ಬೆಳಗಾವಿ:ಪಾರ್ಟ್ ಟೈಂ ಕೆಲಸದ ಆಮಿಷವೊಡ್ಡಿ ಸಾವಿರಾರು ಮಹಿಳೆಯರಿಗೆ ವ್ಯಕ್ತಿಯೊಬ್ಬ ಕೋಟಿ ಕೋಟಿ ಹಣ ಪಂಗನಾಮ ಹಾಕಿರುವ ಆರೋಪ ಬೆಳಗಾವಿಯಲ್ಲಿ ಕೇಳಿ ಬಂದಿದೆ. ಬಡ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಕೋಟ್ಯಂತರ ರೂಪಾಯಿ ವಂಚಿಸಲಾಗಿದೆ. ಹೆಚ್ಚಾಗಿ ಗೃಹ ಲಕ್ಷ್ಮೀ ಯೋಜನೆ ಲಾಭ ಪಡೆಯುತ್ತಿರುವ ಮಹಿಳೆಯರನ್ನೇ ಟಾರ್ಗೆಟ್ ಮಾಡಿರುವ ವಂಚಕ ಲೂಸ್ ಅಗರಬತ್ತಿ ಪ್ಯಾಕ್ ಮಾಡಲು ಹೇಳಿ ಕೋಟ್ಯಂತರ ರೂ. ವಂಚಿಸಿದ್ದಾನೆ. ಮಹಾರಾಷ್ಟ್ರ ಮೂಲದ ಬಾಬಾಸಾಹೇಬ್ ಕೋಳೇಕರ್ ಎಂಬಾತನ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ.
ಮೊದಲಿಗೆ ಐಡಿ ಕಾರ್ಡ್ ಮಾಡಲು ಮಹಿಳೆಯರಿಂದ 2500 ರೂಪಾಯಿ ಹಣ ವಸೂಲಿ ಮಾಡಿರುವ ಆರೋಪಿ, ಒಂದು ಐಡಿ ಕಾರ್ಡ್ಗೆ 20 ದಿನಕ್ಕೆ 3 ಸಾವಿರ ಹಣ ಕೊಡುತ್ತೇನೆ ಅಂತ ನಂಬಿಸಿದ್ದ. ವಂಚಕನ ಮಾತಿಗೆ ಮರುಳಾಗಿ ಹಣದಾಸೆಗೆ ಬಿದ್ದ ಮಹಿಳೆಯರು 20ರಿಂದ 30ರವರೆಗೆ ಐಡಿ ಕಾರ್ಡ್ ಮಾಡಿಸಿದ್ದಾರೆ. ಅಂದಾಜು ಓರ್ವ ಮಹಿಳೆ 75 ಸಾವಿರಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 8 ಸಾವಿರ ಮಹಿಳೆಯರಿಂದ 12 ಕೋಟಿ ರೂಪಾಯಿ ವಂಚನೆ ಆಗಿದೆ. 20 ದಿನಕ್ಕೆ 3 ಸಾವಿರ, ದಿನಕ್ಕೆ 150 ರೂಪಾಯಿ ಕೊಡುವುದಾಗಿ ಹೇಳಿ ವಂಚಿಸಲಾಗಿದೆ.
ನಮಗೆ ಸೂಕ್ತ ನ್ಯಾಯ ಕೊಡಿಸಬೇಕು ಎಂದು ಬೆಳಗಾವಿಯ ಶಾಹಪುರ ಪೊಲೀಸ್ ಠಾಣೆಯಲ್ಲಿ ವಂಚನೆಗೆ ಒಳಗಾದ ಮಹಿಳೆಯರು ದೂರು ನೀಡಿದ್ದಾರೆ. ಅತ್ತ ಐಡಿಗೆ ತುಂಬಿದ ಹಣವೂ ಹೋಯಿತು. ಅಗರಬತ್ತಿ ಪ್ಯಾಕ್ ಮಾಡಿದ ಸಂಬಳವೂ ಇಲ್ಲದೇ ಮಹಿಳೆಯರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಸದ್ಯ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲು ಏರಿರುವ ಮಹಿಳೆಯರು ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಜಿಲ್ಲಾಧಿಕಾರಿ ಕಚೇರಿಗೂ ಆಗಮಿಸಿ ಪ್ರತಿಭಟನೆ ನಡೆಸಿ ತಮಗಾದ ಮೋಸದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೋಸಕ್ಕೆ ಒಳಗಾಗಿರುವ ಮಹಿಳೆಯರ ಮಾತುಗಳಿವು:ಈ ವೇಳೆ, ಈಟಿವಿ ಭಾರತದ ಜೊತೆಗೆ ಮಾತನಾಡಿದ ಮೋಸಕ್ಕೆ ಒಳಗಾದ ಮಹಿಳೆ ದೀಪಾ ಬೋರಗಾವಿ, "ನನ್ನ ಹತ್ತಿರ 6 ಸಾವಿರ ರೂ. ತುಂಬಿಸಿಕೊಂಡಿದ್ದಾನೆ. ನಾಲ್ಕು ತಿಂಗಳ ಕೆಲಸ ಮಾಡಿದ್ದೆ, ಒಂದು ತಿಂಗಳ ಪಗಾರ ಅಷ್ಟೇ ಕೊಟ್ಟಿದ್ದಾನೆ. ಮೂರು ತಿಂಗಳದ್ದು ಕೊಟ್ಟಿಲ್ಲ. ಕಷ್ಟಪಟ್ಟು ಕೆಲಸ ಮಾಡಿ, ಆಸೆಗೆ ಬಿದ್ದು ಹಣ ತುಂಬಿದ್ದೆವು.
