ಜನಪ್ರಿಯ ನಟಿ ಮಹಿಮಾ ಚೌಧರಿ ವಧುವಂತೆ ಕಾಣಿಸಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರಿ ಸಂಚಲನ ಸೃಷ್ಟಿಸಿದೆ. ವಿಡಿಯೋದಲ್ಲಿ, ಹಿರಿಯ ನಟ ಸಂಜಯ್ ಮಿಶ್ರಾ ಅವರೊಂದಿಗೆ ಕ್ಯಾಮರಾಗಳಿಗೆ ಪೋಸ್ ನೀಡುತ್ತಿರುವುದು ಕಂಡುಬಂದಿದ್ದು, 52 ವರ್ಷದ ನಟಿ ಮತ್ತೆ ಮದುವೆಯಾಗಿದ್ದಾರೆಯೇ? ಎಂದು ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವ ಈ ವಿಡಿಯೋದಲ್ಲಿ, ಮಹಿಮಾ ಚೌಧರಿ ಪಾಪರಾಜಿಗಳಿಗೆ ಸಂಜಯ್ ಮಿಶ್ರಾ ಅವರೊಂದಿಗೆ ನಗು ನಗುತ್ತಾ ಪೋಸ್ ಕೊಡುತ್ತಿರುವುದನ್ನು ಕಾಣಬಹುದಾಗಿದೆ. ಇಬ್ಬರೂ ನವವಿವಾಹಿತ ದಂಪತಿಗಳಂತೆ ಕಾಣಿಸಿಕೊಂಡಿದ್ದು, ಅವರ ಸುತ್ತಲಿರುವ ಜನರು ಅಭಿನಂದನೆಗಳನ್ನು ತಿಳಿಸಿದ್ದಾರೆ. ಮಹಿಮಾ, "ಹೊರಡುವ ಮೊದಲು ಸಿಹಿ ಸೇವಿಸಿ" ಎಂದು ಪಾಪರಾಜಿಗಳಿಗೆ ತಿಳಿಸಿದ್ದು, ಇದು ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿದೆ.
ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆದ ಕೂಡಲೇ ಮಹಿಮಾ ಎರಡನೇ ಮದುವೆ ಆಗಿದ್ದಾರಾ? ಎಂದು ಊಹಾಪೋಹಗಳು ಹರಡಲು ಶುರುವಾಯಿತು. ಹಲವರು ಎರಡನೇ ಮದುವೆ ಆಗಿರಬಹುದೆಂದು ಬಹುತೇಕ ನಂಬಿದ್ದರು. ಅದಾಗ್ಯೂ, ಅಸಲಿ ವಿಷಯ ಬೇರೆಯೇ ಇದೆ. ಮಹಿಮಾ ಚೌಧರಿ ಮತ್ತು ಸಂಜಯ್ ಮಿಶ್ರಾ ನಿಜ ಜೀವನದಲ್ಲಿ ಮದುವೆಯಾಗಿಲ್ಲ. ಈ ವಿಡಿಯೋ ಅವರ ಮುಂಬರುವ 'ದುರ್ಲಭ್ ಪ್ರಸಾದ್ ಕಿ ದೂಸ್ರಿ ಶಾದಿ' (ದುರ್ಲಭ್ ಪ್ರಸಾದ್ ಅವರ ಎರಡನೇ ಮದುವೆ) ಸಿನಿಮಾ ಪ್ರಚಾರದ ಭಾಗವಾಗಿತ್ತು.
