56 ವರ್ಷಗಳ ಬಳಿಕ ಪೊಲೀಸ್ ಸಿಬ್ಬಂದಿಗೆ‌ ಪಿ-ಕ್ಯಾಪ್ ವಿತರಣೆ: ಈ ಕ್ಯಾಪ್ ಆಯ್ಕೆ‌ ಮಾಡಿದ್ದು ನಾನೇ- ಸಿಎಂ

56 ವರ್ಷಗಳ ಬಳಿಕ ಪೊಲೀಸ್ ಸಿಬ್ಬಂದಿಗೆ‌ ಪಿ-ಕ್ಯಾಪ್ ವಿತರಣೆ: ಈ ಕ್ಯಾಪ್ ಆಯ್ಕೆ‌ ಮಾಡಿದ್ದು ನಾನೇ- ಸಿಎಂ
By Published : October 28, 2025 at 2:20 PM IST

ಬೆಂಗಳೂರು:56 ವರ್ಷಗಳ ಬಳಿಕ ಪೊಲೀಸ್ ಸಿಬ್ಬಂದಿಗೆ‌ ಹೊಸದಾಗಿ ನೀಡಲಾಗುತ್ತಿರುವ ಪಿ-ಕ್ಯಾಪ್‌ನಲ್ಲಿ ಬದಲಾವಣೆ ಅಷ್ಟೇ ಅಲ್ಲದೆ ದಕ್ಷತೆ‌ ಮೆರೆಯುವ ಮೂಲಕ ವೃತ್ತಿಯಲ್ಲಿ ಬದಲಾವಣೆಯಾಗಬೇಕು. ಈ ಮೂಲಕ ಸಮಾಜದಲ್ಲಿ‌ ನಡೆಯುವ ಅಪರಾಧಗಳನ್ನು ಕಡಿಮೆ ಮಾಡಬೇಕು ಎಂದು‌ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಇಂದು ಹಮ್ಮಿಕೊಂಡಿದ್ದ ಪೊಲೀಸ್ ಸಿಬ್ಬಂದಿಗೆ ಪಿ-ಕ್ಯಾಪ್ ಪರಿಚಯ ಹಾಗೂ ವಿತರಣೆ ಹಾಗೂ ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಹಲವು ವರ್ಷಗಳಿಂದ ಕಾನ್‌ಸ್ಟೇಬಲ್​ಗಳು ಧರಿಸುತ್ತಿದ್ದ ಸ್ಲೋಚ್ ಕ್ಯಾಪ್ ಬದಲು ಪಿ ಕ್ಯಾಪ್ ಆಯ್ಕೆ ಮಾಡಿದ್ದು ನಾನೇ. 56 ವರ್ಷಗಳಿಂದ ಇದ್ದ ಕ್ಯಾಪನ್ನು ಇಂದು ಬದಲಾವಣೆ ಮಾಡಿದ್ದೇನೆ.

ದಕ್ಷತೆಯಿಂದ ಕೆಲಸ ಮಾಡುವ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರು ತನ್ನಿ. ‌ ಕ್ಯಾಪ್ ಬದಲಾವಣೆಯಷ್ಟೇ ಅಲ್ಲದೆ, ವೃತ್ತಿಯಲ್ಲಿಯೂ ದಕ್ಷತೆಯಿಂದ ಕಾರ್ಯನಿರ್ವಹಿಸುವ ರೀತಿಯಲ್ಲಿ ಬದಲಾವಣೆ‌ ಕಾಣಬೇಕು ಎಂದರು. ಇಂಡಿಯಾ ಜಸ್ಟೀಸ್ ವರದಿಯಂತೆ ಅತ್ಯುತ್ಯಮ ಪೊಲೀಸ್ ಪಡೆಗಳಲ್ಲಿ ಕರ್ನಾಟಕ ಮೂರನೇ ಸ್ಥಾನ ಪಡೆದಿದೆ. ಮುಂಬರುವ ದಿನಗಳಲ್ಲಿ ಮೊದಲ ಸ್ಥಾನಕ್ಕೆ ಬರಲು ಶ್ರಮಿಸುವಂತೆಯೂ ಕರೆ ನೀಡಿದರು. ಡ್ರಗ್ಸ್ ಮುಕ್ತ ರಾಜ್ಯ ಮಾಡಲು ಮಾದಕವಸ್ತಗಳ ವಿರೋಧಿ ಕಾರ್ಯಪಡೆ ರಚಿಸಲಾಗಿದೆ.