ಈಗ ಎಲ್ಲ ಕಳೆದುಕೊಂಡಿದ್ದೇವೆ. ದಯವಿಟ್ಟು ನಮಗೆ ಬರಬೇಕಾದ ಹಣ ಕೊಡಿಸಿ" ಎಂದು ಕೇಳಿಕೊಂಡರು. ಶ್ರೀ ರಾಮಸೇನಾ ಹಿಂದೂಸ್ಥಾನ ಸಂಘಟನೆ ಅಧ್ಯಕ್ಷ ರಮಾಕಾಂತ ಕೊಂಡೂಸ್ಕರ್ ಮಾತನಾಡಿ, "ಮಹಾರಾಷ್ಟ್ರದ ಬಾಬಾಸಾಹೇಬ ಕೋಳೇಕರ್ ಎನ್ನುವ ವ್ಯಕ್ತಿ ಬೆಳಗಾವಿಗೆ ಬಂದು ಇಲ್ಲಿನ ಮಹಿಳೆಯರಿಗೆ ಮನೆಯಲ್ಲಿ ಕುಳಿತು ಮಾಡುವ ಕೆಲಸ ಕೊಡಿಸುವ ಆಸೆ ತೋರಿಸಿ ಮೋಸ ಮಾಡಿದ್ದಾನೆ. ಪ್ರತಿ ಐಡಿಗೆ 2,500 ರೂ. ಪಡೆದಿದ್ದಾನೆ.
ಒಬೊಬ್ಬ ಮಹಿಳೆ 10 ಐಡಿಗಳನ್ನು ಮಾಡಿದ್ದಾರೆ. ಬೆಳಗಾವಿ ನಗರ ಮತ್ತು ಗ್ರಾಮೀಣ ಭಾಗದ ಸುಮಾರು 8 ಸಾವಿರ ಮಹಿಳೆಯರಿಗೆ ಮೋಸ ಮಾಡಿ ಪರಾರಿ ಆಗಿದ್ದಾನೆ. ಆರೋಪಿಯನ್ನು ಬಂಧಿಸಿ ಆತನ ಆಸ್ತಿ ಜಪ್ತಿ ಮಾಡಿ ಮಹಿಳೆಯರಿಗೆ ಬರಬೇಕಾದ ಹಣವನ್ನು ಕೊಡಿಸಬೇಕು" ಎಂದು ಆಗ್ರಹಿಸಿದರು. ಪ್ರಕರಣದ ಬಗ್ಗೆ ಪೊಲೀಸ್ ಆಯುಕ್ತರ ಮಾಹಿತಿ: ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಮಾತನಾಡಿ, ಈ ಸಂಬಂಧ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಮೂಲದ ಆರೋಪಿ ಬಾಬಾಸಾಹೇಬ ಕೋಳೇಕರ್ ವಿರುದ್ಧ ಪ್ರಕರಣ ದಾಖಲಾಗಿದೆ. ವಿಶೇಷ ತಂಡ ರಚಿಸಲಾಗಿದ್ದು, ಶೀಘ್ರವೇ ಆರೋಪಿಯನ್ನು ಬಂಧಿಸಲಾಗುವುದು.
ಮಹಿಳೆಯರ ಹಣ ಮರಳಿಸಲು ಪ್ರಯತ್ನ ಮಾಡಲಾಗುವುದು. ಮಹಿಳಾ ಗೃಹ ಉದ್ಯೋಗ ಸಮೂಹ ಎಂಬ ಹೆಸರಿನ ಆಫೀಸ್ ತೆರೆದು ನೂರಾರು ಮಹಿಳೆಯರಿಗೆ ಆರೋಪಿ ಮೋಸ ಮಾಡಿದ್ದಾನೆ. ಇಂಥ ಮೋಸಗಳಿಗೆ ಜನ ಬಲಿ ಆಗಬಾರದು. ಎಚ್ಚರಿಕೆ ವಹಿಸುವಂತೆ ಕೋರಿದರು.








