"2027ರ ವಿಶ್ವಕಪ್​ನಲ್ಲಿ 8ನೇ ಸ್ಥಾನ ನನ್ನದೇ"; ಗಂಭೀರ್​ ಶಿಷ್ಯನಿಗೆ ಆಲ್​ರೌಂಡರ್​ ಸವಾಲು!

"2027ರ ವಿಶ್ವಕಪ್​ನಲ್ಲಿ 8ನೇ ಸ್ಥಾನ ನನ್ನದೇ"; ಗಂಭೀರ್​ ಶಿಷ್ಯನಿಗೆ ಆಲ್​ರೌಂಡರ್​ ಸವಾಲು!
By Published : October 29, 2025 at 2:15 PM IST

ಹೈದರಾಬಾದ್​:ಪುರುಷರ ಏಕದಿನ ವಿಶ್ವಕಪ್​ಗೆ ಇನ್ನೂ ಎರಡು ವರ್ಷಗಳ ಸಮಯವಿದೆ. ಈಗಾಗಲೇ ತಂಡದಲ್ಲಿ ಯಾರೆಲ್ಲ ಸ್ಥಾನ ಪಡೆಯಲಿದ್ದಾರೆ ಎಂಬ ಚರ್ಚೆಗಳು ಪ್ರಾರಂಭವಾಗಿವೆ. ಅದರಲ್ಲೂ ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮಾಗೆ ತಂಡದಲ್ಲಿ ಸ್ಥಾನ ಸಿಗುವುದು ಅನುಮಾನ ಎಂಬ ಮಾತುಗಳು ಹರಿದಾಡುತ್ತಿರುವುದರ ನಡುವೆಯೇ ಸ್ಟಾರ್​ ಕ್ರಿಕೆಟರ್​ ಒಬ್ಬ 2027ರ ಏಕದಿನ ವಿಶ್ವಕಪ್​ನಲ್ಲಿ ತಾನು ಭಾರತದ ಪರ ಆಡಲಿದ್ದು, ತಂಡದಲ್ಲಿ 8ನೇ ಸ್ಥಾನ ತನ್ನದೇ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 35 ವರ್ಷದ ಮೊಹಮ್ಮದ್​ ಶಮಿ ಸದ್ಯ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದು, ಕಮ್​ಬ್ಯಾಕ್​ ಮಾಡಲು ಎದುರು ನೋಡುತ್ತಿದ್ದಾರೆ. ಅಲ್ಲದೇ ಮುಂದಿನ ಏಕದಿನ ವಿಶ್ವಕಪ್​ನಲ್ಲಿ ಆಡುವ ಗುರಿಯನ್ನು ಸಹ ಹೊಂದಿದ್ದಾರೆ.

ಅದಕ್ಕಾಗಿ ಶಮಿ ಶ್ರಮಿಸುತ್ತಿದ್ದಾರೆ. ಮತ್ತೊಂದೆಡೆ ಹರ್ಷಿತ್​ ರಾಣಾ ಸದ್ಯ ರಾಷ್ಟ್ರೀಯ ತಂಡದ ಪರ ಪಂದ್ಯಗಳನ್ನು ಆಡುತ್ತಿದ್ದು, ಹೇಗಾದರು ಮಾಡಿ ಮುಂದಿನ ವಿಶ್ವಕಪ್​ ವೇಳೆ ಬೌಲಿಂಗ್​ ಮತ್ತು ಬ್ಯಾಟಿಂಗ್ ನಲ್ಲಿ ಸ್ಥಿರ ಪ್ರದರ್ಶನ ನೀಡಿ ತಂಡದಲ್ಲಿ ಸ್ಥಾನ ಖಚಿತ ಪಡಿಸಿಕೊಳ್ಳಬೇಕು ಎಂಬ ನಿರೀಕ್ಷೆಯಲ್ಲಿದ್ದಾರೆ. ​ಆದರೆ ಇದೀಗ ಈ ಇಬ್ಬರ ಪಟ್ಟಿಗೆ ಮತ್ತೊಬ್ಬ ಆಟಗಾರ ಎಂಟ್ರಿಯಾಗಿದ್ದಾರೆ. ಹೌದು, ಶಾರ್ದೂಲ್​ ಠಾಕೂರ್​ ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ತಾವು ತಂಡದಲ್ಲಿ ಸ್ಥಾನ ಪಡೆದು ಕಣಕ್ಕಿಳಿಯುವುದು ಖಚಿತ ಎಂದು ಹೇಳಿದ್ದಾರೆ. ಇದರೊಂದಿಗೆ ಸದ್ಯ ಭಾರತ ತಂಡದಲ್ಲಿ ಹರ್ಷಿತ್ ರಾಣಾ ಆಡುತ್ತಿರುವ ಸ್ಥಾನ ತಮ್ಮದೇ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ, ಶಾರ್ದೂಲ್ ರಣಜಿ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ರಾಷ್ಟ್ರೀಯ ತಂಡಕ್ಕೆ ಮರಳುವುದು ನನ್ನ ಗುರಿ:ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ನನ್ನ ಕೆಲಸ ನಿರಂತರವಾಗಿ ಪಂದ್ಯಗಳನ್ನು ಆಡುವುದು ಮತ್ತು ಉತ್ತಮ ಪ್ರದರ್ಶನ ನೀಡುವುದಾಗಿದೆ. ರಾಷ್ಟ್ರೀಯ ತಂಡಕ್ಕೆ ಮರಳುವುದು ನನ್ನ ಗುರಿಯಾಗಿದೆ. ಅದಕ್ಕಾಗಿ ಏನು ಮಾಡಬೇಕು ಎಂದು ನನಗೆ ತಿಳಿದಿದೆ. ನಾನು ಪಂದ್ಯ ಗೆಲ್ಲುವ ಪ್ರದರ್ಶನಗಳನ್ನು ನೀಡಬೇಕು.

