ಬೆಳಗಾವಿ:ಡಿ. ಕೆ. ಶಿವಕುಮಾರ್ ಸಿಎಂ ಆಗಲ್ಲ. ಸತೀಶ್ ಜಾರಕಿಹೊಳಿ ಕೂಡ ಮುಖ್ಯಮಂತ್ರಿ ಆಗಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.
ನವೆಂಬರ್ ಕ್ರಾಂತಿ, ನಾಯಕತ್ವ ಬದಲಾವಣೆ ಬಗ್ಗೆ ಬುಧವಾರ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸ್ಪರ್ಧೆಯಲ್ಲಿರುವ ಯಾವ ನಾಯಕರೂ ಸಿಎಂ ಆಗಲ್ಲ. ರಾಜ್ಯದ ಸಾರಥ್ಯ ಬೇರೊಬ್ಬರ ಕೈಗೆ ಸಿಗಲಿದೆ. ರಾಷ್ಟ್ರೀಯ ಅಧ್ಯಕ್ಷರಾಗಿ ಒಂದು ಬಾರಿಯಾದರೂ ಸಿಎಂ ಆಗಬೇಕು ಅಂತಾ ಕುಳಿತಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರಿಗೆ ಅಲ್ಲಿ ಏನೂ ಕೆಲಸ ಇಲ್ಲ, ಉತ್ಪನ್ನ ಇಲ್ಲ ಎಂದು ವ್ಯಂಗ್ಯವಾಡಿದರು. ಸಿಎಂ ಪುತ್ರನ ಮೂಲಕ ಬೆಳಗಾವಿಗೆ ಬಂದು ಸತೀಶ್ ಜಾರಕಿಹೊಳಿ ಹೆಸರು ಹೇಳಿಸಿದ್ದಾರೆ.
ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡಿದರೆ ನಮ್ಮ ಕಡೆಯಿಂದ ಸತೀಶ್ ಜಾರಕಿಹೊಳಿ ಮಾಡಬೇಕು ಅಂತಾ ಪುತ್ರನ ಮೂಲಕ ಹೇಳಿಸಿದ್ದಾರೆ. ನಾಯಕತ್ವ ಬದಲಾವಣೆ ಗೊತ್ತಾಗಿದ್ದರಿಂದ ಹೈಕಮಾಂಡ್ ಮನಸ್ಸು ಮಾಡಿದರೆ ಮುಂದುವರೆಯುತ್ತೇನೆ ಎಂಬ ಮಾತುಗಳನ್ನು ಹೇಳಲು ಶುರು ಮಾಡಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾಗಿ ಮಲ್ಲಿಕಾರ್ಜುನ್ ಖರ್ಗೆ ಸಿಎಂ ಆಗಲಿದ್ದಾರೆ ಎಂದು ಯತ್ನಾಳ್ ಪುನರುಚ್ಚರಿಸಿದರು. ಬಬಲೇಶ್ವರ ಕ್ಷೇತ್ರದಲ್ಲಿ ಸಮಾವೇಶ ಕುರಿತು ಮಾತನಾಡಿ, ಕನೇರಿ ಮಠದ ಸ್ವಾಮೀಜಿ ಕರೆದುಕೊಂಡು ಬಂದು ಸಮಾವೇಶ ಮಾಡುತ್ತೇವೆ. ಅವರು ಬರಲು ಆಗದಿದ್ದರೆ ನಾವೇ ಸಮಾವೇಶ ಮಾಡುತ್ತೇವೆ.
ಎಂ. ಬಿ. ಪಾಟೀಲ್ ಹಾಕಿರುವ ಸವಾಲನ್ನು ಸ್ವೀಕಾರ ಮಾಡಿದ್ದೇವೆ. ಸನಾತನ ಧರ್ಮದ ರಕ್ಷಣೆಗೆ ಬಬಲೇಶ್ವರದಿಂದಲೇ ಬಸವಾದಿ ಪ್ರಮಥರ ಹಿಂದೂ ಸಮಾವೇಶ ಪ್ರಾರಂಭ ಆಗಲಿದೆ. ಸಮಾರೋಪ ಸಮಾರಂಭವನ್ನು ವಿರಾಟ ಹಿಂದೂ ಸಮಾವೇಶ ಮಾಡುತ್ತೇವೆ.
ದಾವಣಗೆರೆಯಲ್ಲಿ ಸಮಾರೋಪ ಸಮಾರಂಭ ಮಾಡುತ್ತೇವೆ ಎಂದರು. ಹಿಂದೂ ಧರ್ಮದ ಬಗ್ಗೆ ಸ್ವಾಮೀಜಿ, ರಾಜಕಾರಣಿಗಳು ಮಾತಾಡಿದರೆ ಅದೇ ದಾಟಿಯಲ್ಲಿ ಉತ್ತರಿಸುವೆ. ಬಸವಣ್ಣನವರ ಹೆಸರು ಹೇಳಿ ನಾಟಕ ಮಾಡುವವರು ಕಾಲು ಬಂದ್ ಆಗಬೇಕು. ಲಿಂಗಾಯತ ಧರ್ಮ ಸ್ಥಾಪನೆಯ ಬಗ್ಗೆ ದಾಖಲೆ ಎಲ್ಲಿದೆ ಎಂದು ಪ್ರಶ್ನಿಸಿದ ಯತ್ನಾಳ್, ಹಿಂದೂ ಸಮಾಜದಲ್ಲಿ ಇರೋ ಮೂಢ ನಂಬಿಕೆ ವಿರುದ್ಧ ಹೋರಾಟ ಮಾಡಿದ ಬಸವಣ್ಣನವರ ಜೊತೆಗೆ ಎಲ್ಲ ಸಮಾಜದವರು ಇದ್ದರು. ಎಂ.
