದವು.
ಆದರೆ ಅದರಿಂದ ವಿಮುಖಳಾಗಲಿಲ್ಲ. ನಿಧಾನವಾಗಿ ಕೃಷಿ ಮಾದರಿಗಳನ್ನು ಕಲಿತೆ ಎಂಬುದು ಅಮೃತಮ್ಮನ ಮಾತು. ಇಂದು ಅಮೃತಮ್ಮ ತಮ್ಮ ಐದು ಎಕರೆ ಜಮೀನಿನಲ್ಲಿ ಪಾಲಕ್, ಗೊಂಗುರು, ಕೊತ್ತಂಬರಿ ಹಾಗೂ ವಿವಿಧ ಬಗೆಯ ತರಕಾರಿ ಬೆಳೆಯುತ್ತಿದ್ದಾರೆ. ಹಾಗೆಯೇ ಋತುಮಾನ ಆಧರಿಸಿ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಇದಕ್ಕೆ ಆಧುನಿಕ ಸಾವಯವ ತಂತ್ರವನ್ನು ಬಳಕೆ ಮಾಡುವ ಮೂಲಕ ಆರೋಗ್ಯಯುತ ಉತ್ಪಾದನೆ ನಡೆಸುತ್ತಿದ್ದಾರೆ.
ಇವರ ರಾಸಾಯನಿಕಮುಕ್ತ ಉತ್ಪನ್ನಗಳಿಗೆ ಗ್ರಾಹಕರಿಂದ ಮತ್ತು ಸುತ್ತಮುತ್ತಲ ಮಾರುಕಟ್ಟೆಗಳಿಂದಲೂ ಒಳ್ಳೆಯ ಬೇಡಿಕೆ ಇದೆ. ಶಂಕುಪಲ್ಲಿಯ ಸುತ್ತಮುತ್ತಲು 'ಸೊಪ್ಪುಗಳ ಅಮೃತಮ್ಮ' ಎಂದೇ ಇವರು ಜನಪ್ರಿಯ. ಈ ಹೆಸರು ನನ್ನಲ್ಲಿ ಹೆಮ್ಮೆ ಉಂಟುಮಾಡುತ್ತಿದೆ ಎನ್ನುವ ಅವರು, ಕೃಷಿ ಎಂಬುದು ಸ್ವಾವಲಂಬನೆ, ಪರಿಶ್ರಮ ಮತ್ತು ಭೂಮಿ ತಾಯಿಯ ಮೇಲಿನ ಗೌರವದ ಆಚರಣೆ ಎನ್ನುತ್ತಾರೆ. ಇವುಗಳನ್ನೂ ಓದಿ:.