ಅದು ತಂಡದ ಆಯ್ಕೆಯ ಸಮಯದಲ್ಲಿ ನನ್ನನ್ನು ಪರಿಗಣಿಸಲು ಸಹಾಯ ಮಾಡುತ್ತದೆ. ಎಲ್ಲರೂ ರಾಷ್ಟ್ರೀಯ ತಂಡಕ್ಕಾಗಿ ಆಡಲು ಬಯಸುತ್ತಾರೆ. ನಾನು ಸಹ ಇದಕ್ಕೆ ಹೊರತಾಗಿಲ್ಲ. ನಾನು ಖಂಡಿತವಾಗಿಯೂ ಮತ್ತೆ ಮರಳುತ್ತೇನೆ ಎಂದು ಶಾರ್ದೂಲ್ ಹೇಳಿದರು. ನನ್ನ ಸ್ಥಾನವೂ ಅದೇ:"2027ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ.

ಅಲ್ಲಿಯ ಪಿಚ್​ಗಳಲ್ಲಿ ವೇಗದ ಬೌಲಿಂಗ್​ ಮತ್ತು ಬ್ಯಾಟಿಂಗ್​ ಎರಡೂ ಅಗತ್ಯ. ಈ ದೃಷ್ಟಿಯಿಂದ ಬೌಲಿಂಗ್​ ಆಲೌರಂಡರ್​ಗಳಿಗೆ 8ನೇ ಸ್ಥಾನ ಸಿಗಲಿದೆ. ನಾನು ಕೂಡ ಆ ಸ್ಥಾನದ ಮೇಲೆ ಕಣ್ಣಿಟ್ಟಿದ್ದೇನೆ ಎಂದು ಹೇಳುವ ಮೂಲಕ ಆ ಸ್ಥಾನ ತಮ್ಮದೆ ಎಂದು ಹೇಳಿದ್ದಾರೆ. ಅಲ್ಲದೇ ತಂಡಕ್ಕೆ ನನ್ನ ಅಗತ್ಯವಿದೆ ಎಂದು ಅನಿಸಿದಾಗ ಅಥವಾ ನಾನು ಆಯ್ಕೆಯಾದಾಗ ತಂಡಕ್ಕೆ ಮರಳಲು ಸಿದ್ಧ. ಒಂದು ವೇಳೆ ನಾಳೆಯೇ ತಂಡದ ಪರ ಆಡಬೇಕಾದರೂ ಸಹ ನಾನು ಸಿದ್ಧನಿದ್ದೇನೆ" ಎಂದು ಶಾರ್ದೂಲ್ ಹೇಳಿದ್ದಾರೆ.

ಇತ್ತೀಚೆಗೆ ಆಸೀಸ್ ವಿರುದ್ಧ ಮುಕ್ತಾಯಗೊಂಡ ಏಕದಿನ ಸರಣಿಯಲ್ಲಿ, ಹರ್ಷಿತ್ ರಾಣಾ ಎಂಟನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದರು ಮತ್ತು ಕೆಲವು ದೊಡ್ಡ ಹೊಡೆತಗಳನ್ನು ಆಡಿದರು. ಎರಡನೇ ಏಕದಿನ ಪಂದ್ಯದಲ್ಲಿ ಹರ್ಷಿತ್ ಉತ್ತಮ ಸ್ಕೋರ್ ಗಳಿಸಿ ಗಮನ ಸೆಳೆದಿದ್ದರು. ಶಾರ್ದೂಲ್​ ಕ್ರಿಕೆಟ್​ ವೃತ್ತಿಜೀವನ: 34 ವರ್ಷದ ಶಾರ್ದೂಲ್ ಠಾಕೂರ್ ಇದುವರೆಗೆ ಕೇವಲ 47 ಏಕದಿನ ಪಂದ್ಯಗಳು, 25 ಟಿ20 ಪಂದ್ಯಗಳು ಮತ್ತು 13 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು ಕೊನೆಯದಾಗಿ 2023ರ ಏಕದಿನ ವಿಶ್ವಕಪ್‌ನಲ್ಲಿ ತಂಡವನ್ನು ಪ್ರತಿನಿಧಿಸಿದ್ದರು. ಅಂದಿನಿಂದ, ಅವರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವುದಕ್ಕಾಗಿ ಶ್ರಮಿಸುತ್ತಿದ್ದಾರೆ.

ಅವರು ನಡುವೆ ಟೆಸ್ಟ್‌ ಪಂದ್ಯಕ್ಕೆ ತಂಡದಲ್ಲಿ ಸ್ಥಾನ ಪಡೆದಿದ್ದರೂ ಹೆಚ್ಚಿನ ಪರಿಣಾಮ ಬೀರಲ ಸಾಧ್ಯವಾಗಿರಲಿಲ್ಲ.

📚 Related News