ಸಿನಿಮಾದ ಕ್ರಿಯೇಟಿವ್ ಪ್ರಮೋಶನ್ನ ಭಾಗವಾಗಿ ಈ ಜೋಡಿ ಮದುವೆಯ ಉಡುಪಿನಲ್ಲಿ ಕಾಣಿಸಿಕೊಂಡರು. ಚಿತ್ರದ ಮೋಷನ್ ಪೋಸ್ಟರ್ ಈಗಾಗಲೇ ಮಧ್ಯವಯಸ್ಕ ವ್ಯಕ್ತಿ ಎರಡನೇ ಮದುವೆಗೆ ಮುಂದಾಗುವ ಬಗ್ಗೆ ಸುಳಿವು ನೀಡಿತ್ತು. ಸ್ವತಃ ಮಹಿಮಾ ಚೌಧರಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಹಂಚಿಕೊಂಡಿದ್ದು, "ವಧು ಸಿಕ್ಕಿದ್ದಾಳೆ, ಸಿದ್ಧರಾಗಿ, ಏಕೆಂದರೆ ಮದುವೆ ಮೆರವಣಿಗೆ ಶೀಘ್ರದಲ್ಲೇ ಹೊರಡಲಿದೆ. ಚಿತ್ರಮಂದಿರಗಳ ಹತ್ತಿರ ಅಥವಾ ದೂರದಿಂದ" ಎಂದು ಬರೆದುಕೊಂಡಿದ್ದರು. ಅಭಿಷೇಕ್ ದೊಗ್ರಾ ನಿರ್ದೇಶನದ ಈ ಕಾಮಿಡಿ ಡ್ರಾಮಾದಲ್ಲಿ ಸಂಜಯ್ ಮಿಶ್ರಾ 50ರ ಹರೆಯದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ.
ಮರು ಮದುವೆಯಾಗಿ ಜೀವನ ನಡೆಸುವ ಕಥೆ, ಮಹಿಮಾ ಚೌಧರಿ ಅವರ ನವ ವಧುವಿನ ಪಾತ್ರದಲ್ಲಿ ನಟಿಸಿದ್ದಾರೆ. ಯುವ ಪ್ರತಿಭೆಗಳಾದ ವ್ಯೋಮ್ ಮತ್ತು ಪಲಕ್ ಲಾಲ್ವಾನಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ವಧು - ವರರಂತೆ ಚಿತ್ರದ ಪ್ರಮುಖ ಜೋಡಿಯನ್ನು ತೋರಿಸುವ ಪ್ರಮೋಶನ್ ಸ್ಟ್ರಾಟಜಿ ವರ್ಕ್ಔಟ್ ಆಗಿದೆ. ಏಕೆಂದರೆ ಸೋಷಿಯಲ್ ಮೀಡಿಯಾದಲ್ಲಿ "ಮದುವೆ" ಬಗ್ಗೆ ಮಾತು ಬಹಳ ಜೋರಾಗೇ ಇದೆ. ಮಹಿಮಾ ಚೌಧರಿ ವೃತ್ತಿಜೀವನ ಗಮನಿಸಿದರೆ, ಬಾಲಿವುಡ್‌ಗೆ ಸ್ಟ್ರಾಂಗ್ ಕಮ್ಬ್ಯಾಕ್ ಆಗಿದೆ.
ಕಳೆದ ವರ್ಷದ ಸಿಗ್ನೇಚರ್‌ನಲ್ಲಿ ಕಾಣಿಸಿಕೊಂಡರು ಮತ್ತು ಕಂಗನಾ ರಣಾವತ್ ಅವರ ಎಮರ್ಜೆನ್ಸಿ ಮತ್ತು ಇಬ್ರಾಹಿಂ ಅಲಿ ಖಾನ್ - ಖುಷಿ ಕಪೂರ್ ಅಭಿನಯದ ನದಾನಿಯನ್ ಚಿತ್ರದಲ್ಲೂ ಬಣ್ಣ ಹಚ್ಚಿದ್ದರು. ದುರ್ಲಭ್ ಪ್ರಸಾದ್ ಕಿ ದೂಸ್ರಿ ಶಾದಿಯೊಂದಿಗೆ, ಮತ್ತೊಮ್ಮೆ ಫ್ರೆಶ್ ಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.








