ಕಾಂತಾರದಲ್ಲಿ ಶಿವಮೊಗ್ಗದ ಆಯುಷ್: 16 ದಿನ ಶೂಟಿಂಗ್​ನಲ್ಲಿ ಭಾಗಿ; ಸಿದ್ಧತೆ ಹೇಗಿತ್ತು?

ಕಾಂತಾರದಲ್ಲಿ ಶಿವಮೊಗ್ಗದ ಆಯುಷ್: 16 ದಿನ ಶೂಟಿಂಗ್​ನಲ್ಲಿ ಭಾಗಿ; ಸಿದ್ಧತೆ ಹೇಗಿತ್ತು?
By Published : October 29, 2025 at 12:25 PM IST

ವರದಿ:ಕಿರಣ್ ಕುಮಾರ್. ಎಸ್. ಈ. ಶಿವಮೊಗ್ಗ:ಪ್ರಪಂಚದಾದ್ಯಂತ ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ ಸಾರಥ್ಯದ 'ಕಾಂತಾರ ಚಾಪ್ಟರ್ 1' ಭರ್ಜರಿ ಪ್ರದರ್ಶನ ಕಾಣುವುದರ ಜೊತೆಗೆ ಬಾಕ್ಸ್​​ ಆಫೀಸ್​ನಲ್ಲೂ ಕಮಾಲ್​ ಮಾಡಿದೆ. ಅಭೂತಪೂರ್ವ ಯಶಸ್ಸು ಕಂಡಿರುವ ಕನ್ನಡ ಚಿತ್ರದಲ್ಲಿ ಶಿವಮೊಗ್ಗದ ಬಾಲಕನೋರ್ವ ಬಣ್ಣ ಹಚ್ಚಿದ್ದಾನೆ.

ಹೌದು, ಶಿವಮೊಗ್ಗದ ನವಲೆಯ ನಿವಾಸಿ ಆಯುಷ್ ಕಾಂತಾರ ಚಾಪ್ಟರ್ 1ರಲ್ಲಿ ಕಾಣಿಸಿಕೊಂಡಿದ್ದಾನೆ. ರಾಘವೇಂದ್ರ ರಂಗದೋಳ್ ಹಾಗೂ ಅಕ್ಷತಾ ದಂಪತಿ ಪುತ್ರ ಆಯುಷ್ ಇಲ್ಲಿನ ಅರಣೋದಯ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದು, ಸದ್ಯ ಕಾಂತಾರ ಸಲುವಾಗಿ ಸಖತ್​ ಸದ್ದು ಮಾಡುತ್ತಿದ್ದಾನೆ. 16 ದಿನ ಶೂಟಿಂಗ್​​ನಲ್ಲಿ ಭಾಗಿ:ಆಯುಷ್ ತೀರ್ಥಹಳ್ಳಿಯಲ್ಲಿ ನಡೆದ ಚಿತ್ರದ ಆಡಿಷನ್​​​ನಲ್ಲಿ ಭಾಗಿಯಾಗಿದ್ದ. ಇಲ್ಲಿ ಪಾಸ್ ಆಗಿ, ನಂತರ ಶೂಟಿಂಗ್​ ಸೆಟ್​ಗೆ ಎಂಟ್ರಿ ಕೊಟ್ಟ. ಸುಮಾರು 16 ದಿನ ಶೂಟಿಂಗ್​​ನಲ್ಲಿ ಭಾಗಿಯಾಗಿದ್ದ.

ಕುಂದಾಪುರದ ಕಮಲಶಿಲೆಯಲ್ಲಿ ಚಿತ್ರೀಕರಣ:ಚಿತ್ರದ ಶೂಟಿಂಗ್ ಕುಂದಾಪುರದ ಕಮಲಶಿಲೆ ಎಂಬಲ್ಲಿ ನಡೆದಿದೆ. ಆಯುಷ್​ಗೆ ತಿಂಗಳಲ್ಲಿ 4 ದಿನದಂತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ. ಶೂಟಿಂಗ್ ಇದ್ದಾಗ ಪೋಷಕರು ಶಿವಮೊಗ್ಗದಿಂದ ಕುಂದಾಪುರಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ದೊಡ್ಡ ಸೆಟ್​ನಲ್ಲಿ ನೂರಾರು ಕಲಾವಿದರ ಜೊತೆ ಆಯುಷ್ ಸಹ ಭಾಗಿಯಾಗಿದ್ದ. ಸಾಮಂತ ರಾಜನ ಪುತ್ರನ ಪಾತ್ರದಲ್ಲಿ ನಟನೆ:ಆಯುಷ್ ಸಾಮಂತ ರಾಜನ ಪುತ್ರನ ಪಾತ್ರದಲ್ಲಿ ನಟಿಸಿದ್ದಾನೆ.

