ಹೈದರಾಬಾದ್:ಒಂದು ಕಾಲದಲ್ಲಿ ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದ ಮೊಹಮ್ಮದ್ ಅಜರುದ್ದೀನ್ ಇದೀಗ ರಾಜಕೀಯ ಕ್ಷೇತ್ರದಲ್ಲಿ ಹೊಸ ಇನ್ನಿಂಗ್ಸ್ ಪ್ರಾರಂಭಿಸಲು ಸಜ್ಜಾಗಿದ್ದಾರೆ. ಹೌದು, ಟೀಮ್ ಇಂಡಿಯಾದ ಮಾಜಿ ನಾಯಕ ಮತ್ತು ತೆಲಂಗಾಣ ಎಂಎಲ್ಸಿ ಅಜರುದ್ದೀನ್ ಅವರಿಗೆ ರಾಜ್ಯಪಾಲರ ಕೋಟಾದಡಿ ಸಚಿವ ಸ್ಥಾನ ನೀಡಲಾಗಿದೆ. ಕಳೆದ ಕೆಲವು ದಿನಗಳಿಂದ ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ, ಸಚಿವ ಸಂಪುಟ ವಿಸ್ತರಣೆ ಮಾಡುವ ಕುರಿತು ಭಾರೀ ಚರ್ಚೆ ನಡೆಸಿತ್ತು. ಸಂಪುಟದಲ್ಲಿ 15 ಖಾತೆಗಳು ಭರ್ತಿಯಾಗಿದ್ದು, ಖಾಲಿ ಇರುವ ಮೂರು ಖಾತೆಗಳನ್ನು ತುಂಬಲು ಮುಂದಾಗಿತ್ತು. ಅಜರುದ್ದೀನ್ ಶುಕ್ರವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಜುಬಿಲಿ ಹಿಲ್ಸ್ ವಿಧಾನಸಭಾ ಸ್ಥಾನದಿಂದ ಸ್ಪರ್ಧಿಸಿದ್ದ ಅಜರುದ್ದೀನ್ ಸೋಲು ಅನುಭವಿಸಿದ್ದರು. ತೆಲಂಗಾಣದ ಇತ್ತೀಚಿನ ಮಹತ್ವದ ಸುದ್ದಿ: ತೆಲಂಗಾಣ ವಿಧಾನಸಭೆ ಕೆಲ ತಿಂಗಳ ಹಿಂದೆ ಪುರಸಭೆ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ಮಸೂದೆಗಳನ್ನು ಸರ್ವಾನುಮತದಿಂದ ಅಂಗೀಕರಿಸಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ (ಬಿಸಿ) ಶೇ. 42ರಷ್ಟು ಮೀಸಲಾತಿ ಜಾರಿಗೆ ತರಲು ದಾರಿ ಮಾಡಿಕೊಟ್ಟಿದೆ. ಮಸೂದೆಯ ಕುರಿತು ಮಾತನಾಡಿದ್ದ ಸಿಎಂ ರೇವಂತ್ ರೆಡ್ಡಿ, ಶಿಕ್ಷಣ ಮತ್ತು ಉದ್ಯೋಗಾವಕಾಶಗಳಲ್ಲಿ ಶೇ. 42ರಷ್ಟು ಮೀಸಲಾತಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಶೇ.
42ರಷ್ಟು ಮೀಸಲಾತಿಗಾಗಿ ಎರಡು ಮಸೂದೆಗಳನ್ನು ವಿಧಾನಸಭೆ ಅಂಗೀಕರಿಸಿ ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಅವರು ಅನುಮೋದನೆ ನೀಡದೆ ರಾಷ್ಟ್ರಪತಿಗಳಿಗೆ ಕಳುಹಿಸಿದ್ದಾರೆ. ಮಸೂದೆಗಳು ಸುಮಾರು ಐದು ತಿಂಗಳಿನಿಂದ ರಾಷ್ಟ್ರಪತಿಗಳ ಬಳಿ ಬಾಕಿ ಇವೆ. ಈ ಮಸೂದೆಯು ಬಿಆರ್‌ಎಸ್ ಸರ್ಕಾರ ತಂದಿರುವ 2018 ರ ಶಾಸನವನ್ನು ತಿದ್ದುಪಡಿ ಮಾಡುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದರು. ಇದಕ್ಕೂ ಮೊದಲು ವಿಧಾನಸಭೆ ಸಮಿತಿ ಸಭಾಂಗಣದಲ್ಲಿ ಸಿಎಂ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಮೂರು ಗಂಟೆಗಳ ಸಚಿವ ಸಂಪುಟ ಸಭೆಯಲ್ಲಿ, ಮೀಸಲಾತಿ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವ ಸುಗ್ರೀವಾಜ್ಞೆಯನ್ನು ಬದಲಾಯಿಸಲು ವಿಧಾನಸಭೆಯಲ್ಲಿ ಮಸೂದೆ ಮಂಡಿಸಲು ನಿರ್ಧರಿಸಲಾಗಿತ್ತು.
ಮಸೂದೆಯ ಪರಿಣಾಮಗಳ ಜೊತೆಗೆ ರಾಜ್ಯಪಾಲರು ಎರಡನೇ ಬಾರಿಗೆ ಮಸೂದೆಯನ್ನು ಅನುಮೋದಿಸುತ್ತಾರೆಯೇ ಎಂಬುದರ ಬಗ್ಗೆಯೂ ಚರ್ಚೆ ನಡೆದಿತ್ತು. ಸೆಪ್ಟೆಂಬರ್ 30ರೊಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಬೇಕೆಂದು ತೆಲಂಗಾಣ ಹೈಕೋರ್ಟ್ ನಿರ್ದೇಶಿಸಿರುವುದರಿಂದ, 42% ಮೀಸಲಾತಿಗೆ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ಹೇಳಿದ್ದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿತ್ತು. 2023ರ ವಿಧಾನಸಭಾ ಚುನಾವಣೆಗೆ ಮುನ್ನ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಯನ್ನು 23%ರಿಂದ 42%ಕ್ಕೆ ಹೆಚ್ಚಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು.








