ಲಡಾಖ್​ ಗಡಿಯಲ್ಲಿ ಶಾಂತಿ ಸ್ಥಾಪನೆ ಕುರಿತು ಭಾರತ - ಚೀನಾ 23ನೇ ಸುತ್ತಿನ ಮಾತುಕತೆ

ಲಡಾಖ್​ ಗಡಿಯಲ್ಲಿ ಶಾಂತಿ ಸ್ಥಾಪನೆ ಕುರಿತು ಭಾರತ - ಚೀನಾ 23ನೇ ಸುತ್ತಿನ ಮಾತುಕತೆ
By Published : October 29, 2025 at 1:27 PM IST

ನವದೆಹಲಿ:ಪೂರ್ವ ಲಡಾಖ್‌ನಲ್ಲಿನ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಉದ್ದಕ್ಕೂ ಶಾಂತಿ ಮತ್ತು ಭದ್ರತೆ ಕಾಪಾಡಿಕೊಳ್ಳುವತ್ತ ಗಮನಹರಿಸುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾದ ಉನ್ನತ ಮಟ್ಟದ ಸೇನಾಧಿಕಾರಿಗಳು ಮಾತುಕತೆ ನಡೆಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಬುಧವಾರ ತಿಳಿಸಿದೆ. "ಭಾರತ - ಚೀನಾ ಕಾರ್ಪ್ಸ್ ಕಮಾಂಡರ್​​ಗಳು ಅಕ್ಟೋಬರ್ 25 ರಂದು ಚುಶುಲ್ - ಮೋಲ್ಡೊ ಗಡಿಯಲ್ಲಿ 23ನೇ ಸುತ್ತಿನ ಮಾತುಕತೆ ನಡೆಸಿದರು. ಆಗಸ್ಟ್ 19 ರಂದು ನಡೆದ ವಿಶೇಷ ಪ್ರತಿನಿಧಿಗಳ ಮಾತುಕತೆಯ ನಂತರದ ಬೈಠಕ್​​ ಇದಾಗಿದೆ ಎಂದು ಹೇಳಿದೆ. "ಮಾತುಕತೆಗಳು ಸ್ನೇಹಪರ ಮತ್ತು ಸೌಹಾರ್ದಯುತವಾಗಿ ನಡೆದವು. 2024ರ ಅಕ್ಟೋಬರ್​ನಲ್ಲಿ ನಡೆದ 22ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಸಭೆಯ ನಂತರದ ಪ್ರಗತಿಯನ್ನು ಎರಡೂ ಕಡೆಯವರು ಗಮನಿಸಿದರು.

ಭಾರತ - ಚೀನಾ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಯ್ದುಕೊಳ್ಳಲಾಗಿದೆ ಎಂಬ ಅಭಿಪ್ರಾಯವನ್ನು ಹಂಚಿಕೊಂಡರು. ಸ್ಥಿರತೆ ಕಾಪಾಡಿಕೊಳ್ಳಲು ಗಡಿಯಲ್ಲಿ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಈಗಿರುವ ಕಾರ್ಯವಿಧಾನಗಳನ್ನು ಬಳಸುವುದನ್ನು ಮುಂದುವರಿಸಲು ಎರಡೂ ಕಡೆಯವರು ಒಪ್ಪಿಕೊಂಡರು" ಎಂದು ಎಂಇಎ ತಿಳಿಸಿದೆ. ಚೀನಾದಿಂದಲೂ ಹೇಳಿಕೆ ಬಿಡುಗಡೆ:ಚೀನಾ - ಭಾರತ ಗಡಿಯ ಪಶ್ಚಿಮ ವಿಭಾಗದ ನಿರ್ವಹಣೆ ಕುರಿತು ಎರಡೂ ಕಡೆಯವರು ಸಕ್ರಿಯ ಮತ್ತು ಆಳವಾದ ಸಂವಹನದಲ್ಲಿ ತೊಡಗಿದ್ದಾರೆ ಎಂದು ಚೀನಾ ರಕ್ಷಣಾ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ನಿರ್ಧರಿಸಿದಂತೆ ಸಂವಹನ ಮತ್ತು ಸಂವಾದವನ್ನು ಕಾಪಾಡಿಕೊಳ್ಳಲು ಎರಡೂ ಕಡೆಯವರು ನಿರ್ಧರಿಸಿದ್ದಾರೆ ಎಂದು ಹೇಳಿದೆ. "ಎರಡೂ ದೇಶಗಳ ನಾಯಕರ ನಡುವಿನ ಒಮ್ಮತದಂತೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಗಡಿ ಸಮಸ್ಯೆ ಇರ್ತರ್ಥಕ್ಕೆ ಸಂವಹನ ಮತ್ತು ಸಂವಾದವನ್ನು ಮುಂದುವರಿಸಲಾಗುವುದು.

ಉಭಯ ರಾಷ್ಟ್ರಗಳ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡಲಾಗುವುದು" ಎಂದು ಹೇಳಿಕೆಯಲ್ಲಿ ತಿಳಿಸಿದೆ. 5 ವರ್ಷಗಳ ಬಳಿಕ ವಿಮಾನ ಸೇವೆ ಆರಂಭ: ಏಷ್ಯಾದ ಎರಡು ದೈತ್ಯ ರಾಷ್ಟ್ರಗಳಾದ ಚೀನಾ - ಭಾರತದ ನಡುವೆ ನಿಂತಿದ್ದ ನೇರ ವಿಮಾನ ಸಂಪರ್ಕ ಸೇವೆ ಅಕ್ಟೋಬರ್​ 27 ರಿಂದ ಆರಂಭವಾಯಿತು. 2020 ರಲ್ಲಿ ನಡೆದ ಗಲ್ವಾನ್​ ಕಣಿವೆ ಸಂಘರ್ಷದ ಬಳಿಕ ಉಭಯ ರಾಷ್ಟ್ರಗಳ ನಡುವೆ ಸಂಪರ್ಕ ಕಡಿತಗೊಂಡಿತ್ತು. ಕೋಲ್ಕತ್ತಾದಿಂದ ಗುವಾಂಗ್​​ ಝೌಗೆ ಮೊದಲ ಪ್ರಯಾಣಿಕ ವಿಮಾನ ಸಂಚಾರ ಆರಂಭವಾಗಿದೆ.

📚 Related News