ರಷ್ಯಾ ಬೆನ್ನಲ್ಲೇ ಪರಮಾಣು ಚಾಲಿತ ಕ್ಷಿಪಣಿ ಪರೀಕ್ಷೆಗೆ ಮುಂದಾದ US: ತಕ್ಷಣವೇ ಕೆಲಸ ಶುರು ಮಾಡುವಂತೆ ಟ್ರಂಪ್​ ಆದೇಶ!

ರಷ್ಯಾ ಬೆನ್ನಲ್ಲೇ ಪರಮಾಣು ಚಾಲಿತ ಕ್ಷಿಪಣಿ ಪರೀಕ್ಷೆಗೆ ಮುಂದಾದ US: ತಕ್ಷಣವೇ ಕೆಲಸ ಶುರು ಮಾಡುವಂತೆ ಟ್ರಂಪ್​ ಆದೇಶ!
By Published : October 30, 2025 at 10:38 AM IST

ನವದೆಹಲಿ:ಬೇರೆ ದೇಶಗಳು ಪರಮಾಣು ಆಧರಿತ ಕ್ಷಿಪಣಿ ಪರೀಕ್ಷೆಗಳನ್ನು ನಡೆಸಿರುವುದರಿಂದ ಅಮೆರಿಕ ತಕ್ಷಣ ಪರಮಾಣು ಶಸ್ತ್ರಾಸ್ತ್ರಗಳನ್ನ ಸಾಗಿಸಬಲ್ಲ ಕ್ಷಿಪಣಿಗಳ ಪರೀಕ್ಷೆಯನ್ನು ಪ್ರಾರಂಭಿಸುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್​ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಅವರು, ಅಮೆರಿಕ ಬೇರೆ ದೇಶಕ್ಕಿಂತ ಹೆಚ್ಚಿನ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ. ತಮ್ಮ ಮೊದಲ ಅಧಿಕಾರದ ಅವಧಿಯಲ್ಲೇ ಅಸ್ತಿತ್ವದಲ್ಲಿರುವ ಶಸ್ತ್ರಾಸ್ತ್ರಗಳನ್ನು ಸಂಗ್ರಹ ಮತ್ತು ನವೀಕರಣ ಮಾಡಲಾಗಿದೆ. ಅವು ವಿನಾಶಕಾರಿ ಶಕ್ತಿ ಹೊಂದಿರುವ ಹಿನ್ನೆಲೆಯಲ್ಲಿ ನಾನು ಅದನ್ನು ಮಾಡಲು ಇಚ್ಛಿಸಲಿಲ್ಲ. ಆದರೆ, ನನಗೆ ಬೇರೆ ದಾರಿ ಇರಲಿಲ್ಲ.

ಪರಮಾಣು ಹೊಂದಿರುವ ದೇಶಗಳಲ್ಲಿ ರಷ್ಯಾ ಎರಡು ಮತ್ತು ಚೀನಾ ಮೂರನೇ ಸ್ಥಾನದಲ್ಲಿವೆ. ಮುಂದಿನ ಐದು ವರ್ಷಗಳೂ ಕೂಡಾ ಅವು ಅದೇ ಸ್ಥಾನದಲ್ಲಿ ಮುಂದುವರೆಯಲಿವೆ. ಬೇರೆ ದೇಶಗಳು ಪರಮಾಣು ಸಿಡಿತೆಲೆ ಹೊತ್ತೊಯ್ಯಬಹುದಾದ ಕ್ಷಿಪಣಿಗಳನ್ನು ಪರೀಕ್ಷಿಸುತ್ತಿರುವುದರಿಂದ ಇದೀಗ ನಾವು ಸಹ ಇಂತಹ ಪರೀಕ್ಷೆಗಳನ್ನು ಪ್ರಾರಂಭಿಸಲು ಸೂಚನೆ ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ. ವಾಷಿಂಗ್ಟನ್‌ನ ಎಚ್ಚರಿಕೆಗಳನ್ನು ಧಿಕ್ಕರಿಸಿ, ಮಾಸ್ಕೋ ಪರಮಾಣು ಸಾಮರ್ಥ್ಯದ ಪರಮಾಣು ಚಾಲಿತ ಕ್ಷಿಪಣಿಯನ್ನು ಬುಧವಾರ ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿಕೆ ಬೆನ್ನಲ್ಲೇ ಟ್ರಂಪ್​ ಈ ಕ್ರಮ ಕೈಗೊಂಡಿದ್ದಾರೆ. ಮಂಗಳವಾರ ರಷ್ಯಾದ ಪರಮಾಣು ಚಾಲಿತ ಬ್ಯೂರೆವೆಸ್ಟ್ನಿಕ್ ಕ್ರೂಸ್ ಕ್ಷಿಪಣಿ ಪರೀಕ್ಷೆ ನಡೆಸಿದ್ದು ಸೂಕ್ತವಲ್ಲ ಎಂದು ಟ್ರಂಪ್​ ಹೇಳಿದ್ದಾರೆ.

