ಭಾರತ - ಪಾಕ್​ ಯುದ್ದ ನಿಲ್ಲಿಸಿದ್ದು ನಾನೇ.. 54ನೇ ಬಾರಿಯೂ ಮಾತನಾಡಿದ ಟ್ರಂಪ್​; ಕಾಂಗ್ರೆಸ್​ ಟೀಕೆ

ಭಾರತ - ಪಾಕ್​ ಯುದ್ದ ನಿಲ್ಲಿಸಿದ್ದು ನಾನೇ.. 54ನೇ ಬಾರಿಯೂ ಮಾತನಾಡಿದ ಟ್ರಂಪ್​; ಕಾಂಗ್ರೆಸ್​ ಟೀಕೆ
By Published : October 29, 2025 at 12:10 PM IST

ನವದಹಲಿ: ಭಾರತ - ಪಾಕಿಸ್ತಾನದ ನಡುವಿನ ಯುದ್ಧವನ್ನು ವ್ಯಾಪಾರದ ಮೂಲಕ ನಿಲ್ಲಿಸಲಾಯಿತು ಎಂದು ಮತ್ತೊಮ್ಮೆ ಅಮೆರಿಕ ಅಧ್ಯಕ್ಷ ಟ್ರಂಪ್​ ಹೇಳಿಕೆ ನೀಡಿದ್ದಾರೆ. ಟ್ರಂಪ್​ ಅವರ ಈ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್​ ಕೂಡ ಪ್ರಧಾನಿಯ ನಡೆಯನ್ನು ಟೀಕಿಸಿದೆ. ಅಲ್ಲದೇ, ನವದೆಹಲಿಯಲ್ಲಿರುವ ಅವರ ಆತ್ಮೀಯ ಸ್ನೇಹಿತ ಅವರನ್ನು ಅಪ್ಪಿಕೊಳ್ಳಲು ಬಯಸದಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ಕುಟುಕಿದೆ. ಜಪಾನ್​ ಪ್ರವಾಸ ಕೈಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಭಾರತ- ಪಾಕಿಸ್ತಾನದ ಯುದ್ಧವನ್ನು ವ್ಯಾಪಾರದ ಮೂಲಕ ನಿಲ್ಲಿಸಿದೆ ಎಂದು ಮತ್ತೆ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಕಾಂಗ್ರೆಸ್​ ನಾಯಕ ಜೈರಾಮ್​​ ರಮೇಶ್​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇಲ್ಲಿಯವರೆಗೆ ಟ್ರಂಪ್​ 54 ಬಾರಿ ಈ ಕುರಿತು ಮಾತನಾಡಿದ್ದಾರೆ. ಅಮೆರಿಕ, ಕತಾರ್​, ಸೌದಿ ಅರೇಬಿಯಾ, ಈಜಿಪ್ಟ್​ ಮತ್ತು ಯುಕೆ ಹೀಗೆ ಹೋದಲ್ಲಿ ಬಂದಿಲ್ಲಿ ಈ ಬಗ್ಗೆ ಹೇಳಿಕೆಯನ್ನು ನೀಡುತ್ತಿದ್ದಾರೆ. ಇದೀಗ ಜಪಾನ್​ನಲ್ಲಿ ಉದ್ಯಮ ನಾಯಕರನ್ನು ಉದ್ದೇಶಿ ಮಾಡಿದ ಭಾಷಣದಲ್ಲೂ ಟ್ರಂಪ್, ಭಾರತ - ಪಾಕ್​ ಸಂಘರ್ಷವನ್ನು ನಿಲ್ಲಿಸಿದ್ದು ತಾನೇ ಎಂದು ಪುನರುಚ್ಛರಿಸಿದ್ದಾರೆ. ಜಪಾನ್​ನಲ್ಲಿ ಮಾತನಾಡಿದ ಟ್ರಂಪ್​. ಸುಂಕ ಹೇರಿಕೆ ಮೂಲಕ ಅನೇಕ ಯುದ್ಧಗಳನ್ನು ನಾನು ನಿಲ್ಲಿಸಿದ್ದೇನೆ ಎಂದು ಅವರು ಹೇಳಿದರು.

