ಬೆಂಗಳೂರು:ಮಗಳ ಸಾವಿನ ನೋವಿನಲ್ಲಿದ್ದರೂ ಸಹ ಆಂಬ್ಯುಲೆನ್ಸ್, ಬೆಳ್ಳಂದೂರು ಠಾಣೆಯ ಪೊಲೀಸ್ ಸಿಬ್ಬಂದಿ, ಮರಣ ಪ್ರಮಾಣಪತ್ರ ಪಡೆಯಲು ಪಾಲಿಕೆ ಸಿಬ್ಬಂದಿ ಮತ್ತು ಶವಸಂಸ್ಕಾರದವರೆಗೆ ಪ್ರತೀ ಹಂತದಲ್ಲಿಯೂ ಬೆಂಗಳೂರಿನಲ್ಲಿ ಲಂಚ ನೀಡಬೇಕಾಯಿತು ಎಂದು ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್‌ನ(BPCL) ನಿವೃತ್ತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಎಫ್‌ಒ) ಶಿವಕುಮಾರ್ ಕೆ. ಎಂಬವರು ಸಾಮಾಜಿಕ ಜಾಲತಾಣ ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡಿ ವಿವರಿಸಿದ್ದಾರೆ. ಮನ ಮಿಡಿಯುವಂತಿರುವ ಈ ಪೋಸ್ಟ್ ಲಂಚಬಾಕತನದ ಕುರಿತು ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ಸಿಎಫ್‌ಒ ಶಿವಕುಮಾರ್ ಅವರ ಪೋಸ್ಟ್ ಹೀಗಿದೆ:34 ವರ್ಷದ ತಮ್ಮ ಏಕೈಕ ಪುತ್ರಿ ಅಕ್ಷಯಾ ಬ್ರ್ರೈನ್ ಹ್ಯಾಮರೇಜ್ ಕಾರಣದಿಂದ ಇತ್ತೀಚಿಗೆ ಮೃತಪಟ್ಟಿದ್ದಳು. ಆ ಸಂದರ್ಭದಲ್ಲಿ ಶವ ಸಾಗಿಸಲು ಆಂಬ್ಯುಲೆನ್ಸ್ ವಾಹನಕ್ಕೆ ಲಂಚ ನೀಡಬೇಕಾಯಿತು.
ಮಗಳ ಶವದ ಮರಣೋತ್ತರ ಪರೀಕ್ಷೆ ನಡೆಸಿ ವರದಿ ನೀಡಲು ಕೂಡಾ ಲಂಚ ಕೇಳಿದರು. ಎಫ್‌ಐಆರ್ ದಾಖಲಿಸಿಕೊಳ್ಳಲು ಬೆಳ್ಳಂದೂರು ಠಾಣೆಯ ಪೊಲೀಸರು ಲಂಚ ಕೇಳಿದರು. ಬೆಳ್ಳಂದೂರು ಠಾಣೆಯ ಇನ್ಸ್‌ಪೆಕ್ಟರ್ ಅಹಂಕಾರದಿಂದ ವರ್ತಿಸಿದರು. ಶವ ಸಂಸ್ಕಾರ ಮಾಡಲು ಚಿತಾಗಾರಕ್ಕೆ ಹೋದಾಗ ಅಲ್ಲಿಯೂ ಲಂಚ ನೀಡಬೇಕಾಯಿತು. ಮಗಳ ಡೆತ್ ಸರ್ಟಿಫಿಕೇಟ್ ಪಡೆಯಲು ಕೂಡಾ ಪಾಲಿಕೆಯ ಅಧಿಕಾರಿಗಳಿಗೂ ಲಂಚ ಕೊಡಬೇಕಾಯಿತು.
ಮಗಳನ್ನು ಕಳೆದುಕೊಂಡ ತಂದೆಯ ಬಗ್ಗೆ ಯಾರೊಬ್ಬರಿಗೂ ಸಹಾನುಭೂತಿ ಇರಲಿಲ್ಲ. ನನ್ನ ಬಳಿ ಕೊಡಲು ಹಣವಿತ್ತು. ಆದರೆ ಬಡವರು ಏನು ಮಾಡುತ್ತಾರೆ? ಎಂದು ಶಿವಕುಮಾರ್ ಬರೆದಿದ್ದಾರೆ. ಬೆಳ್ಳಂದೂರು ಠಾಣೆಯ PSI, ಕಾನ್ಸ್‌ಟೇಬಲ್ ಅಮಾನತು:ಶಿವಕುಮಾರ್ ಅವರ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬೆಳ್ಳಂದೂರು ಠಾಣೆಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (ಪಿಎಸ್ಐ) ಸಂತೋಷ್, ಕಾನ್ಸ್‌ಟೇಬಲ್ ಗೋರಕ್‌ನಾಥ್ ಅವರನ್ನು ಅಮಾನತುಗೊಳಿಸಿ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಕೆ. ಪರಶುರಾಮ ಆದೇಶಿಸಿದ್ದಾರೆ.
ಶಿವಕುಮಾರ್ ಅವರ ಪೋಸ್ಟ್‌ನ ಸ್ಕ್ರೀನ್‌ಶಾಟ್ ಅನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, "ಇದು ಲಂಚ ಮಾತ್ರವಲ್ಲ, ಕ್ರೂರತೆ. ಇದರ ಭಾಗವಾಗಿರುವ ಪ್ರತೀ ಅಧಿಕಾರಿಗಳಿಗೂ ಶಿಕ್ಷೆಯಾಗಬೇಕು" ಎಂದು ಒತ್ತಾಯಿಸಿದ್ದಾರೆ. ಲಂಚಾವತರದ ಇತ್ತೀಚಿನ ನಿದರ್ಶನಗಳು: ಆರ್ಟಿಸಿ ದುರಸ್ತಿ ಮಾಡಿಕೊಡಲು 12 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಶಿರಸ್ತೇದಾರ ಸೇರಿ ಮೂವರು ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಇತ್ತೀಚಿಗೆ ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿತ್ತು. ಶಿರಸ್ತೇದಾರ ತಮ್ಮಣ್ಣ ಕಾಂಬಳೆ, ದ್ವಿತೀಯ ದರ್ಜೆ ಸಹಾಯಕರುಗಳಾದ ಗೂಳಪ್ಪ ಮನಗೂಳಿ ಹಾಗೂ ಶಿವಾನಂದ ಬಡಿಗೇರ ಎಂಬವರನ್ನು ಬಂಧಿಸಲಾಗಿತ್ತು. ಬೊಮ್ಮನಹಳ್ಳಿ ಗ್ರಾಮದ ಶಂಕ್ರಪ್ಪ ಗುಮಗುಂಡಿ ಎಂಬವರ ಆರ್ಟಿಸಿ ದುರಸ್ತಿ ಮಾಡಿಕೊಡಲು ಈ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದರು.








