ಗಾಜಾಪಟ್ಟಿ :ಸದ್ಯ ಚಾಲ್ತಿಯಲ್ಲಿರುವ ಕದನ ವಿರಾಮದ ಹೊರತಾಗಿಯೂ ಇಸ್ರೇಲ್ ಮಂಗಳವಾರ ವಾಯುದಾಳಿ ನಡೆಸಿದೆ ಎಂದು ಗಾಜಾದ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ. ಹಮಾಸ್ ತನ್ನ ಪಡೆಗಳ ಮೇಲೆ ದಾಳಿ ಮಾಡುವ ಮೂಲಕ ಅಮೆರಿಕ ಮಧ್ಯಸ್ಥಿಕೆ ವಹಿಸಿ ರಚಿಸಿದ್ದ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಇಸ್ರೇಲ್ ಆರೋಪಿಸಿತ್ತು. ಇದಾದ ಬಳಿಕ ಈಗ ವಾಯುದಾಳಿ ನಡೆಸಿದೆ. ಗಾಜಾ ಹಾಗೂ ಪ್ಯಾಲೆಸ್ಟೀನಿಯನ್ ಪ್ರದೇಶದ ಹಲವಾರು ಭಾಗಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ಡಜನ್ಗಟ್ಟಲೇ ದಾಳಿಗಳಲ್ಲಿ 22 ಮಕ್ಕಳು ಸೇರಿದಂತೆ ಕನಿಷ್ಠ 50 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಸುಮಾರು 200 ಜನರು ಗಾಯಗೊಂಡಿದ್ದಾರೆ ಎಂದು ನಾಗರಿಕ ರಕ್ಷಣಾ ಸಂಸ್ಥೆ ವಕ್ತಾರ ಮಹ್ಮದ್ ಬಸ್ಸಲ್ ತಿಳಿಸಿದ್ದಾರೆ. ಕದನ ವಿರಾಮ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಲ್ಲಿ ಸುಮಾರು 200 ಜನರು ಗಾಯಗೊಂಡಿದ್ದಾರೆ.
ಗಾಜಾದಲ್ಲಿನ ಪರಿಸ್ಥಿತಿ ದುರಂತ ಹಾಗೂ ಭಯಾನಕ ಎಂದು ಅವರು ಕರೆದಿದ್ದಾರೆ. ಮಂಗಳವಾರ ಘರ್ಷಣೆಗಳು ನಡೆದಿದ್ದರೂ ಕದನ ವಿರಾಮ ಮುಂದುವರಿದಿದೆ. ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರು ಹಮಾಸ್, ಗಾಜಾದಲ್ಲಿ ಇಸ್ರೇಲ್ ಪಡೆಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ ಬೆನ್ನಲ್ಲೇ, ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಗಾಜಾದ ಮೇಲೆ ಪ್ರಬಲ ದಾಳಿಗಳಿಗೆ ಆದೇಶಿಸಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ ಎಂದು ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹೇಳಿದ್ದಾರೆ. ಗಾಜಾದಲ್ಲಿ ಇಸ್ರೇಲ್ ರಕ್ಷಣಾ ಪಡೆಗಳ ಸೈನಿಕರ ಮೇಲೆ ಹಮಾಸ್ ಇಂದು ನಡೆಸಿದ ದಾಳಿಯು ಕೆಂಪು ರೇಖೆಯನ್ನು ದಾಟಿತ್ತು, ಇದಕ್ಕೆ ಇಸ್ರೇಲ್ ರಕ್ಷಣಾ ಪಡೆಗಳು ಬಲವಾಗಿ ಪ್ರತಿಕ್ರಿಯೆ ನೀಡುತ್ತಿದೆ ಎಂದು ಕ್ಯಾಟ್ಜ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಯಾವ ಪ್ರದೇಶದಲ್ಲಿ ಸೈನಿಕರ ಮೇಲೆ ದಾಳಿ ಮಾಡಲಾಗಿದೆ ಎಂದು ಕ್ಯಾಟ್ಜ್ ಮಾಹಿತಿ ನೀಡದಿದ್ದರೂ, ರಫಾದಲ್ಲಿ ನಡೆದ ಗುಂಡಿನ ದಾಳಿ ಘಟನೆಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹಮಾಸ್ ಹೇಳಿದೆ.
