2004ರ ಟೆಲಿವಿಶನ್ ಕಾಮಿಡಿ ಶೋ 'ಸಾರಾಭಾಯಿ ವರ್ಸಸ್ ಸಾರಾಭಾಯಿ'ಯಲ್ಲಿ ಇಂದ್ರವದನ್ ಸಾರಾಭಾಯಿ ಪಾತ್ರಕ್ಕೆ ಹೆಸರುವಾಸಿಯಾದ ನಟ ಸತೀಶ್ ಶಾ ಅಕ್ಟೋಬರ್ 25ರಂದು ತಮ್ಮ 74ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಹಿಂದಿನ ವರದಿಗಳು ನಟ ಕಿಡ್ನಿ ವೈಫಲ್ಯದಿಂದ ನಿಧನರಾದರು ಎಂದು ಸೂಚಿಸಿದ್ದವು. ಅದಾಗ್ಯೂ, ಸಾರಾಭಾಯಿ ವರ್ಸಸ್ ಸಾರಾಭಾಯಿ ಶೋನ ಸಹನಟ ರಾಜೇಶ್ ಕುಮಾರ್ ಸತೀಶ್ ಸಾವಿಗೆ ಕಾರಣವೇನು ಎಂದು ವಿವರಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ರೋಶೇಶ್ ಸಾರಾಭಾಯಿ ಪಾತ್ರ ನಿರ್ವಹಿಸಿದ್ದ ರಾಜೇಶ್ ಕುಮಾರ್, ''ಸತೀಶ್ ಶಾ ಹೃದಯಾಘಾತದಿಂದ ನಿಧನರಾದರು ಮತ್ತು ಈ ಹಿಂದೆ ವರದಿಯದಂತೆ ಮೂತ್ರಪಿಂಡದ ಸಮಸ್ಯೆಗಳಿಂದಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ. "ಕಳೆದ 24-25 ಗಂಟೆಗಳು ಎಷ್ಟು ಭಾವನಾತ್ಮಕವಾಗಿದ್ದವು ಎಂಬುದನ್ನು ನಾನು ನಿಮಗೆ ವಿವರಿಸಲು ಸಾಧ್ಯವಿಲ್ಲ.
ಅದನ್ನು ವ್ಯಕ್ತಪಡಿಸುವುದು ಸಹ ತುಂಬಾನೇ ಕಷ್ಟ. ಆದರೆ ಸತೀಶ್ ಜಿ ಅವರ ನಿಧನದ ಬಗ್ಗೆ ನಾನು ಕೆಲ ವಿಷಯಗಳನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಹೌದು, ಅವರಿಗೆ ಮೂತ್ರಪಿಂಡದ ಸಮಸ್ಯೆ ಇತ್ತು. ಆದರೆ, ಅವರು ಹೃದಯಾಘಾತದಿಂದ ನಿಧನರಾದರು" ಎಂದು ರಾಜೇಶ್ ಬಹಿರಂಗಪಡಿಸಿದರು. "ಅವರು ಮನೆಯಲ್ಲಿ ಊಟ ಮಾಡುತ್ತಿದ್ದರು, ನಂತರ ಅವರು.
ನಿಧನರಾದರು. ಕೆಲ ವರದಿಗಳು ಮೂತ್ರಪಿಂಡದ ಸಮಸ್ಯೆಯಿಂದ ನಿಧನರಾಗಿದ್ದಾರೆ ಎಂದು ಹೇಳುತ್ತಿರುವುದರಿಂದ ನಾನಿದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಕಿಡ್ನಿ ಸಮಸ್ಯೆಯನ್ನು ಈಗಾಗಲೇ ಬಹುತೇಕ ಪರಿಹರಿಸಲಾಗಿತ್ತು, ಅದು ನಿಯಂತ್ರಣದಲ್ಲಿತ್ತು. ದುರಾದೃಷ್ಟವಶಾತ್, ಹಠಾತ್ ಹೃದಯಾಘಾತ ಅವರನ್ನು ನಮ್ಮಿಂದ ದೂರ ಮಾಡಿತು" ಎಂದು ತಿಳಿಸಿದ್ದಾರೆ. ಇದಕ್ಕೂ ಮೊದಲು, ನಟ ಸತೀಶ್ ಶಾ ಅವರ ಮ್ಯಾನೇಜರ್ ರಮೇಶ್ ಕಡತಲ ಕೂಡಾ ಇದೇ ರೀತಿಯ ಮಾಹಿತಿ ಹಂಚಿಕೊಂಡಿದ್ದರು.
ಮನೆಯಲ್ಲಿ ಅವರು ಊಟ ಮಾಡುವಾಗ ಕುಸಿದು ಬಿದ್ದರು ಎಂದು ದೃಢಪಡಿಸಿದರು. "ಆಂಬ್ಯುಲೆನ್ಸ್ ಅವರ ನಿವಾಸವನ್ನು ತಲುಪಲು ಸುಮಾರು ಅರ್ಧ ಗಂಟೆ ತೆಗೆದುಕೊಂಡಿತು, ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಅವರು (ಸತೀಶ್) ಅಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು" ಎಂದು ತಿಳಿಸಿದ್ದರು. ಸತೀಶ್ ಶಾ ಅವರ ಅಂತ್ಯಕ್ರಿಯೆ ಬಾಂದ್ರಾದಲ್ಲಿ ನಡೆಯಿತು. ಬಾಲಿವುಡ್ ಮತ್ತು ಕಿರುತೆರೆಯ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಲು ಬಂದು ಸೇರಿದ್ದರು. ಅಂತ್ಯಕ್ರಿಯೆ ಸಂದರ್ಭದ ದೃಶ್ಯಗಳಲ್ಲಿ ಸಾರಾಭಾಯಿ ವರ್ಸಸ್ ಸಾರಾಭಾಯಿ ಸಹನಟರಾದ ರೂಪಾಲಿ ಗಂಗೂಲಿ, ಸುಮೀತ್ ರಾಘವನ್ ಮತ್ತು ರಾಜೇಶ್ ಕುಮಾರ್ ಬಹಳ ಭಾವನಾತ್ಮಕವಾಗಿ ಕಂಡುಬಂದರು.
ಖ್ಯಾತ ನಿರ್ಮಾಪಕಿ ಫರಾ ಖಾನ್, ಹಾಸ್ಯನಟ ಜಾನಿ ಲಿವರ್ ಮತ್ತು ಹಿರಿಯ ನಟ ಸುರೇಶ್ ಒಬೆರಾಯ್ ಕೂಡಾ ಉಪಸ್ಥಿತರಿದ್ದರು.