ಬಿ. ಪಾಟೀಲ್ ಇಷ್ಟು ದಿನ ನಕಲಿ ಪಾಟೀಲ್ ಬಗ್ಗೆ ಮಾತಾಡಿದ್ದರು. ನಾನು ಒರಿಜಿನಲ್ ಗೌಡ್ರು. ನಮ್ಮ ಹಿಂದೆ ಸಮಸ್ತ ಹಿಂದೂ ಸಂಘಟನೆ ಇದೆ. ಬಸವ ಆರ್ಮಿ ಬರಲಿ, ಭೀಮ್ ಆರ್ಮಿ ಬರಲಿ ನಿಮ್ಮ ಭಾಷೆಯಲ್ಲಿಯೇ ನಾವು ಉತ್ತರ ಕೊಡುತ್ತೇವೆ ಎಂದು ತಿರುಗೇಟು ಕೊಟ್ಟರು.
ಮುನ್ನೂರು ಕೋಟಿ ಬಿಹಾರ ಚುನಾವಣೆಗೆ ನೀಡಿರುವುದಾಗಿ ಶ್ರೀರಾಮುಲು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಅವರಿಗೆ ಯಾರಿಂದ ಹೇಗೆ ಹೋಗುತ್ತೆ ಎನ್ನುವುದು ಗೊತ್ತಿರುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಈ ರೀತಿ ಸಹಜವಾಗಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅವರಿಗೆ ಕರ್ನಾಟಕದಿಂದಲೇ ಉತ್ಪನ್ನ ಬರುವಂತದ್ದು. ಚಿತ್ರದುರ್ಗ ಶಾಸಕ ಪಪ್ಪಿ ಅವರು ಐದನೂರು ಕೋಟಿ ಕೊಡುತ್ತೇನೆ, ಸಚಿವ ಸ್ಥಾನ ಕೊಡಿ ಅಂದಿದ್ದರು. ಅದೇ ಮಾಹಿತಿ ಮೇಲೆ ದಾಳಿ ಮಾಡಿದಾಗ ಏನೇಲ್ಲಾ ಸಿಕ್ಕಿತ್ತು ಎಂದು ಇದೇ ವೇಳೆ ದೂರಿದರು.
ನಾನು ಬಿಜೆಪಿಯ ಯಾರ ಸಂಪರ್ಕಕ್ಕೂ ಹೋಗಿಲ್ಲ. ಈಗ ಅವರಿಗೆ ನನ್ನ ಅವಶ್ಯಕತೆ ಇಲ್ಲ. ಚುನಾವಣೆ ಬಂದಾಗ ಬೇಕಾಗುತ್ತದೆ. ನಾಳೆ ಗೋವಾಕ್ಕೆ ಹೋಗುತ್ತಿದ್ದೇನೆ. ಅಲ್ಲಿ ಪರಿವರ್ತನೆ ಆಗುತ್ತಿದೆ.
ಹೈಕಮಾಂಡ್ ಮತ್ತೆ ಕರೆಯದಿದ್ದರೆ ಜೆಸಿಬಿ ಪಕ್ಷ ರೆಡಿ ಇದೆ. 2028ಕ್ಕೆ ನಾನು ಜೆಸಿಬಿ ಮೂಲಕ ಸಿಎಂ ಆಗುತ್ತೇನೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ದಿಂದ ಆಗ ಸಾಕಷ್ಟು ಜನ ನಮ್ಮೊಂದಿಗೆ ಬರುತ್ತಾರೆ ಎಂದು ಯತ್ನಾಳ್ ಹೊಸ ಬಾಂಬ್ ಸಿಡಿಸಿದರು. ಹೊಸ ಪಕ್ಷ ರೆಡಿ: ರಾಜ್ಯದಲ್ಲಿ ಮತ್ತೆ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಘೋಷಣೆ ಆದ ದಿನವೇ ಹೊಸ ಪಕ್ಷ ರೆಡಿಯಾಗುತ್ತದೆ. ಜೆಸಿಬಿ ಪಾರ್ಟಿ ಎಲ್ಲಾ ರೀತಿಯ ಸಿದ್ಧತೆ ಮಾಡಿದ್ದೇವೆ.
ಜೆಸಿಬಿ ಅರ್ಥ ಜೆ ಎಂದರೆ ಜೆಡಿಎಸ್, ಬಿ ಬಿಜೆಪಿ, ಸಿ ಕಾಂಗ್ರೆಸ್. ಅಲ್ಲಿನ ಅತೃಪ್ತರನ್ನು ಕರೆತಂದು ಟಿಕೆಟ್ ಕೊಟ್ಟು ಗೆಲ್ಲಿಸುತ್ತೇನೆ. ಯಾವ ಕಾರಣಕ್ಕೂ ವಿಜಯೇಂದ್ರ ನಾಯಕತ್ವ ಒಪ್ಪುವುದಿಲ್ಲ. ನಮ್ಮದೇ ಪಕ್ಷ ಬಲಿಷ್ಠ ಆಗುತ್ತದೆ. ದೆಹಲಿಯಲ್ಲಿ ಆಪ್ ಮಾದರಿಯಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ ಎನ್ನುವ ಮೂಲಕ ಯತ್ನಾಳ್ ಬಿಜೆಪಿ ನಾಯಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದರು.