ಮಂಗಳೂರು ಗಲಭೆಪೀಡಿತ ನಗರವಾಗಿತ್ತು. ಪೊಲೀಸ್ ಅಧಿಕಾರಿಗಳನ್ನು ಬದಲಾವಣೆ ಮಾಡಿದ್ದರಿಂದ ನಿಯಂತ್ರಣಕ್ಕೆ ಬಂದಿದೆ. ಅಪರಾಧಗಳನ್ನು ತಡೆಗಟ್ಟಿ, ಉತ್ತಮ ತನಿಖೆ ಮಾಡಿ ಶಿಕ್ಷೆ ಕೊಡಿಸುವ ಇಚ್ಚಾಶಕ್ತಿಹೊಂದಬೇಕು. ಪೊಲೀಸರು ಒಳ್ಳೆಯ ಕೆಲಸ ಮಾಡಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರಲಿದೆ ಎಂದರು. ಕೆಲವು ಪೊಲೀಸರು ರಿಯಲ್ ಎಸ್ಟೇಟ್​ನೊಂದಿಗೆ ಶಾಮೀಲಾಗುತ್ತಾರೆ.

ಡ್ರಗ್ಸ್ ಪೆಡ್ಲರ್​ಗಳು, ಯಾರು ರೌಡಿಗಳು ಎಂದು ಗೊತ್ತಿದ್ದರೂ ಅವರನ್ನು ಬಂಧಿಸದೇ ಪೊಲೀಸರು ಬಿಟ್ಟುಬಿಡುತ್ತಾರೆ. ಇವರನ್ನು ಮೊಳಕೆಯಲ್ಲಿ ಕಿವುಚಿ ಹಾಕಬೇಕು. ಇಲ್ಲದಿದ್ದರೆ ದೊಡ್ಡ ಕ್ರಿಮಿನಲ್​ಗಳಾಗುತ್ತಾರೆ ಎಂದು ಎಚ್ಚರಿಸಿದರು. ಕ್ರಿಮಿನಲ್ಸ್ ಜೊತೆ ಸಂಬಂಧ ಬೇಡ:ಅಪರಾಧಿ ಹಾಗೂ ಕ್ರಿಮಿನಲ್​ಗಳೊಂದಿಗೆ ಸಂಬಂಧ ಇಟ್ಟುಕೊಳ್ಳಬಾರದು. ದಿನೇ ದಿನೇ ಪೊಲೀಸರೆಂದರೆ ಕ್ರಿಮಿನಲ್​ಗಳಿಗೆ ಭಯ ಕಡಿಮೆಯಾಗುತ್ತಿದೆ.

ಯಾಕೆ ಕಡಿಮೆಯಾಗಿದೆ ಎಂಬುದನ್ನು ಆತ್ಮಾಲೋಕನ ಮಾಡಿಕೊಳ್ಳಿ ಎಂದರು. ಗೃಹ ಸಚಿವ ಜಿ‌. ಪರಮೇಶ್ವರ್ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಹೊಸ ಹೆಜ್ಜೆ ಇಟ್ಟಿದ್ದೇವೆ. ‌ ಇಂದು ಸುವರ್ಣಾಕ್ಷರಗಳಲ್ಲಿ ಬರೆದ ದಿನವಾಗಲಿದೆ. ‌ ಬ್ರಿಟಿಷ್ ಕಾಲದಲ್ಲಿ ನಮ್ಮ ಪೊಲೀಸರಿಗೆ ನೀಡಲಾಗುತ್ತಿದ್ದ ಹಾಗೂ ಸ್ವಾತಂತ್ರ್ಯಾ ನಂತರ ಧರಿಸಿಕೊಳ್ಳುತ್ತಿದ್ದ ಪೊಲೀಸ್ ಕ್ಯಾಪ್​ನಲ್ಲಿ ಬದಲಾವಣೆ ಮಾಡಿದ್ದೇವೆ.

‌ 1973ರಲ್ಲಿ ಕರ್ನಾಟಕದಲ್ಲಿ ದಿ. ದೇವರಾಜ ಅರಸು ಸಿಎಂ ಆಗಿದ್ದಾಗ ಸ್ಲೋಚ್ ಕ್ಯಾಪ್ ನೀಡಲಾಗಿತ್ತು‌. ಈ ಕ್ಯಾಪ್ ಬದಲಾವಣೆ ಮಾಡುವಂತೆ ಈ ಹಿಂದೆ ಸರ್ಕಾರಕ್ಕೆ ಪ್ರಸ್ತಾವನೆ ಬಂದಿದ್ದವು. 2015ರಲ್ಲಿ ಕ್ಯಾಪ್ ಬದಲಾವಣೆ ಮಾಡುವ ಚಿಂತನೆಯಿತ್ತು. ಅದರೆ, ಕೈಗೂಡಲಿಲ್ಲ.

