ಅಭಿಮಾನಿಗಳ ರಾಜರತ್ನ ಪುನೀತ್ ರಾಜ್‍ಕುಮಾರ್ ಇಹಲೋಕ ತ್ಯಜಿಸಿ ಇಂದಿಗೆ 4 ವರ್ಷ. ಚಿತ್ರರಂಗದವರು, ರಾಜಕೀಯ ಮುಖಂಡರು ಮತ್ತು ವಿವಿಧ ಕ್ಷೇತ್ರಗಳ ಗಣ್ಯರೂ ಸೇರಿದಂತೆ ಅಭಿಮಾನಿಗಳು ನಮನ ಸಲ್ಲಿಸಿದ್ದಾರೆ. ಜೊತೆಗೆ, ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್‍ಕುಮಾರ್ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸ್ಮಾರಕವನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆ ಸುಮಾರು 10 ಗಂಟೆ ಹೊತ್ತಿಗೆ ರಾಘವೇಂದ್ರ ರಾಜ್‍ಕುಮಾರ್ ಕುಟುಂಬ, ಅಶ್ವಿನಿ ಪುನೀತ್ ರಾಜ್‍ಕುಮಾರ್, ಅಕ್ಕಂದಿರಾದ ಲಕ್ಷ್ಮೀ ಕುಟುಂಬದವರು ಸೇರಿ ರಾಜ್ ಕುಟುಂಬ ಪವರ್ ಸ್ಟಾರ್ಗೆ ಇಷ್ಟವಾದ ತಿಂಡಿ ತಿನಿಸುಗಳನ್ನಿಟ್ಟು ಪೂಜೆ ಸಲ್ಲಿಸಿದರು.
ತಮ್ಮ ಮೆಚ್ಚಿನ ನಟನ ಸಮಾಧಿಗೆ ನಮನ ಸಲ್ಲಿಸಲು ಅಪಾರ ಸಂಖ್ಯೆಯ ಅಭಿಮಾನಿಗಳು ಆಗಮಿಸಿದ್ದಾರೆ. ಸಾಲಿನಲ್ಲಿ ನಿಂತು ಸ್ಮಾರಕದ ದರ್ಶನ ಪಡೆಯುತ್ತಿದ್ದಾರೆ. ಈ ಮಧ್ಯೆ ನಟ ಶಿವರಾಜ್ಕುಮಾರ್ ಕೂಡಾ ಆಗಮಿಸಿ ಸ್ಮಾರಕಕ್ಕೆ ನಮಸ್ಕರಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನಟ ಶಿವರಾಜ್ಕುಮಾರ್, ಎಷ್ಟು ವರ್ಷಗಳಾದ್ರೂ ಪುನೀತ್ನನ್ನು ಮರೆಯಲು ಆಗೋದಿಲ್ಲ. ಅಪ್ಪು ಇಲ್ಲ ಅಂತಾ ಅಂದುಕೊಂಡ್ರೆ ಕಷ್ಟ.
ಅವನ ನೆನಪಿನಲ್ಲಿ ಬಾಳಬೇಕು. ಅವನ ನೆನಪುಗಳನ್ನು ಇಟ್ಟುಕೊಳ್ಳಬೇಕು. ಎಷ್ಟು ಸಾಧ್ಯ ಆಗುತ್ತೋ ಅಷ್ಟು ಅಪ್ಪು ನಮ್ಮ ಜೊತೆ ಇದ್ದಾನೆ ಅಂತಾ ನಾವು ನಡೆದುಕೊಳ್ಳಬೇಕು. ಅವನ ಹಳೆ ವಿಡಿಯೋಗಳನ್ನು ನೋಡುತ್ತಿದ್ರೆ ಅವನು ಎಲ್ಲವೂ ಗೊತ್ತಿದ್ದು ಮಾತನಾಡಿದ್ದಾನಾ ಅಂತಾ ಅನಿಸುತ್ತದೆ. ಅಪ್ಪಾಜಿ ಹಾಗೂ ಅಪ್ಪು ಬಗ್ಗೆ ನಾವು ಪ್ರತಿದಿನ ಮಾತನಾಡುತ್ತಿರುತ್ತೇವೆ.
ಅಪ್ಪ ಅಮ್ಮ ಮಾಡಿರೋ ಸಹಾಯಗಳನ್ನು ನಾವು ಮುಂದುರೆಸಿಕೊಂಡು ಹೋಗುತ್ತಿದ್ದೇವೆ. ಇನ್ನೂ, ಅಪ್ಪು ಬದುಕಿದ್ದಾಗ ನಾನು ಅಪ್ಪು ಒಟ್ಟಿಗೆ ಸಿನಿಮಾ ಮಾಡಬೇಕು ಅಂತಾ ಅಂದುಕೊಂಡಿದ್ವಿ. ಆ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಆದ್ರೆ ಕಾಲ ಕೂಡಿ ಬರಲಿಲ್ಲ ಎಂದು ತಿಳಿಸಿದರು. ಯುವ ರಾಜ್‍ಕುಮಾರ್ ಹಾಗೂ ವಿನಯ್ ರಾಜ್‍ಕುಮಾರ್ ಅಪ್ಪು ಜೊತೆ ವರ್ಕ್ ಔಟ್ ಮಾಡುವ ಹಳೇ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
''ಮರೆತರೂ ಮರೆಯಲಾಗದ ನೆನಪು. ತಿಳಿದರೂ ತಿಳಿಯಲಾಗದ ಒಗಟು. ಹೃದಯಕ್ಕೆ ತಿಳಿಯದ ನೋವು. ಬರೆದರು ಮುಗಿಸಲಾಗದ ಕವಿತೆ ಅಂತಾ ಬರೆದುಕೊಂಡಿದ್ದಾರೆ. ಇನ್ನು ಪತ್ನಿ-ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್, ಅಪ್ಪು ಅವರ ಸವಿನೆನಪಿನಲ್ಲಿ 4 ವರ್ಷಗಳು ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಜೊತೆಗೆ, ನಿಮ್ಮ ದೈನಂದಿನ ಕಾರ್ಯಗಳಲ್ಲಿ ಅಪ್ಪುವನ್ನು ಜೀವಂತವಾಗಿಟ್ಟಿರುವ ಎಲ್ಲರಿಗೂ ಅನಂತಾನಂತ ಕೃತಜ್ಞತೆಗಳು ಎಂದೂ ತಿಳಿಸಿದ್ದಾರೆ.