ಉಕ್ರೇನ್ ಜೊತೆಗಿನ ಸಂಘರ್ಷವನ್ನು ಕೊನೆಗೊಳಿಸುವತ್ತ ಗಮನಹರಿಸುವಂತೆ ಪುಟಿನ್ ಅವರಿಗೆ ಇದೇ ವೇಳೆ ಅವರು ಸಲಹೆ ನೀಡಿದ್ದಾರೆ. ಅಮೆರಿಕದ ಪರಮಾಣು ಸಾಮರ್ಥ್ಯಗಳನ್ನು ಎತ್ತಿ ತೋರಿಸಿರುವ ಅವರು, ನಮ್ಮಲ್ಲಿ ವಿಶ್ವದ ಶ್ರೇಷ್ಠ ಪರಮಾಣು ಜಲಾಂತರ್ಗಾಮಿ ನೌಕೆ ಇದೆ ಎಂದು ಅವರಿಗೆ ತಿಳಿದಿದೆ. ಅವರ ಜಲಾಂತರ್ಗಾಮಿ ನೌಕೆ 8,000 ಮೈಲಿಗಳಷ್ಟು ದೂರ ಹೋಗಬೇಕಾಗಿಲ್ಲ. ಅವರು ನಮ್ಮೊಂದಿಗೆ ಆಟವಾಡುತ್ತಿಲ್ಲ. ನಾವು ಅವರೊಂದಿಗೆ ಆಟವಾಡುತ್ತಿಲ್ಲ.

ನಾವು ಯಾವಾಗಲೂ ಕ್ಷಿಪಣಿಗಳನ್ನು ಪರೀಕ್ಷಿಸುತ್ತೇವೆ ಎಂದು ಟ್ರಂಪ್ ಏರ್ ಫೋರ್ಸ್ ಒನ್‌ನಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ. ಉಕ್ರೇನ್​ ಜೊತೆಗಿನ ಯುದ್ಧ ನಿಲ್ಲಿಸುವಂತೆ ಪುಟಿನ್​ಗೆ ಟ್ರಂಪ್​ ಕರೆ: ಪುಟಿನ್​ ಯುದ್ಧವನ್ನು ನಿಲ್ಲಿಸಬೇಕು. ಒಂದು ವಾರ ನಡೆಯಬೇಕಿದ್ದ ಯುದ್ಧ ಇದೀಗ ನಾಲ್ಕು ವರ್ಷ ಸಾಗಿದೆ. ಕ್ಷಿಪಣಿ ಪರೀಕ್ಷೆ ಬದಲಾಗಿ ಅವರು ಯುದ್ಧ ನಿಲ್ಲಿಸಬೇಕು ಎಂದು ಟ್ರಂಪ್​, ಪುಟಿನ್​ ಅವರನ್ನು ಒತ್ತಾಯಿಸಿದ್ದಾರೆ. ಮಾಸ್ಕೋ, ಕ್ರೂಸ್ ಕ್ಷಿಪಣಿಯಲ್ಲಿ ಬಳಸಬಹುದಾದ ಸಣ್ಣ ಗಾತ್ರದ ಪರಮಾಣು ವಿದ್ಯುತ್ ಘಟಕವನ್ನು ಅಭಿವೃದ್ಧಿಪಡಿಸಿದೆ.

ಇದು ಅನಿರೀಕ್ಷಿತ ಪಥವನ್ನು ಹೊಂದಿರುವ ಅತ್ಯಂತ ಕೆಳಮಟ್ಟದಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿರುವ ಕ್ಷಿಪಣಿಯಾಗಿದೆ ಎಂದು ಪುಟಿನ್​ ರಷ್ಯಾ ಸಂಸತ್ತಿನಲ್ಲಿ ತಿಳಿಸಿದ್ದಾರೆ. ಸ್ಟಾಕ್‌ಹೋಮ್ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ ಪ್ರಕಾರ, ರಷ್ಯಾ ಮತ್ತು ಅಮೆರಿಕ ಒಟ್ಟಾಗಿ ಎಲ್ಲಾ ಪರಮಾಣು ಶಸ್ತ್ರಾಸ್ತ್ರಗಳಲ್ಲಿ ಸುಮಾರು ಶೇ 90ರಷ್ಟು ಪಾಲು ಹೊಂದಿದೆ.

📚 Related News