ಈ ಬಾರಿ ಕ್ಯಾಪ್ ಬದಲಾವಣೆಗೆ ಬೇಡಿಕೆ ಸಂಬಂಧ ಈ ಬಗ್ಗೆ ಅನ್ಯ ರಾಜ್ಯಗಳ ಪೊಲೀಸರು ಧರಿಸುವ ಕ್ಯಾಪ್ ಬಗ್ಗೆ ಅಧ್ಯಯನ ಮಾಡಲಾಗಿದೆ. ಅಂತಿಮವಾಗಿ ಸಿದ್ದರಾಮಯ್ಯ ಅವರು ಪಿ ಕ್ಯಾಪ್ ಅನ್ನ ಆಯ್ಕೆ ಮಾಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. ಕಾನ್​ಸ್ಟೇಬಲ್​ಗಳ ನೇಮಕಾತಿಗೆ ಅನುಮತಿ: ಕಳೆದ ಎರಡೂವರೆ ವರ್ಷಗಳಿಂದ ಒಂದೆರಡು ಘಟನೆಗಳು ಹೊರತುಪಡಿಸಿದರೆ ಕೋಮುಗಲಭೆ ಹಾಗೂ ಅಹಿತಕರ ಘಟನೆಗಳಿಗೆ ಆಸ್ಪದ ನೀಡಿಲ್ಲ ಎಂದ ಗೃಹ ಸಚಿವರು, ಕನಿಷ್ಠ ಎರಡು ವರ್ಷಗಳ ಕಾಲ ವರ್ಗಾವಣೆಯಾಗದಂತೆ ಕಾನೂನು ತಂದಿದ್ದೇವೆ. ಎಸ್ಪಿ ಹಂತದಲ್ಲಿ ಕೆಳ ವರ್ಗದ ಪೊಲೀಸರಿಗೆ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ 545 ಪಿಎಸ್ಐಗಳು ನೇಮಕಾತಿಗೊಂಡು ತರಬೇತಿಯಲ್ಲಿದ್ದಾರೆ.

402 ಮಂದಿ ಪಿಎಸ್ಐಗಳನ್ನ ನೇಮಕಾತಿ ಮಾಡಲಾಗಿದೆ. ಕೆಎಸ್​ಆರ್​ಪಿ ಸೇರಿದಂತೆ ರಾಜ್ಯದಲ್ಲಿ ಖಾಲಿಯಿರುವ 14 ಸಾವಿರ ಕಾನ್​ಸ್ಟೇಬಲ್​ಗಳ ಪೈಕಿ 8,500 ಪೊಲೀಸ್ ಕಾನ್​ಸ್ಟೇಬಲ್​ಗಳ ನೇಮಕಾತಿಗೆ ಸಿಎಂ ಸಿದ್ದರಾಮಯ್ಯ ಅವರು ಅನುಮತಿ ನೀಡಿದ್ದಾರೆ. ಇನ್ನೊಂದು ವಾರದಲ್ಲಿ ಈ ಕುರಿತು ಅಧಿಸೂಚನೆ ಹೊರಡಿಲಾಗುವುದು ಎಂದರು. ಪೊಲೀಸ್ ಗೃಹ ಯೋಜನೆಯಡಿ 15 ಸಾವಿರ ಪೊಲೀಸ್ ಕ್ಬಾಟರ್ಸ್​​ಗಳನ್ನು ನಿರ್ಮಿಸಲಾಗಿದೆ‌. ‌ ಇನ್ನೂ ಐದು ವರ್ಷಗಳ ಕಾಲ ಈ ಯೋಜನೆಯನ್ನ ವಿಸ್ತರಿಸುತ್ತೇವೆ ಎಂದರು.

ನಿರಂತರ ಕಾರ್ಯಾಚರಣೆ ಕೈಗೊಂಡರೂ ಡ್ರಗ್ಸ್ ಹಾವಳಿ ಹೆಚ್ಚಾಗುತ್ತಿದೆ‌‌. ಇದಕ್ಕೆ ಕಡಿವಾಣ ಹಾಕಲು ಮಾದಕದ್ರವ್ಯ ವಿರೋಧಿ ಕಾರ್ಯಪಡೆ ರಚಿಸಲಾಗಿದೆ. ಡ್ರಗ್ಸ್ ಪೆಡ್ಲರ್​ಗಳ ಮೇಲೆ ನಿಗಾ ವಹಿಸಲು ಸನ್ಮಿತ್ರ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಗಿದೆ ಎಂದರು. ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.

ಎ. ಸಲೀಂ ಮಾತನಾಡಿ, ರಾಜ್ಯ ಪೊಲೀಸ್ ಇಲಾಖೆಯಲ್ಲಿ ಶೇ. 85ರಷ್ಟು ಪೊಲೀಸ್ ಸಿಬ್ಬಂದಿಗಳ ಬಹುವರ್ಷಗಳ ಬೇಡಿಕೆಯನ್ನ ಸರ್ಕಾರ ಈಡೇರಿಸಿದೆ. ಇದರಿಂದ ಸಿಬ್ಬಂದಿಗಳ ಆತ್ಮವಿಶ್ವಾಸ ಹೆಚ್ಚಾಗಲಿದೆ ಎಂದರು. ಸಾಮಾಜಿಕ ಪಿಡುಗಾದ ಮಾದಕ ವ್ಯಸ್ಯನಕ್ಕೆ ಕಡಿವಾಣ ಹಾಕಲು ಮೊದಲ ಬಾರಿಗೆ ಪ್ರತ್ಯೇಕವಾಗಿ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆಗೆ ಇಂದು ಚಾಲನೆ ‌ನೀಡುತ್ತಿರುವುದು ಸಂತೋಷ ತಂದಿದೆ ಎಂದರು.

📚 Related News