ಬೆಳಗಾವಿ: ಕನೇರಿಯ ಕಾಡಸಿದ್ದೇಶ್ವರ ಮಠದ ಅದೃಶಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ನಿರ್ಬಂಧ ವಿಧಿಸಿದ್ದನ್ನು ಖಂಡಿಸಿ ಇಂದು ಬೆಳಗಾವಿ ಹೊರ ವಲಯದ ಖಾಸಗಿ ಹೋಟೆಲ್ ನಲ್ಲಿ ಹಿಂದೂ ಮುಖಂಡರು ಮಹತ್ವದ ಸಭೆ ನಡೆಸಿದರು. ರಾಜ್ಯಾಧ್ಯಂತ ಕನೇರಿ ಸ್ವಾಮೀಜಿಗಳ ಪರ ಹೋರಾಟಕ್ಕೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೇ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಅದನ್ನೇ ದೊಡ್ಡ ಅಸ್ತ್ರವನ್ನಾಗಿ ಬಳಸಲು ಮುಂದಾಗಿರುವುದು ಈ ಸಭೆಯಿಂದ ಸ್ಪಷ್ಟವಾಗಿದೆ. ಸಭೆಯಲ್ಲಿ ಕನೇರಿ ಸ್ವಾಮೀಜಿ ಕೂಡ ಉಪಸ್ಥಿತರಿದ್ದರು. ಸಭೆಯಲ್ಲಿ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್, ಮಾಜಿ ಸಚಿವ ಕೆ.
ಎಸ್. ಈಶ್ವರಪ್ಪ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಸಿ. ಸಿ. ಪಾಟೀಲ, ಶಶಿಕಲಾ ಜೊಲ್ಲೆ, ಅರವಿಂದ ಬೆಲ್ಲದ, ಅಭಯ ಪಾಟೀಲ, ಸಿ. ಟಿ.
ರವಿ, ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಭಗವಂತ ಖೂಬಾ, ಪ್ರತಾಪ್ ಸಿಂಹ ಸೇರಿ ಮತ್ತಿತರರು ಪಾಲ್ಗೊಂಡಿದ್ದರು. ಸಭೆ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ವಕ್ತಾರ ಎಂ. ಬಿ. ಜೀರಲಿ, ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗೆ ವಿಜಯಪುರ, ಬಾಗಲಕೋಟೆ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ. ಈ ಕುರಿತಂತೆ ಎಲ್ಲಾ ಹಿಂದೂ ನಾಯಕರು ಸೇರಿ ಚರ್ಚೆ ಮಾಡಿದ್ದೇವೆ.
ಕನೇರಿ ಮಠದ ಶ್ರೀಗಳ ಸನ್ನಿಧಿಯಲ್ಲಿ ಸಭೆ ನಡೆದಿದೆ. ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ಖಂಡಿಸುತ್ತೇವೆ. ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇವೆ. ನಿರ್ಬಂಧ ಆದೇಶ ವಾಪಸ್ ಪಡೆಯದೇ ಇದ್ದರೆ ಬೀದಿಗೆ ಇಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ರವಾನಿಸಿದರು. ಕನೇರಿ ಶ್ರೀಗಳು ಹಿಂದೂ ಸಮಾಜದ ಸಂಸ್ಕೃತಿಯನ್ನು ಪ್ರೀತಿಸುವವರು.
ರೈತರಾಗಿ ಅನೇಕ ಯೋಜನೆ ಜಾರಿಗೆ ತಂದಿದ್ದಾರೆ. ಗೋ ರಕ್ಷಣೆ, ಸಾವಯವ ಕೃಷಿ ಮಾಡಿದ್ದಾರೆ. ಕನೇರಿ ಶ್ರೀಗಳು ನಮಗೆಲ್ಲರಿಗೂ ಆದರ್ಶ. ಇಡೀ ರಾಷ್ಟ್ರದ ಸಮಸ್ತ ಹಿಂದೂಗಳನ್ನು ಮುನ್ನೆಡೆಸುವ ಶಕ್ತಿ ಶ್ರೀಗಳಿಗೆ ಇದೆ. ವೀರಶೈವ ಲಿಂಗಾಯತ ಸಮಾಜಕ್ಕೆ ಶ್ರೀಗಳು ಬೆನ್ನೆಲುಬು.
