ರಾಷ್ಟ್ರಗೀತೆ ಕಡೆಗಣನೆ, ದಸರಾ ರಜೆ ಮೊಟಕು; ಖಾಸಗಿ ಶಾಲೆಯ ಕ್ರಮ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ವಿದ್ಯಾರ್ಥಿಗಳು

ರಾಷ್ಟ್ರಗೀತೆ ಕಡೆಗಣನೆ, ದಸರಾ ರಜೆ ಮೊಟಕು; ಖಾಸಗಿ ಶಾಲೆಯ ಕ್ರಮ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ವಿದ್ಯಾರ್ಥಿಗಳು
By Published : October 30, 2025 at 8:01 AM IST | Updated : October 30, 2025 at 8:47 AM IST

ಬೆಂಗಳೂರು : ರಾಷ್ಟ್ರಗೀತೆ ಕಡೆಗಣನೆ, ದಸರಾ ರಜೆ ಮೊಟಕು ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಖಾಸಗಿ ಶಾಲೆಯೊಂದರಲ್ಲಿ ಹಲವು ಅಹಿತಕರ ಮತ್ತು ಅನುಚಿತ ಸಂಗತಿಗಳು ನಡೆದಿವೆ ಎಂದು ಆರೋಪಿಸಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಶಾಲೆಯಲ್ಲಿ 10 ಮತ್ತು 12ನೇ ತರಗತಿಯಲ್ಲಿ ಕಲಿಯುತ್ತಿರುವ ಇಬ್ಬರು ವಿದ್ಯಾರ್ಥಿಗಳ ಪರವಾಗಿ ಸಹಕಾರ ನಗರ ನಿವಾಸಿಯಾದ ಅವರ ತಂದೆ ಅನಿಲ್ ಪಿ. ಮೆಣಸಿನಕಾಯಿ ಎಂಬುವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠದ ಮುಂದೆ ಬಂದಿದ್ದು, ಶಾಲೆಗೆ ನೋಟಿಸ್‌ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿತು. ಅಲ್ಲದೆ, ಸರ್ಕಾರ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿಶ್ವನಾಥಪುರ ಠಾಣೆಯ ಪೋಲಿಸರು ಹಾಗೂ ಶಾಲೆಯ ನಿರ್ದೇಶಕ ಮತ್ತು ಇತರರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ನವೆಂಬರ್ 26ಕ್ಕೆ ಮುಂದೂಡಿತು.

ಅರ್ಜಿಯಲ್ಲಿರುವ ವಿಷಯ ಹಾಗೂ ವಕೀಲರ ವಾದ ಕೇಳಿದ ನ್ಯಾಯಪೀಠ, ತಂದೆ ತಮ್ಮ ಮಕ್ಕಳ ವಿಚಾರದಲ್ಲಿ ಕೆಟ್ಟ ಸಂಪ್ರದಾಯ ಹಾಕಿಕೊಡುತ್ತಿದ್ದಾರೆ. ಇದು ಅಹಂನ ವಿಚಾರವಾಗಿದ್ದು, ತನ್ನ ಮಕ್ಕಳಿಗಿಂತ ಅಹಂ ಹೆಚ್ಚಾದಂತೆ ಕಾಣುತ್ತಿದೆ. ಇಂಟರ್ ನ್ಯಾಷನಲ್ ಸ್ಕೂಲ್ ಇದೆ. ಇವತ್ತು ರಾಷ್ಟ್ರಗೀತೆ ವಿವಾದ, ನಾಳೆ ಮತ್ತೊಂದು ವಿಚಾರ ಹೇಳಬಹುದು. ತಮ್ಮ ಇಚ್ಚೆಯಂತೆ ಶಾಲೆ ನಡೆಯಬೇಕೆಂದರೆ ಹೇಗೆ? ಸರಿ ಆಗಲ್ಲ ಎಂದರೆ ಬೇರೆ ಶಾಲೆಗೆ ಹೋಗಲಿ.

ಪೋಷಕರಿಗೆ ಇದೆಲ್ಲ ಗೊತ್ತಿದ್ದೂ ಈ ರೀತಿ ಮಾಡುತ್ತಿದ್ದಾರೆ. ನಿಮ್ಮ ಕಕ್ಷಿದಾರರಿಗೆ (ಅರ್ಜಿದಾರರಿಗೆ) ಸೂಕ್ತ ಸಲಹೆ ನೀಡುವಂತೆ ಸೂಚನೆ ನೀಡಿತು. ಇದಕ್ಕೆ ವಕೀಲರು, ವಿಷಯವೂ ಸಹ ಗಂಭೀರವಾಗಿದೆ. ವಿದ್ಯಾರ್ಥಿಗಳು ಆಕ್ಷೇಪ ಎತ್ತಿದ ಮೇಲೆ ರಾಷ್ಟ್ರಗೀತೆ ಕಡ್ಡಾಯಗೊಳಿಸಲಾಗಿದೆ. ದಸರಾ ರಜೆ ದಿನಗಳನ್ನು ಹೆಚ್ಚಿಸಲಾಯಿತು.

ಇದಲ್ಲದೆ ಇನ್ನೂ ಹಲವು ಅನುಚಿತ ಮತ್ತು ಅಹಿತಕರ ಸಂಗತಿಗಳು ನಡೆದಿವೆ. ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ಬಗ್ಗೆ ಸ್ಥಳೀಯ ಪೊಲೀಸರು ಹಾಗೂ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ಕೊಟ್ಟರೆ, ಆಡಳಿತ ಮಂಡಳಿ ಮಕ್ಕಳನ್ನು ಹೆದರಿಸಿದೆ, ಶಾಲೆಯಿಂದ ಹೊರಹಾಕುವುದಾಗಿ ಬೆದರಿಕೆ ಹಾಕಿದೆ. ಅರ್ಜಿಯಲ್ಲಿ ಹೇಳಲಾಗಿರುವ ವಿಷಯಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು. ಮಕ್ಕಳಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಸ್ಥಳೀಯ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.

📚 Related News