ಶ್ವೇತಭವನ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೋಸ್ಟ್ನಲ್ಲಿ, ಕದನ ವಿರಾಮ ಮುಂದುವರಿದಿದೆ. ಅಂದರೆ ಸಣ್ಣ ಘರ್ಷಣೆಗಳು ಇರುವುದಿಲ್ಲ ಎಂದು ಇದರ ಅರ್ಥವಲ್ಲ ಎಂದು ವ್ಯಾನ್ಸ್ ಹೇಳಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ನಡೆದ ದುರ್ಬಲ ಕದನ ವಿರಾಮ ಒಪ್ಪಂದವನ್ನು ಬಲಪಡಿಸಲು ಕಳೆದ ವಾರ ಇಸ್ರೇಲ್ಗೆ ಧಾವಿಸಿದ ಅಮೆರಿಕದ ಹಲವಾರು ಉನ್ನತ ಅಧಿಕಾರಿಗಳಲ್ಲಿ ಇವರೂ ಕೂಡ ಒಬ್ಬರು. ಹಮಾಸ್ ಅಥವಾ ಗಾಜಾದೊಳಗಿನ ಬೇರೆ ಯಾರೋ ಐಡಿಎಫ್ ಸೈನಿಕರ ಮೇಲೆ ದಾಳಿ ಮಾಡಿದ್ದಾರೆ ಎಂದು ನಮಗೆ ತಿಳಿದಿದೆ. ಇಸ್ರೇಲಿಗಳು ಇದಕ್ಕೆ ಪ್ರತಿಕ್ರಿಯಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ.
ಆದರೆ, ನಮ್ಮ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಧ್ಯಸ್ಥಿಕೆ ವಹಿಸಿ ಮಾಡಿದ ಶಾಂತಿ ಒಪ್ಪಂದ ಮುಂದುವರಿಯುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು. ಗಾಜಾ ಮೇಲೆ ದಾಳಿ: ಕನಿಷ್ಠ ಮೂರು ದಾಳಿಗಳನ್ನು ನಡೆಸಲಾಗಿದೆ ಎಂದು ಗಜಾದ ನಾಗರಿಕ ರಕ್ಷಣಾ ಸಂಸ್ಥೆ ಹೇಳಿದ್ದರೆ, ಆ ಪ್ರದೇಶದ ಅಲ್ ಶಿಫಾ ಪ್ರಮುಖ ಆಸ್ಪತ್ರೆಯು, ಒಂದು ದಾಳಿ ಆಸ್ಪತ್ರೆಯ ಕಟ್ಟದ ಹಿತ್ತಲಿಗೆ ಹೊಡೆದಿದೆ ಎಂದು ಹೇಳಿದೆ. ಕದನ ವಿರಾಮ ಒಪ್ಪಂದದ ಅಡಿಯಲ್ಲಿ ಇಸ್ರೇಲ್ ಬೇಡಿಕೆಯಂತೆ ಮಂಗಳವಾರ ಮತ್ತೊಬ್ಬ ಒತ್ತೆಯಾಳು ಮೃತದೇಹವನ್ನು ಹಸ್ತಾಂತರಿಸವುದಾಗಿ ಹಮಾಸ್ ಘೋಷಿಸಿತ್ತು. 2023 ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಯುದ್ಧಕ್ಕೆ ಕಾರಣವಾದ ದಾಳಿಯ ಸಮಯದಲ್ಲಿ, ಹಮಾಸ್ ಉಗ್ರಗಾಮಿಗಳು 251 ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಮೃತ ಒತ್ತೆಯಾಳುಗಳ ಮೃತದೇಹಗಳನ್ನು ಹಿಂತಿರುಗಿಸದೇ ಹಿಂದಕ್ಕೆ ಸರಿದಿದೆ ಎಂದು ಇಸ್ರೇಲ್ ಆರೋಪಿಸಿದೆ.
ಆದರೆ ಪ್ಯಾಲೇಸ್ಟಿನಿಯನ್ ಇಸ್ಲಾಮಿಸ್ಟ್ ಗುಂಪು ಗಾಜಾದ ಯುದ್ಧದಿಂದ ಹಾನಿಗೊಳಗಾದ ಅವಶೇಷಗಳ ನಡುವೆ ಅವಶೇಷಗಳನ್ನು ಪತ್ತೆಹಚ್ಚಲು ಸಮಯ ತೆಗೆದುಕೊಳ್ಳುತ್ತದೆ ಎಂದು ಸಮಜಾಯಿಷಿ ನೀಡಿದೆ.