ಕಾಂತಾರ ಚಾಪ್ಟರ್ 1 ಆಯುಷ್ ನಟಿಸಿದ ಚೊಚ್ಚಲ ಚಿತ್ರ. ಈ ಚಿತ್ರ ಪ್ರಪಂಚದ್ಯಾಂತ ಯಶಸ್ವಿ ಪ್ರದರ್ಶನ ಕಂಡಿದೆ. ಆಯುಷ್ ಹೇಳಿದ್ದೇನು? ಚಿತ್ರದಲ್ಲಿ‌ ನಟಿಸಿರುವ ಕುರಿತು ಮಾತನಾಡಿದ ಬಾಲನಟ ಆಯುಷ್, ''ಚಿತ್ರದ ಶೂಟಿಂಗ್ ಕುಂದಾಪುರದಲ್ಲಿ ನಡೆಯುತ್ತಿತ್ತು. ನನ್ನನ್ನು ಇಲ್ಲಿಂದ ಅಪ್ಪ ಅಮ್ಮ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ಹಗಲು ರಾತ್ರಿ ಶೂಟಿಂಗ್ ಇರುತ್ತಿತ್ತು.

ಚಿತ್ರೀಕರಣ ಸಂದರ್ಭ ರಿಷಬ್​​ ಶೆಟ್ಟಿ ಸರ್, ಪ್ರಗತಿ ಮೇಡಂ ಸೇರಿದಂತೆ ಹಲವರು ಸಿಗುತ್ತಿದ್ದರು. ‌ ಶೂಟಿಂಗ್ ಬಹಳ ಚೆನ್ನಾಗಿತ್ತು. ನನಗೆ ಖುಷಿಯಾಗಿದೆ'' ಎಂದು ಹರ್ಷ ಹಂಚಿಕೊಂಡ. ಚಿತ್ರತಂಡಕ್ಕೆ ಧನ್ಯವಾದ ಅರ್ಪಿಸಿದ ಆಯುಷ್​ ತಂದೆ: ಆಯುಷ್ ತಂದೆ ರಾಘವೇಂದ್ರ ರಂಗದೋಳ್ ಮಾತನಾಡಿ, ಕಾಂತಾರ ಚಿತ್ರದ ಆಡಿಷನ್ ನಡೆದಾಗ ನನ್ನ ಮಗನನ್ನು ಆಯ್ಕೆ ಮಾಡಿದ್ದು ಹಬೀಬ್ ಎನ್ನುವವರು. ನನ್ನ ಮಗನಿಗೆ ಅವಕಾಶ ನೀಡಿದ ರಿಷಬ್ ಶೆಟ್ಟಿ ಮತ್ತು ಅವರ ಮಡದಿ ಪ್ರಗತಿ ಅವರಿಗೆ ಧನ್ಯವಾದಗಳು.

ಆಯ್ಕೆ ಆದ ಮೇಲೆ ನಾವು ಕುಂದಾಪುರಕ್ಕೆ ಹೋಗಿದ್ದೆವು. ನಂತರ ಅವರು ಒಂದು ವಾಟ್ಸ್​ಆ್ಯಪ್​ ಗ್ರೂಪ್​ ಮಾಡಿದ್ರು‌. ಜೊತೆಗೆ ಹೇರ್​ ಕಟಿಂಗ್ ಮಾಡಿಸುವುದು ಬೇಡ ಎಂದು ತಿಳಿಸಿದ್ರು. ನಂತರ ಕಾಸ್ಟ್ಯೂಮ್​ ವಿಭಾಗದವರು ಕರೆ ಮಾಡಿ ಅಳತೆ ಪಡೆದು‌ಕೊಂಡರು. ನಮಗೆ ತಿಂಗಳಲ್ಲಿ 4-5 ದಿನ ಮಾತ್ರ ಶೂಟಿಂಗ್ ಇರುತ್ತಿತ್ತು.

‌ ಅವರು ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಶೂಟಿಂಗ್ ಡೇಟ್ ಹಾಕುತ್ತಿದ್ದರು. ಆಗ ನಾವು ಸೆಟ್​ಗೆ ಹೋಗುತ್ತಿದ್ದೆವು. ಚಿತ್ರಕ್ಕೆ ರಿಷಬ್ ಶೆಟ್ಟಿ ಅವರು ಸಾಕಷ್ಟು ಕಷ್ಟಪಟಿದ್ದಾರೆ. ಅವರ ಪರಿಶ್ರಮಕ್ಕೆ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ನನ್ನ ಮಗನಿಗೆ ಅವಕಾಶ ನೀಡಿದ್ದಕ್ಕೆ ಚಿತ್ರತಂಡಕ್ಕೆ ಧನ್ಯವಾದಗಳು ಎಂದು ತಿಳಿಸಿದರು.

ಹೊಂಬಾಳೆ ಫಿಲ್ಮ್ಸ್​ ನಿರ್ಮಾಣದ ಕಾಂತಾರ ಚಾಪ್ಟರ್ 1ರಲ್ಲಿ ರಿಷಬ್​ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್​, ಗುಲ್ಶನ್​ ದೇವಯ್ಯ ಮತ್ತು ಜಯರಾಮ್​​ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರ ವಿಶ್ವಾದ್ಯಂತ 800 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿದೆ. ಇದೇ ಅಕ್ಟೋಬರ್ 31ರಂದು ಒಟಿಟಿ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ.

📚 Related News