ನಿಜ ಹೇಳಬೇಕು ಎಂದರೆ, ಸುಂಕದಿಂದಾಗಿ ನಾನು ಜಗತ್ತಿಗೆ ಅತ್ಯುತ್ತಮ ಸೇವೆ ನೀಡಿದ್ದೇನೆ. ಭಾರತ ಮತ್ತು ಪಾಕಿಸ್ತಾನವನ್ನು ನೋಡಿದರೆ, ನಾವು ತೆಗೆದುಕೊಂಡ ಕ್ರಮ ತಿಳಿಯಲಿದೆ ಎಂದರು. ಇದೇ ವೇಳೆ ಭಾರತ- ಪಾಕ್​ ನಡುವಿನ ಸೇನಾ ಸಂಘರ್ಷದ ಸಮಯದಲ್ಲಿ 7 ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು. ಎರಡು ಪರಮಾಣು ರಾಷ್ಟ್ರಗಳು ಯುದ್ದ ಮುಂದುವರೆಸಿದ್ದವು. ಪ್ರಧಾನಿ ಮೋದಿ ಮತ್ತು ಪಾಕಿಸ್ತಾನದಲ್ಲಿರುವ ಪ್ರಧಾನಿ ಮತ್ತು ಫೀಲ್ಡ್ ಮಾರ್ಷಲ್​ಗೆ ನೀವು ಹೋರಾಡಲು ಹೋದರೆ ನಾವು ನಿಮ್ಮೊಂದಿಗೆ ಯಾವುದೇ ವ್ಯಾಪಾರ ಮಾಡುವುದಿಲ್ಲ ಎಂದು ಹೇಳಿದೆವು.

ಅವರು ಇಲ್ಲ ಇಲ್ಲ, ಒಂದು ವಿಷಯಕ್ಕೆ ಇನ್ನೊಂದಕ್ಕೆ ಯಾವುದೇ ಸಂಬಂಧವಿಲ್ಲ ಎಂದರು. ನಾನು ಎಲ್ಲದಕ್ಕೂ ಸಂಬಂಧವಿದೆ. ನೀವು ಸಂಘರ್ಷ ಮುಂದುವರೆಸಿದರೆ, ನಾನು ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದೆ ಇದಾದ 24ಗಂಟೆಯಲ್ಲಿ ಯುದ್ಧ ಅಂತ್ಯ ಕಂಡಿತು. ಇದು ಅದ್ಬುತ ಎಂದಿದ್ದಾರೆ. ಮೇನಲ್ಲಿ ನಡೆದ ಭಾರತ - ಪಾಕ್​ ಸಂಘರ್ಷದ ಕುರಿತು ಕಳೆದ ತಿಂಗಳು ವಿಶ್ವಸಂಸ್ಥೆಯಲ್ಲೂ ಕೂಡ ಡೊನಾಲ್ಡ್​ ಟ್ರಂಪ್​ ಮಾತನಾಡಿದ್ದು, ಯುದ್ಧ ನಿಲ್ಲಿಸಿದ್ದ ಪ್ರಶಂಸೆಯನ್ನು ತಮಗೆ ತಾವೆ ಪಡೆದುಕೊಂಡಿದ್ದರು.

ಟ್ರಂಪ್​ ಹಲವು ಬಾರಿ ಹೇಳಿಕೆ ನೀಡಿದ ಬಳಿಕ ಭಾರತ ಈ ವಿಚಾರದ ಕುರಿತು ಸ್ವಷ್ಟನೆ ನೀಡಿದ್ದು, ಎರಡು ದೇಶಗಳ ಸೇನಾ ಮುಖ್ಯಸ್ಥರ ಮಾತುಕತೆ ಬಳಿಕವೇ ಭಾರತ- ಪಾಕ್​ ಕದನ ವಿರಾಮ ಘೋಷಿಸಿತ್ತು ಎಂದು ಸ್ಪಷ್ಟಪಡಿಸಿದೆ. ಮೋದಿ ಸಹ ಇದೇ ಮಾತನ್ನು ಹೇಳಿದ್ದಾರೆ. ಆದರೆ ಟ್ರಂಪ್​ ಮಾತ್ರ ಎರಡೂ ರಾಷ್ಟ್ರಗಳ ನಡುವಣ ಯುದ್ಧ ನಿಲ್ಲಿಸಿದ್ದು ತಾವೇ ಎಂದು ಹೇಳಿಕೊಳ್ಳುತ್ತಲೇ ಇದ್ದಾರೆ.

📚 Related News