ಸರ್ಕಾರ ದೊಡ್ಡ ತಪ್ಪು ಹೆಜ್ಜೆಯನ್ನು ಇಟ್ಟಿದೆ. ಜಾತಿ ಗಣತಿಯ ಮೂಲಕ ಹಿಂದೂ ಸಮಾಜವನ್ನು ಒಡೆಯುವ ಯತ್ನ ಮಾಡಿದೆ. ಪ್ರತಿಯೊಂದು ತಾಲೂಕಿನಲ್ಲಿ ಹೋರಾಟ ಸಭೆ ಮಾಡುತ್ತೇವೆ. ಕನೇರಿ ಶ್ರೀಗಳ ಹಿಂದೆ ಇಡೀ ಹಿಂದೂ ಸಮಾಜ ಇದೆ. ಪ್ರತಿ ತಾಲೂಕಿನಲ್ಲಿ 5 ಸಾವಿರ ಸಹಿ ಸಂಗ್ರಹ ಮಾಡುತ್ತೇವೆ.
ಬಬಲೇಶ್ವರ ಕ್ಷೇತ್ರದಿಂದ ನಮ್ಮ ಹೋರಾಟ ಆರಂಭವಾಗಲಿದೆ ಎಂದು ಎಂ. ಬಿ. ಜೀರಲಿ ಹೇಳಿದರು. ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಹಿಂದೂ ಸಮಾಜವನ್ನು ಟಾರ್ಗೆಟ್ ಮಾಡಿದ್ದಾರೆ. ಕನೇರಿ ಶ್ರೀಗಳಿಗೆ ಹಲವು ಕಡೆ ನಿರ್ಬಂಧ ಹೇರುವ ಪ್ರಯತ್ನ ನಡೆದಿದೆ.
ಇಡೀ ಹಿಂದೂ ಸಮಾಜ ಇದಕ್ಕೆ ಧಿಕ್ಕಾರ ಹೇಳುತ್ತದೆ. ಸ್ವಾಮೀಜಿಯವರಿಗೆ ವಾಕ್ ಸ್ವಾತಂತ್ರ್ಯ, ಪ್ರಯಾಣ ಸ್ವಾತಂತ್ರ್ಯಕ್ಕೆ ನಿರ್ಬಂಧ ವಿಧಿಸಿದ್ದಾರೆ. ಮೊದಲು ಸಹಿ ಸಂಗ್ರಹಿಸುತ್ತೇವೆ. ಆಮೇಲೆ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇವೆ. ಬಸವತತ್ವವನ್ನು ತಮ್ಮ ಜೀವನದಲ್ಲಿ ಕನೇರಿ ಶ್ರೀಗಳು ಅಳವಡಿಸಿಕೊಂಡಿದ್ದಾರೆ ಎಂದರು.
ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶ ಮಾಡುತ್ತೇವೆ. ಮೊದಲ ಸಮಾವೇಶವನ್ನು ಬಬಲೇಶ್ವರರಿಂದಲೇ ಆರಂಭ ಮಾಡುತ್ತೇವೆ. ಎಲ್ಲಿಂದ ಆರಂಭವಾಯಿತೋ ಅಲ್ಲಿಂದಲೇ ಹೋರಾಟ ಆರಂಭಿಸುತ್ತೇವೆ ಎನ್ನುವ ಮೂಲಕ ಪರೋಕ್ಷವಾಗಿ ಎಂ. ಬಿ. ಪಾಟೀಲ್ ಅವರಿಗೆ ಚಕ್ರವರ್ತಿ ಸೂಲಿಬೆಲೆ ತಿರುಗೇಟು ಕೊಟ್ಟರು.






